ಶನಿವಾರ, ಫೆಬ್ರವರಿ 27, 2021
31 °C

ಜಾರಕಿಹೊಳಿ ಸಹೋದರರು ದೊಡ್ಡವರು; ಪಕ್ಷದ ಒಳಿತಿಗೆ ತ್ಯಾಗಕ್ಕೆ ಸಿದ್ಧ: ಹೆಬ್ಬಾಳಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಜಾರಕಿಹೊಳಿ ಸಹೋದರರು ದೊಡ್ಡವರು ಹಾಗೂ ಸಮರ್ಥರಿದ್ದಾರೆ. ಅವರ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ’ ಎಂದು ಗ್ರಾಮೀಣ ಕ್ಷೇತ್ರದ ಶಾಸಕಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

‘ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ ಅಧ್ಯಕ್ಷತೆಯಲ್ಲಿ ಈಚೆಗೆ ಬೆಂಗಳೂರಿನಲ್ಲಿ ಕರೆದಿದ್ದ ಸಭೆಯಲ್ಲಿ, ತಾಲ್ಲೂಕು ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ವಿಷಯದಲ್ಲಿ ಸಚಿವರಾದ ರಮೇಶ ಜಾರಕಿಹೊಳಿ ಹಾಗೂ ಡಿ.ಕೆ. ಶಿವಕುಮಾರ್‌ ನಡುವೆ ವಾಗ್ದಾದವಾಗಿಲ್ಲ. ಮುಂಬರುವ ಲೋಕಸಭೆ ಚುನಾವಣೆಗೆ ಜಿಲ್ಲೆಯ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ವಾಗ್ವಾದವಾಯಿತು’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಮಂಗಳವಾರ ತಿಳಿಸಿದರು.

‘ಒಬ್ಬೊಬ್ಬರು ಅವರವರಿಗೆ ಬೇಕಾದವರಿಗೆ ಟಿಕೆಟ್ ಕೇಳಿದರು. ಈ ವೇಳೆ, ಒಬ್ಬರು ಅಡ್ಡಿಪಡಿಸಿದರು. ಆಗ ಮಧ್ಯಪ್ರವೇಶಿಸಿದ ಡಿ.ಕೆ. ಶಿವಕುಮಾರ್‌, ಎಲ್ಲರ ಅಭಿಪ್ರಾಯವನ್ನೂ ಆಲಿಸಬೇಕಾಗುತ್ತದೆ ಎಂದು ಹೇಳಿದರು. ಆಗ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ನನ್ನ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ಭಿನ್ನಾಭಿಪ್ರಾಯದ ವಿಷಯ ಪ್ರಸ್ತಾಪವಾಗಲೇ ಇಲ್ಲ. ಅಲ್ಲಿ ನಡೆದಿದ್ದೊಂದು; ಪ್ರಚಾರ ಪಡೆದದ್ದು ಮತ್ತೊಂದು’ ಎಂದು ಸ್ಪಷ್ಟಪಡಿಸಿದರು.

‘ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ. ಅಭ್ಯರ್ಥಿಯ ಆಯ್ಕೆ ಸ್ವಾತಂತ್ರ್ಯವನ್ನು ರಾಜ್ಯ ಮುಖಂಡರಿಗೆ ನೀಡಲಾಗಿದೆ. ಸ್ಥಳೀಯ ಮುಖಂಡರ ಜೊತೆ ಇರುವ ಭಿನ್ನಾಭಿಪ್ರಾಯ ಇಲ್ಲಿಗಷ್ಟೇ ಸೀಮಿತವಾದುದು. ಇದು ಲೋಕಸಭೆ ಚುನಾವಣೆ, ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರುವುದಿಲ್ಲ. ಪಕ್ಷದ ಒಳಿತಿಗಾಗಿ ತಗ್ಗಿ–ಬಗ್ಗಿ ನಡೆಯಲು ಹಾಗೂ ಎಂತಹ ತ್ಯಾಗಕ್ಕೂ ನಾನು ಸಿದ್ಧವಿದ್ದೇನೆ. ಅಂತೆಯೇ, ನನ್ನ ಮತ ಕ್ಷೇತ್ರದ ವಿಚಾರ ಬಂದಾಗ ನ್ಯಾಯಕ್ಕಾಗಿ ಹೋರಾಡುತ್ತೇನೆ’ ಎಂದೂ ಹೇಳಿದರು.

‘ಲೋಕಸಭಾ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರು ಹೇಳುವ ಅಭ್ಯರ್ಥಿಗೆ ಬೆಂಬಲ ನೀಡುತ್ತೇನೆ’ ಎಂದರು.

ತಾಲ್ಲೂಕು ಪಿಎಲ್‌ಡಿ ಬ್ಯಾಂಕ್ ಚುನಾವಣೆ ವಿಷಯದಲ್ಲಿ ಲಕ್ಷ್ಮಿ ಹಾಗೂ ಜಾರಕಿಹೊಳಿ ಸಹೋದರರ ನಡುವೆ ಆರೋಪ–ಪ್ರತ್ಯಾರೋಪಗಳು ನಡೆದಿದ್ದವು. ವರಿಷ್ಠರು ಕರೆದಿದ್ದ ಸಂದಾನ ಸಭೆಗೆ ರಮೇಶ ಹಾಗೂ ಲಕ್ಷ್ಮಿ ಮಾತ್ರ ಹಾಜರಾಗಿದ್ದರು. ಸತೀಶ ದೂರ ಉಳಿದಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು