ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಸಭೆಯಲ್ಲಿ ಅಸಹನೆಯ ಕುದಿ?

ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಿಎಲ್‌ಪಿ ಸಭೆ ಇಂದು: ನಾಯಕರ ವಿರುದ್ಧ ಮುಗಿಬೀಳುವ ಸಾಧ್ಯತೆ
Last Updated 17 ಡಿಸೆಂಬರ್ 2018, 20:20 IST
ಅಕ್ಷರ ಗಾತ್ರ

ಬೆಳಗಾವಿ: ಮೈತ್ರಿ ಸರ್ಕಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಈ ಭಾಗದ ಕಾಂಗ್ರೆಸಿಗರ ಕೂಗು, ಸಂಪುಟ ಸೇರಲು ಹಿರಿಯರ ಲಾಬಿ ಹಾಗೂ ವರ್ಗಾವಣೆ, ಅನುದಾನದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಅಸಹನೆಯ ಕುದಿಯ ಮಧ್ಯೆಯೇ ಇಲ್ಲಿನ ಸುವರ್ಣವಿಧಾನಸೌಧದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಮಹತ್ವದ ಸಭೆ ಮಂಗಳವಾರ (ಡಿ.18) ನಡೆಯಲಿದೆ.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಜರಿದ್ದು, ಪಕ್ಷದ ಶಾಸಕರ ಅಹವಾಲು ಆಲಿಸಲಿದ್ದಾರೆ.

ಸಂಪುಟ ವಿಸ್ತರಣೆ ಆಗದಿದ್ದರೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನಕ್ಕೆ ಗೈರಾಗುವುದಾಗಿ ಸಚಿವಾಕಾಂಕ್ಷಿ ಶಾಸಕರು ಸಂದೇಶ ಕಳುಹಿಸಿದ್ದರು. ಇದರಿಂದ ಎಚ್ಚೆತ್ತಮೈತ್ರಿ ಪಕ್ಷದ ನಾಯಕರು ಈ ಮುಜುಗರದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಅಧಿವೇಶನ ಮುಗಿದ ಮರುದಿನವೇ (ಡಿ. 22) ಸಂಪುಟ ವಿಸ್ತರಿಸುವುದಾಗಿ ಸಮನ್ವಯ ಸಮಿತಿ ಸಭೆಯ ನಿರ್ಣಯವನ್ನು ಪ್ರಕಟಿಸಿದ್ದರು.

ಹೀಗಾಗಿ, ಸಿಎಲ್‌ಪಿ ಸಭೆಯಲ್ಲಿ ಸಂಪುಟ ವಿಸ್ತರಣೆ ವಿಷಯ ಪ್ರಮುಖವಾಗಿ ಚರ್ಚೆಗೆ ಬರುವ ಸಾಧ್ಯತೆ ಇದೆ. ಮತ್ತೊಂದೆಡೆ ಹಿರಿಯ ಶಾಸಕರೂ ಸಂಪುಟ ವಿಸ್ತರಣೆ ವಿಷಯವನ್ನು ಪ್ರಸ್ತಾಪಿಸುವ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ.

ಸಭಾಪತಿ ಸ್ಥಾನ ಎಸ್. ಆರ್‌. ಪಾಟೀಲ ಅವರ ಕೈ ತಪ್ಪುತ್ತಿದ್ದಂತೆ, ಸ್ಥಾನಮಾನಗಳ ಹಂಚಿಕೆಯಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಈ ಭಾಗದ ಕಾಂಗ್ರೆಸ್‌ ಶಾಸಕರು ಒಕ್ಕೊರಲಿನಿಂದ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಸತೀಶ ಜಾರಕಿಹೊಳಿ, ಎಂ.ಬಿ. ಪಾಟೀಲ ಸೇರಿದಂತೆ ಕೆಲವು ಶಾಸಕರು ಚರ್ಚೆ ನಡೆಸಿದ್ದಾರೆ.

ಸರ್ಕಾರದ ಕಾರ್ಯವೈಖರಿ, ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಜೆಡಿಎಸ್‌ ಶಾಸಕರಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರ ಮಾತಿಗೆ ಸಿಗದ ಮನ್ನಣೆ ವಿಷಯಗಳೂ ಸಿಎಲ್‌ಪಿ ಸಭೆಯಲ್ಲಿ ಚರ್ಚೆಗೆ ಬರಲಿದೆ. ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ, ಅಧಿಕಾರಿಗಳ ವರ್ಗಾವಣೆ ವಿಷಯಗಳು ಸಭೆಯಲ್ಲಿ ಚರ್ಚೆಗೆ ಬರಲಿದೆ. ಲೋಕೋಪಯೋಗಿ ಸಚಿವ
ಎಚ್‌.ಡಿ. ರೇವಣ್ಣ ಜೊತೆ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ವಿರುದ್ಧವೂ ಶಾಸಕರು ಮುಗಿಬೀಳುವ ಸಾಧ್ಯತೆ ಇದೆ.

ಸರ್ಕಾರದಲ್ಲಿ ‘ಮೈತ್ರಿ’ ಸೂತ್ರ ಪಾಲನೆಯಾಗುತ್ತಿಲ್ಲ ಎಂದು ಅತೃಪ್ತಿಯಿಂದ ಕುದಿಯುತ್ತಿರುವ ಕಾಂಗ್ರೆಸ್ ಶಾಸಕರು ಅಹವಾಲು ಆಲಿಸಲು ಸಿಎಲ್‌ಪಿ ಸಭೆಗೆ ಹಾಜರಾಗುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಈ ಹಿಂದೆ ಹೇಳಿದ್ದರು. ಆಗ ಮಂಗಳವಾರ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಸಂಪುಟ ಪುನರ್‌ರಚನೆಗೆ ಒತ್ತಡ? : ಇದೇ 22ರಂದೇ ಸಂಪುಟ ವಿಸ್ತರಣೆ ಆಗಲಿದೆ ಎಂದು ಕಾಂಗ್ರೆಸ್ ನಾಯಕರು ಪುನರುಚ್ಚರಿಸುತ್ತಲೇ ಇದ್ದಾರೆ. ಆದರೆ ಸಚಿವಾಕಾಂಕ್ಷಿಗಳೂ ಸೇರಿದಂತೆ ಕಾಂಗ್ರೆಸ್ ವಲಯದಲ್ಲಿ ನಂಬಿಕೆ ಇಲ್ಲ. ಅಲ್ಲದೆ, ಸಂಪುಟ ವಿಸ್ತರಣೆಯೋ, ಪುನರ್‌ ರಚನೆಯೊ ಎಂಬ ಬಗ್ಗೆಯೂ ಚರ್ಚೆ ಆರಂಭವಾಗಿದೆ.

ಸಂಪುಟ ಸೇರಲು ಹೆಚ್ಚಿನ ಅರ್ಹ ಆಕಾಂಕ್ಷಿಗಳಿರುವ ಕಾರಣ ಸಂಪುಟ ವಿಸ್ತರಣೆ ಬದಲು ನಿಶ್ಚಿತ ದಿನಾಂಕದಂದು ಪುನರ್‌ರಚನೆ ಮಾಡಬೇಕೆಂಬ ಕೂಗು ಕೇಳಿಬಂದಿದೆ. ಈ ಬೆಳವಣಿಗೆಗೆ ಪೂರಕವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ‘ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ’ ಎಂದಿದ್ದಾರೆ.

‘ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ’
‘ದತ್ತಾತ್ರೇಯ ಜಯಂತಿಯ ದಿನವಾದ ಇದೇ 22ರಂದು ಸಂಪುಟ ವಿಸ್ತರಣೆ ಖಚಿತ. ಸಿಎಲ್‌ಪಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಇಲ್ಲ’ ಎಂದು ಸಿದ್ದರಾಮಯ್ಯ ಸ್ಪಷ್ಡಪಡಿಸಿದರು.

‘ಸಚಿವರು ಯಾರಾಗಬೇಕೆಂದು ಹೈಕಮಾಂಡ್‌ ತೀರ್ಮಾನಿಸಲಿದೆ. ಆ ತೀರ್ಮಾನಕ್ಕೆ ನಾವೆಲ್ಲ ಬದ್ಧ. ಎಲ್ಲ ಆರೂ ಸ್ಥಾನಗಳನ್ನೂ ತುಂಬುತ್ತೇವೆ. ನಿಗಮ ಮಂಡಳಿಗಳಿಗೂ ನೇಮಕ ಮಾಡುತ್ತೇವೆ. 8ರಿಂದ 10 ಸಂಸದೀಯ ಕಾರ್ಯದರ್ಶಿಗಳನ್ನೂ ನೇಮಿಸುತ್ತೇವೆ’ ಎಂದರು.

‘ಮುಖ್ಯಮಂತ್ರಿ ಕುಮಾರಸ್ವಾಮಿ ಸಿಎಲ್‌ಪಿ ಸಭೆಯಲ್ಲಿ ಭಾಗವಹಿಸುವುದಿಲ್ಲ. ಅಧಿವೇಶನ ಮುಗಿದ ಬಳಿಕ ಜಂಟಿ ಸಭೆ ಕರೆಯುತ್ತೇವೆ. ಅದರಲ್ಲಿ ಮುಖ್ಯಮಂತ್ರಿ, ಸಚಿವರು, ಎರಡೂ ಪಕ್ಷಗಳ ಶಾಸಕರು ಇರುತ್ತಾರೆ’ ಎಂದೂ ಸಿದ್ದರಾಮಯ್ಯ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT