ಮಾನವ ಹಸ್ತಕ್ಷೇಪ: ಕೆನ್ನಾಯಿ ಸಂತತಿಗೆ ಆಪತ್ತು

ಶನಿವಾರ, ಮಾರ್ಚ್ 23, 2019
31 °C

ಮಾನವ ಹಸ್ತಕ್ಷೇಪ: ಕೆನ್ನಾಯಿ ಸಂತತಿಗೆ ಆಪತ್ತು

Published:
Updated:
Prajavani

ಬೆಂಗಳೂರು: ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತವಾಗಿರುವ ಏಷ್ಯಾದ ಕೆನ್ನಾಯಿಗಳ ಸಂತತಿಯು ಮಾನವ ಹಸ್ತಕ್ಷೇಪ, ಭೂಬಳಕೆ ವಿನ್ಯಾಸ ಬದಲಾವಣೆ ಹಾಗೂ ನೈಸರ್ಗಿಕ ಆವಾಸ ಸ್ಥಾನಗಳು ಛಿದ್ರಗೊಂಡಿರುವುದರಿಂದ ಗಂಭೀರ ಅಪಾಯಕ್ಕೆ ಸಿಲುಕಿದೆ.

‘ಸೆಂಟರ್‌ ಫಾರ್‌ ವೈಲ್ಡ್‌ಲೈಫ್‌ ಸ್ಟಡೀಸ್‌’ ಸಂಸ್ಥೆಯ ವಿಜ್ಞಾನಿಗಳು ನಡೆಸಿದ ಅಧ್ಯಯನವು ಈ ಬಗ್ಗೆ ಬೆಳಕು ಚೆಲ್ಲಿದೆ. 49 ತಾಣಗಳಲ್ಲಿ ಕೆನ್ನಾಯಿಗಳು ಸ್ಥಳೀಯವಾಗಿ ಕಣ್ಮರೆಯಾಗುವ ಹಂತ ತಲುಪಿರುವುದು ಅಧ್ಯಯನದಿಂದ ಕಂಡುಬಂದಿದೆ. ನಿರ್ದಿಷ್ಟ ಭೂಪ್ರದೇಶದಲ್ಲಿ ಅವುಗಳ ಒಟ್ಟು ಅಸ್ತಿತ್ವದ ಮೇಲೂ ಗಂಭೀರವಾಗಿ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಸಂಸ್ಥೆಯ ವಿಜ್ಞಾನಿಗಳು ಕೆನ್ನಾಯಿಗಳ ಗುಂಪುಗಳನ್ನು ಗುರುತಿಸಲು ಸಸ್ತನಿಗಳನ್ನು ಗುರುತಿಸುವ ಅಪರೋಕ್ಷ ಸರ್ವೆ ವಿಧಾನ ಹಾಗೂ ಗ್ರಿಡ್‌ ಆಧರಿತ ವಿನ್ಯಾಸವನ್ನು ಅನುಸರಿಸಿ 16 ಸಂರಕ್ಷಿತ ಮೀಸಲು ಅರಣ್ಯಗಳಲ್ಲಿ ಹಾಗೂ ಅವುಗಳ ಅಕ್ಕಪಕ್ಕದ ಕಾಡುಗಳಲ್ಲಿ ಸಮಗ್ರ ಅಧ್ಯಯನ ನಡೆಸಿದ್ದರು. ಒಟ್ಟು 37 ಸಾವಿರ ಚದರ ಕಿ.ಮೀ. ಪ್ರದೇಶದಲ್ಲಿ ಈ ಅಧ್ಯಯನ ನಡೆದಿತ್ತು.

ಕೆನ್ನಾಯಿಗಳು ಎಷ್ಟು ಭೂಭಾಗದಲ್ಲಿ ವ್ಯಾಪಿಸಿವೆ ಎಂಬುದನ್ನು ಅಂದಾಜು ಮಾಡುವ ಕಾರ್ಯದಲ್ಲಿ ತೊಡಗಿದ ವಿಜ್ಞಾನಿಗಳು ಕಾಲಕ್ರಮೇಣ ಅವುಗಳ ಗುಂಪುಗಳ ಮಾದರಿ ಹೇಗೆ ಬದಲಾವಣೆ ಕಂಡಿತು, ಹೊಸ ಪ್ರದೇಶಕ್ಕೆ ವಲಸೆ ಹೋಗುವುದು ಮತ್ತು ಸ್ಥಳೀಯವಾಗಿ ಅವು ಕಣ್ಮರೆಯಾಗುವುದಕ್ಕೆ ಯಾವೆಲ್ಲ ಅಂಶಗಳು ಕಾರಣವಾದವು ಎಂಬ ಬಗ್ಗೆಯೂ ವಿಶ್ಲೇಷಣೆ ನಡೆಸಿದ್ದರು.

ಮಾನವ ಚಟುವಟಿಕೆಯಿಂದಾಗಿ ಕೆನ್ನಾಯಿ ಸಂತತಿ ಭಾರಿ ಅಪಾಯ ಎದುರಿಸುತ್ತಿವೆ. ಜಾನುವಾರುಗಳಿಂದಲೂ ಇವುಗಳ ಸಂತತಿ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಜಾನುವಾರುಗಳ ಹಿಂಡು, ಅವುಗಳ ಜೊತೆಗಿರುವ ದನಗಾಹಿಗಳು ಮತ್ತು ಸಾಕುನಾಯಿಗಳು ಕೂಡಾ ಕೆನ್ನಾಯಿಗಳ ಸಂಖ್ಯೆ ಕ್ಷೀಣಿಸುವುದಕ್ಕೆ ಕಾರಣವಾಗುತ್ತಿವೆ. ಜಾನುವಾರುಗಳು ಮೇವಿಗಾಗಿ ಸಸ್ಯಾಹಾರಿ ಕಾಡುಪ್ರಾಣಿಗಳಿಗೆ ಪೈಪೋಟಿ ನೀಡುತ್ತವೆ. ಇದರಿಂದಾಗಿ ಕೆನ್ನಾಯಿ ಬೇಟೆಯಾಡುವ ಕಾಡುಪ್ರಾಣಿಗಳ ನೆಲೆಯೂ ಕ್ಷೀಣಿಸುತ್ತಿದೆ. ಒಟ್ಟಾರೆಯಾಗಿ ಕೆನ್ನಾಯಿಗಳ ಆವಾಸ ಸ್ಥಾನಗಳ ಗುಣಮಟ್ಟವೂ ಕಡಿಮೆಯಾಗುತ್ತಿದೆ.

ನಿರ್ದಿಷ್ಟ ಮೀಸಲು ಅರಣ್ಯಗಳಲ್ಲಿ ಕಾಡುನಾಯಿಗಳ ಆವಾಸ ಸ್ಥಾನಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಅವುಗಳಿಗೆ ಹೆಚ್ಚಿನ ರಕ್ಷಣೆ ಒದಗಿಸಬೇಕು. ಅರಣ್ಯ ಕವಚವನ್ನು, ಸಂರಕ್ಷಿತ ಅರಣ್ಯದ ಆಸುಪಾಸಿನಲ್ಲಿ ವನ್ಯಜೀವಿ ಓಡಾಟಕ್ಕೆ ಅವಕಾಶ ಕಲ್ಪಿಸುವ ಆವಾಸಸ್ಥಾನಗಳ ವ್ಯಾಪ್ತಿಯನ್ನು ಹೆಚ್ಚಿಸಬೇಕು. ಇಂತಹ ಕ್ರಮಗಳಿಂದ ರಾಜ್ಯದ ಘಟ್ಟ ಪ್ರದೇಶಗಳಲ್ಲಿ ಕಾಡು ನಾಯಿಗಳ ಸಂತತಿಯನ್ನು ಉಳಿಸಿಕೊಳ್ಳಬಹುದು ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಈ ಅಧ್ಯಯನದ ಕುರಿತು ವಿಜ್ಞಾನಿ ಅರ್ಜುನ ಶ್ರೀವತ್ಸ ಅವರು ರಚಿಸಿದ ವೈಜ್ಞಾನಿಕ ಪ್ರಬಂಧವು ‘ನೇಚರ್‌’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ವಿಜ್ಞಾನಿಗಳಾದ ಡಾ.ಕೆ.ಉಲ್ಲಾಸ ಕಾರಂತ, ಡಾ.ಎನ್‌.ಸಾಂಬಾ ಕುಮಾರ್‌ ಹಾಗೂ ಡಾ.ಮದನ್‌ ಕೆ.ಓಲಿ ಅವರು ಈ ಪ್ರಬಂಧದ ಸಹಲೇಖಕರಾಗಿದ್ದಾರೆ.

ಎಲ್ಲೆಲ್ಲಿ ಅಧ್ಯಯನ?
ಭೀಮಗಡ, ಕಾಳಿ, ಶರಾವತಿ, ಮೂಕಾಂಬಿಕಾ, ಸೋಮೇಶ್ವರ, ಕುದುರೆಮುಖ, ಶೆಟ್ಟಿಹಳ್ಳಿ, ಭದ್ರಾ, ಪುಷ್ಪಗಿರಿ, ತಲಕಾವೇರಿ, ಬ್ರಹ್ಮಗಿರಿ, ನಾಗರಹೊಳೆ, ಬಂಡೀಪುರ, ಬಿಳಿಗಿರಿ ರಂಗಸ್ವಾಮಿ ದೇವಸ್ಥಾನ ಬೆಟ್ಟ, ಕಾವೇರಿ, ಮಲೆಮಹದೇಶ್ವರ ಬೆಟ್ಟ, ಬನ್ನೇರುಘಟ್ಟ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !