ಸೋಮವಾರ, ಆಗಸ್ಟ್ 26, 2019
21 °C
ಯಶವಂತಪುರ ಕ್ಷೇತ್ರ ಕಾರ್ಯಕರ್ತರ ಸಭೆ

ಕಾನೂನು ಹೋರಾಟದಲ್ಲಿ ಗೆದ್ದೇ ಗೆಲ್ಲುವೆ: ಸೋಮಶೇಖರ್

Published:
Updated:

ಕೆಂಗೇರಿ: ‘ಕಾನೂನು ಹೋರಾಟದಲ್ಲಿ ಗೆದ್ದೇ ಗೆಲ್ಲುವ ಭರವಸೆ ಇದೆ. ಕಾರ್ಯಕರ್ತರು ಹಾಗೂ ಹಿತೈಷಿಗಳ ಸಲಹೆ ಪಡೆದು ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುವೆ’ ಎಂದು ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದರು.

ಕೆಂಗೇರಿ ಉಪನಗರದ ಬಂಡೇಶ್ವರ ದೇವಾಲಯ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಯಶವಂತಪುರ ಕ್ಷೇತ್ರ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ನನ್ನನ್ನು ಬಿಡಿಎ ಅಧ್ಯಕ್ಷನಾಗಿ ನಾಮಕಾವಸ್ತೆಗಾಗಿ ಸಮ್ಮಿಶ್ರ ಸರ್ಕಾರ ನೇಮಕ ಮಾಡಿತ್ತು. ಯಾವುದೇ ಕಡತಗಳು ವಿಲೇವಾರಿಯಾಗದಂತೆ ಸೂಚನೆ ನೀಡಿತ್ತು. ಈ ಬಗ್ಗೆ ಸಿದ್ದರಾಮಯ್ಯ, ಜಿ.ಪರಮೇಶ್ವರ ಹಾಗೂ ಡಿ.ಕೆ.ಶಿವಕುಮಾರ್ ಅವರ ಬಳಿ ಅಳಲು ತೋಡಿಕೊಂಡಿದ್ದೆ. ಯಾವುದೇ ಪರಿಹಾರ ನೀಡಲಿಲ್ಲ. ಈಗ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಎಲ್ಲಾ ಮುಖಂಡರು ನನ್ನನ್ನು ಜರಿಯುವ ತವಕದಲ್ಲಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಬಾದಾಮಿ ಕ್ಷೇತ್ರ ಹಾಗೂ ಮೈಸೂರು ಜಿಲ್ಲೆಗೆ ಅನುದಾನ ಕೇಳಿದರೆ ಬಿಡುಗಡೆ ಮಾಡುತ್ತಿಲ್ಲ ಎಂದು ಸಿದ್ದರಾಮಯ್ಯ ಹಲವು ಸಲ ಅಳಲು ತೋಡಿಕೊಂಡಿದ್ದರು. ಅವರ ಮಾತಿಗೂ ಸಮ್ಮಿಶ್ರ ಸರ್ಕಾರದಲ್ಲಿ ಮನ್ನಣೆ ದೊರೆಯುತ್ತಿರಲಿಲ್ಲ’ ಎಂದು ಅವರು ಬಹಿರಂಗಪಡಿಸಿದರು.

‘ಡಿ.ಕೆ. ಶಿವಕುಮಾರ್ ಮನಸು ಮಾಡಿದ್ದರೆ ಸಮಸ್ಯೆ ಬಗೆಹರಿಸಬಹುದಿತ್ತು. ಸಮಸ್ಯೆಯನ್ನು ಆಲಿಸುವ ವ್ಯವಧಾನ ತೋರದ ಅವರು ಮುಂಬೈಗೆ ಬಂದು ಬೃಹನ್ನಾಟಕ ಮಾಡಿದರು. ಅದರ ಔಚಿತ್ಯವಾದರೂ ಏನಿತ್ತು’ ಎಂದು ಪ್ರಶ್ನಿಸಿದರು.

‘ಕೆಲ ವರ್ಷಗಳ ಹಿಂದೆ ಇದೇ ಶಿವಕುಮಾರ್ ನನ್ನನ್ನು ಹಣಿಯಲು ಉತ್ತರಹಳ್ಳಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದರು. ಆ ಬಳಿಕ ಬಿಜೆಪಿ ಅಭ್ಯರ್ಥಿಗೆ ಕರೆ ಮಾಡಿ ನೀವು ಗೆಲುವು ಸಾಧಿಸಲಿದ್ದೀರಿ ಎಂದು ಸಂತಸ ಹಂಚಿಕೊಂಡಿದ್ದರು’ ಎಂದು ದೂರಿದರು.

‘ಮೈತ್ರಿ ಸರ್ಕಾರವನ್ನು ಪತನಗೊಳಿಸಬೇಕೆಂದು ಕೆ.ಆರ್‌. ರಮೇಶ್ ಕುಮಾರ್ ಅವರೇ ಹೇಳಿದ್ದರು. ಕೋಲಾರ ಜಿಲ್ಲೆಯ ಶಾಸಕರೊಂದಿಗೆ ಸಭೆ ನಡೆಸಿ ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಿದರು. ತುಮಕೂರಿನಲ್ಲಿ ಎಚ್‌.ಡಿ. ದೇವೇಗೌಡರು, ಮಂಡ್ಯದಲ್ಲಿ ನಿಖಿಲ್ ಅವರನ್ನು ಸೋಲಿಸಲು ಪರೋಕ್ಷವಾಗಿ ಸಹಕಾರ ನೀಡಿದರು. ಇಂತಹವರಿಗೆ ವಿಧಾನಸಭಾಧ್ಯಕ್ಷರ ಕುರ್ಚಿಯಲ್ಲಿ ಕುಳಿತರೆ ದೇವರು ಬರುತ್ತದೆಯೇ’ ಎಂದು ಪ್ರಶ್ನಿಸಿದರು.

ಯಾವುದೇ ಪಕ್ಷ ಸೇರಲ್ಲ: ‘ವಿಷಮ ಪರಿಸ್ಥಿತಿಗೆ ಸಿಲುಕಿ ರಾಜೀನಾಮೆ ನೀಡಿದ್ದೇನೆ. ಸದ್ಯಕ್ಕೆ ನಾನು ಯಾವ ಪಕ್ಷವನ್ನೂ ಸೇರುವುದಿಲ್ಲ. ದುಡ್ಡು ಪಡೆದು ಪಕ್ಷಾಂತರ ಮಾಡಿರುವುದು ದೃಢಪಟ್ಟರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಬಿಜೆಪಿ ಸೇರಿದಂತೆ ಯಾವುದೇ ಪಕ್ಷದ ನಾಯಕರನ್ನು ನಾವು ಸಂಪರ್ಕಿಸಿಲ್ಲ. ಅವರೂ ಕೂಡ ನನ್ನನ್ನು ಸಂಪರ್ಕಿಸುವ ಪ್ರಯತ್ನ ನಡೆಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪಾಲಿಕೆ ಸದಸ್ಯರಾದ ರಾಜಣ್ಣ, ಆರ್ಯ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿಕ್ಕರಾಜು ಸಭೆಯಲ್ಲಿದ್ದರು.

Post Comments (+)