ಹೆದ್ದಾರಿ ಮತ್ತೆ ಕುಸಿಯುವ ಭೀತಿ

7
ರಾಷ್ಟ್ರೀಯ ಹೆದ್ದಾರಿ ಕುಸಿಯುವ ಭೀತಿ

ಹೆದ್ದಾರಿ ಮತ್ತೆ ಕುಸಿಯುವ ಭೀತಿ

Published:
Updated:

ಮಂಗಳೂರು: ಘಟ್ಟ ಪ್ರದೇಶದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸದಸ್ಯರು, ಪೊಲೀಸರು, ಇತರೆ ಇಲಾಖೆಗಳ ಸಿಬ್ಬಂದಿ ಮತ್ತು ಸ್ಥಳೀಯ ಸ್ವಯಂಸೇವಕರು ಮಾತ್ರ ಪ್ರಯಾಸದಿಂದಲೇ ಜೋಡುಪಾಲದಿಂದ ಮದೆನಾಡುವರೆಗೆ ಹೋಗಿ ಬಂದಿದ್ದಾರೆ. ಅವರು ನೀಡುವ ಮಾಹಿತಿ ಪ್ರಕಾರ, ಈ ಮಾರ್ಗದಲ್ಲಿ ಮತ್ತೆ ಭೂಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚಿದೆ.

‘ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೇತುವೆಗಳು, ಮೋರಿಗಳಿಗೆ ಹಾನಿಯಾಗಿದೆ. ಹಲವು ಸ್ಥಳಗಳಲ್ಲಿ ರಸ್ತೆಯ ಅಂಚು ಕೊರೆದು ನದಿ ಸೇರಿದೆ. ಅಲ್ಲಿ ಈಗ ಬಿದ್ದಿರುವ ಮಣ್ಣು ತೆರವು ಮಾಡಲು ಮುಂದಾದರೆ ರಸ್ತೆ ಕೆಳಕ್ಕೆ ಕುಸಿದುಹೋಗುವ ಅಪಾಯವಿದೆ. ರಸ್ತೆಯಲ್ಲಿರುವ ಮಣ್ಣು ತೆರವು ಮಾಡಲು ತಿಂಗಳುಗಳೇ ಬೇಕಾಗಬಹುದು’ ಎನ್ನುತ್ತಾರೆ ರಕ್ಷಣಾ ತಂಡದ ಸದಸ್ಯರು.

ಮಧ್ಯದಲ್ಲಿ ಸಿಲುಕಿದ ಕಾರು, ಜೆಸಿಬಿ: ಕಳೆದ ವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ ತಕ್ಷಣವೇ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ವ್ಯವಸ್ಥೆ ಮಾಡಿದ್ದರು.

ಕಾರ್ಯಾಚರಣೆಗೆ ತಂದಿದ್ದ ನಾಲ್ಕು ಜೆಸಿಬಿ ಯಂತ್ರಗಳು ಮತ್ತು ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರ ಎರಡು ಕಾರುಗಳು ರಸ್ತೆಯ ಮಧ್ಯದಲ್ಲೇ ಸಿಲುಕಿವೆ.

 ‘ಜೋಡುಪಾಲದ ಕಡೆಯಿಂದ ರಸ್ತೆಯಲ್ಲಿ ಮುಂದಕ್ಕೆ ಸಾಗಲು ಆಗುತ್ತಿಲ್ಲ. ಭಾನುವಾರ ಮದೆನಾಡು ಕಡೆಯಿಂದ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. 100 ಮೀಟರ್‌ ದೂರದವರೆಗೆ ಮಣ್ಣು ತೆರವು ಮಾಡಲು ಮಾತ್ರ ಸಾಧ್ಯವಾಗಿದೆ. ಹಾನಿ ಅಂದಾಜು ಕುರಿತು ಸೋಮವಾರ ತೀರ್ಮಾನಕ್ಕೆ ಬರಲಾಗುವುದು’ ಎಂದು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ
ತಿಳಿಸಿದರು.

ಶಿರಾಡಿಯಲ್ಲೂ ವಿಳಂಬ: ಶಿರಾಡಿ ಘಾಟಿ (ರಾಷ್ಟ್ರೀಯ ಹೆದ್ದಾರಿ 75) ಮಾರ್ಗದಲ್ಲೂ ಭೂಕುಸಿತ ನಿಂತಿಲ್ಲ. ಪದೇ ಪದೇ ಮಣ್ಣು ಕುಸಿದು ರಸ್ತೆಯ ಮೇಲೆ ಬೀಳುತ್ತಿದೆ. ಈಗ ಬಿದ್ದಿರುವ ಮಣ್ಣನ್ನು ತೆರವು ಮಾಡಿದರೆ ಮತ್ತಷ್ಟು ಗುಡ್ಡ ಕುಸಿದು ಬೀಳುವ ಸಂಭವವಿದೆ. ಈ ರಸ್ತೆಯ ಪರಿಶೀಲನೆ ನಡೆಸಿರುವ ಅಧಿಕಾರಿಗಳು, ಮಳೆ ಸಂಪೂರ್ಣವಾಗಿ ನಿಂತ ಬಳಿಕವೇ ಅಲ್ಲಿ ತೆರವು ಕಾರ್ಯಾಚರಣೆ ನಡೆಸಲು ನಿರ್ಧರಿಸಿದ್ದಾರೆ.

ಇತ್ತೀಚೆಗೆ ಭೂಕುಸಿತ ಸಂಭವಿಸಿದ ಬಳಿಕ ಆದೇಶವೊಂದನ್ನು ಹೊರಡಿಸಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌, ಶನಿವಾರದವರೆಗೂ (ಆಗಸ್ಟ್‌ 25) ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದರು. ಈ ನಿಷೇಧ ಎರಡರಿಂದ ಮೂರು ತಿಂಗಳು ವಿಸ್ತರಣೆಯಾಗುವ ಸಾಧ್ಯತೆ ಇದೆ.

ಜನರು ಸಹಕರಿಸಬೇಕು
‘ಸಾಮಾನ್ಯ ಮಳೆಗಾಲ ಹಾಗೂ ಪ್ರಕೃತಿ ವಿಕೋಪದ ನಡುವೆ ವ್ಯತ್ಯಾಸ ಇರುತ್ತದೆ. ಈಗ ಪ್ರಕೃತಿ ವಿಕೋಪ ಸಂಭವಿಸಿದೆ. ಈ ಸಮಯದಲ್ಲಿ ಸಂಪಾಜೆ, ಶಿರಾಡಿ ಎರಡೂ ಘಾಟಿಗಳ ಮಾರ್ಗವನ್ನು ದೀರ್ಘ ಕಾಲ ಬಂದ್‌ ಮಾಡುವುದು ಅನಿವಾರ್ಯವಾಗಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜನರು ಸರ್ಕಾರದ ಜೊತೆ ಸಹಕರಿಸಬೇಕು. ಸಾವು, ನೋವು ತಡೆಯುವ ಉದ್ದೇಶದಿಂದ ಸಂಚಾರ ನಿರ್ಬಂಧಿಸಲಾಗುವುದು ಎಂದು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !