ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ 1 ರಿಂದ ಹೋಟೆಲ್‌ ಆರಂಭ?

Last Updated 25 ಮೇ 2020, 19:56 IST
ಅಕ್ಷರ ಗಾತ್ರ

ಬೆಂಗಳೂರು: ಕೆಲವು ಷರತ್ತಿಗೆ ಒಳಪಟ್ಟು ಜೂನ್‌ 1ರಿಂದ ರಾಜ್ಯದಲ್ಲಿ ಹೋಟೆಲ್ ಹಾಗೂ ರೆ‌ಸ್ಟೋರೆಂಟ್‌ಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ.

ಲಾಡ್ಜಿಂಗ್‌ ವ್ಯವಸ್ಥೆ ಹೊಂದಿರುವ ಹೋಟೆಲ್‌‌ಗಳು ಮತ್ತು ಇತರ ಹೋಟೆಲ್‌‌ಗಳಿಗೆ ಪ್ರತ್ಯೇಕ ನಿಯಮಗಳನ್ನು ವಿಧಿಸಲಾಗುವುದು. ಅವುಗಳನ್ನು ಪಾಲಿಸಿದರೆ ಮಾತ್ರ ಅವಕಾಶ ನೀಡಲಾಗುವುದು ಎಂದು ಷರತ್ತು ವಿಧಿಸಿ ಅನುಮತಿ ಕೊಡುವ ಚಿಂತನೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಹೋಟೆಲ್‌‌ಗಳು ಬಾಗಿಲು ಹಾಕಿ ಎರಡು ತಿಂಗಳುಗಳು ಕಳೆದಿದೆ. ಹೋಟೆಲ್‌‌ ಉದ್ಯಮದ ಅಸ್ತಿತ್ವದ ಮೇಲೆ ಅಂಧಕರ ಕವಿದಿದೆ. ರಾಜ್ಯದಲ್ಲಿ ಸುಮಾರು 50 ಸಾವಿರ ಹೋಟೆಲ್‌‌ಗಳಿದ್ದು, 2 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಇದನ್ನೇ ನೆಚ್ಚಿ ಬದುಕು ನಡೆಸುತ್ತಿದ್ದರು. ಕಳೆದ ಎರಡು ತಿಂಗಳುಗಳಿಂದ ಈ ಕಾರ್ಮಿಕರು ಆದಾಯವಿಲ್ಲದೇ ಅತಂತ್ರರಾಗಿದ್ದಾರೆ. ಪಾರ್ಸೆಲ್‌ ವ್ಯವಸ್ಥೆಗೆ ಸರ್ಕಾರ ಅವಕಾಶ ನೀಡಿದೆಯಾದರೂ ಅದರಿಂದ ನಷ್ಟವೇ ಹೆಚ್ಚಾಗುತ್ತಿದೆ ಎಂಬುದು ಉದ್ಯಮದಾರರ ಅಳಲು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹೋಟೆಲ್‌‌ ಆರಂಭಕ್ಕೆ ಉದ್ಯಮಿಗಳೂ ಒತ್ತಡ ಹೇರಿದ್ದಾರೆ. ಈ ವಿಚಾರವಾಗಿ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರದ ಗಮನಕ್ಕೂ ತರುವ ಪ್ರಯತ್ನ ನಡೆಸಿದ್ದಾರೆ.

ಮುಖ್ಯಮಂತ್ರಿ ಕಚೇರಿ ಮೂಲಗಳ ಪ್ರಕಾರ, ಜೂನ್‌ 1 ರಿಂದ ಹೋಟೆಲ್‌‌ಗಳಿಗೆ ಷರತ್ತುಗಳನ್ನು ವಿಧಿಸಿ ಕಾರ್ಯಾರಂಭ ನಡೆಸಲು ಅವಕಾಶ ನೀಡಬಹುದು. ಕೇಂದ್ರ ಸರ್ಕಾರದಿಂದ ಅಂತಹದ್ದೊಂದು ಸೂಚನೆ ಬರಬಹುದು. ವಿವಿಧ ರಾಜ್ಯಗಳಿಂದ ಜನರ ಓಡಾಟ ಆರಂಭವಾಗಿದೆ. ವಾಣಿಜ್ಯೋದ್ಯಮದ ಉದ್ದೇಶ ಅವರು ನಗರಗಳಲ್ಲಿ ತಂಗಬೇಕಾಗುತ್ತದೆ. ಅವರಿಗೆ ಲಾಡ್ಜ್‌ ಮತ್ತು ಹೋಟೆಲ್‌ಲ್‌ಗಳ ಅವಶ್ಯಕತೆ ಇರುತ್ತದೆ. ಆದ್ದರಿಂದ ಅವಕಾಶ ನೀಡುವ ಸಾಧ್ಯತೆಯೇ ಹೆಚ್ಚು ಎಂದು ಮೂಲಗಳು ತಿಳಿಸಿವೆ.

ಕೋವಿಡ್‌: ಮತ್ತೆ ಇಬ್ಬರು ಸಾವು

ಕೋವಿಡ್‌–19 ಸೋಂಕಿನಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 55 ವರ್ಷದ ಮಹಿಳೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 43 ವರ್ಷದ ಪುರುಷ ಮೃತಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಮೃತರ ಸಂಖ್ಯೆ 44ಕ್ಕೆ ತಲುಪಿದೆ.

ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದ 34 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತೀವ್ರ ಉಸಿರಾಟದ ತೊಂದರೆ ಎದುರಿಸುತ್ತಿದ್ದ ನೆಲಮಂಗಲದ ಮಹಿಳೆಯನ್ನು ಇದೇ 19ರಂದು ತುಮಕೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ರಾತ್ರಿ ಅವರು ಮೃತಪಟ್ಟರು. ಬೆಳ್ತಂಗಡಿ ತಾಲ್ಲೂಕು ವೇಣೂರಿನ ಗೂಡ್ಸ್ ರಿಕ್ಷಾ ಚಾಲಕರಾಗಿದ್ದ ವ್ಯಕ್ತಿ ದೀರ್ಘ ಕಾಲದಿಂದ ಯಕೃತ್‌ ಮತ್ತು ಮೂತ್ರಕೋಶ ತೊಂದರೆಯಿಂದ ಬಳಲುತ್ತಿದ್ದರು. ಇದೇ 23ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು ಅದೇ ದಿನ ಮೃತಪಟ್ಟಿದ್ದರು. ಸೋಮವಾರ ಅವರ ಪರೀಕ್ಷೆಯ ವರದಿ ಬಂದಿದ್ದು, ಅವರಿಗೆ ಕೊರೊನಾ ಸೋಂಕಿದ್ದುದು ದೃಢಪಟ್ಟಿದೆ.

ಸೋಮವಾರ ಹೊಸದಾಗಿ 93 ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 69 ಪ್ರಕರಣಗಳು ಮಹಾರಾಷ್ಟ್ರದಿಂದ ವಾಪಸ್ ಆಗಿರುವವರೇ ಇದ್ದಾರೆ. ಉಡುಪಿಯಲ್ಲಿ 32, ಮಂಡ್ಯದಲ್ಲಿ 16, ಯಾದಗಿರಿಯಲ್ಲಿ 15, ಬೆಂಗಳೂರು ನಗರದಲ್ಲಿ 8, ದಕ್ಷಿಣ ಕನ್ನಡ, ಧಾರವಾಡಗಳಲ್ಲಿ ತಲಾ 4, ಬಳ್ಳಾರಿಯಲ್ಲಿ 3, ಮಂಡ್ಯ, ಕೋಲಾರಗಳಲ್ಲಿ ತಲಾ 2, ರಾಮನಗರ, ಬೆಳಗಾವಿ, ಹಾಸನ, ತುಮಕೂರು, ವಿಜಯಪುರ, ಉತ್ತರ ಕನ್ನಡಗಳಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,182ಕ್ಕೆ ಏರಿಕೆಯಾಗಿದೆ. ಇದುವರೆಗೆ ಹಸಿರು ವಲಯವಾಗಿದ್ದ ರಾಮನಗರ ಜಿಲ್ಲೆಗೂ ತಮಿಳುನಾಡಿನಿಂದ ವಾಪಸಾದ ಕುಟುಂಬದ 2 ವರ್ಷದ ಬಾಲಕನ ಮೂಲಕ ಸೋಂಕು ವ್ಯಾಪಿಸಿದೆ. ಸದ್ಯ ಚಾಮರಾಜನಗರ ಜಿಲ್ಲೆ ಬಿಟ್ಟು ಇತರ ಎಲ್ಲ ಜಿಲ್ಲೆಗಳಿಗೂ ಸೋಂಕು ವ್ಯಾಪಿಸಿದಂತಾಗಿದೆ.

ಚಾಮರಾಜನಗರ ಏಕೈಕ ಹಸಿರು ಜಿಲ್ಲೆ

ಚಾಮರಾಜನಗರ: ರಾಜ್ಯದಲ್ಲಿ ‘ಕೋವಿಡ್‌–19’ ಮುಕ್ತವಾಗಿರುವ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಚಾಮರಾಜನಗರ ಪಾತ್ರವಾಗಿದೆ. ಜಿಲ್ಲೆಯ ಜನರು ಫೇಸ್‌ಬುಕ್‌ ಹಾಗೂ ವಾಟ್ಸ್ಆ್ಯಪ್‌ನಲ್ಲಿ ಈ ಸಂತಸ ಹಂಚಿಕೊಳ್ಳುತ್ತಿದ್ದು, ‘ರಾಜಕಾರಣಿಗಳಿಗೆ ಮಾತ್ರವಲ್ಲ; ಚಾಮರಾಜನಗರ ಜಿಲ್ಲೆ ಎಂದರೆ ಕೊರೊನಾಕ್ಕೂ ಭಯ!’, ‘ರೋಚಕ 20–20 ಪಂದ್ಯದಲ್ಲಿ ಚಾಮರಾಜನಗರಕ್ಕೆ ಗ್ರೀನ್‌ ಜೋನ್‌ ಕಪ್‌’ ಎಂಬ ಸಂದೇಶ ಹಾಕಿದ್ದಾರೆ.ಜಿಲ್ಲಾಡಳಿತ ಕೈಗೊಂಡಿದ್ದ ಕಟ್ಟುನಿಟ್ಟಿನ ಕ್ರಮಗಳಿಗೂ ರಾಜ್ಯದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ‘ಬೀಗುವ ಸಮಯವಿದಲ್ಲ. ಹಸಿರು ವಲಯವಾಗಿ ಉಳಿಸಿಕೊಳ್ಳುವ ದೊಡ್ಡ ಸವಾಲು ನಮ್ಮ ಮುಂದಿದ್ದು, ಜವಾಬ್ದಾರಿಯೂ ಹೆಚ್ಚಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT