ಆರು ತಿಂಗಳಿನಿಂದ ಸಂಬಳವಿಲ್ಲ; ಹಬ್ಬದ ಸಡಗರ ಇವರಿಗಿಲ್ಲ

7
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೌಕರರ ಗೋಳಿನ ಕಥೆ

ಆರು ತಿಂಗಳಿನಿಂದ ಸಂಬಳವಿಲ್ಲ; ಹಬ್ಬದ ಸಡಗರ ಇವರಿಗಿಲ್ಲ

Published:
Updated:

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಮತ್ತು ಅವರ ಅಧೀನ ನೌಕರರಿಗೆ ಆರೇಳು ತಿಂಗಳಿನಿಂದ ಸಂಬಳವೇ ಸಿಕ್ಕಿಲ್ಲ!

ರಾಜ್ಯದೆಲ್ಲೆಡೆ ನೌಕರರು ವೇತನಕ್ಕಾಗಿ ಪರದಾಡುತ್ತಿದ್ದಾರೆ. ಸುಳ್ಳ ತಾಲ್ಲೂಕಿನ ಸಿಬ್ಬಂದಿಗೆ 6 ತಿಂಗಳಿನಿಂದ ಸಂಬಳ ಸಿಕ್ಕಿಲ್ಲ. ಮೂಡಿಗೆರೆಯಲ್ಲಿ 4, ಪುತ್ತೂರಿನಲ್ಲಿ 2, ಸಕಲೇಶಪುರ, ಉಡುಪಿ, ಕುಂದಾಪುರ ಮತ್ತು ಕೊಡಗು ತಾಲ್ಲೂಕುಗಳಲ್ಲಿ ಮೂರು ತಿಂಗಳುಗಳಿಂದ ಸಂಬಳ ಆಗಿಲ್ಲ.

‘ಈ ಹಿಂದೆ ಎಂದೂ ಈ ರೀತಿ ಆಗಿರಲಿಲ್ಲ. ಮಾರ್ಚ್‌ನಲ್ಲಿ ಮಾತ್ರ ಸ್ವಲ್ಪ ವ್ಯತ್ಯಯ ಆಗುತ್ತಿತ್ತು. ಉಳಿದಂತೆ ಪ್ರತಿ ತಿಂಗಳು ಸರಿಯಾಗಿ ಸಂಬಳ ಸಿಗುತ್ತಿತ್ತು. ಈಗ ಬಹಳ ಕಷ್ಟವಾಗಿದೆ. ಆಗಸ್ಟ್‌ನಿಂದ ಸಂಬಳ ಬಂದಿಲ್ಲ. 2ನೇ ಹಂತದಲ್ಲಿ ನೀಡಿದ ವೇತನದ ಹಣವೂ ಪೂರ್ಣ ಬಂದಿರಲಿಲ್ಲ. ಅಕ್ಟೋಬರ್‌ನಲ್ಲಿ ಮೂರನೇ ಹಂತದ ವೇತನದ ಹಣ ಬಿಡುಗಡೆಯಾಗಬೇಕಿತ್ತು. ಅದು ಆಗಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಸಿಡಿಪಿಒ ತಿಳಿಸಿದರು.

‘ಕೊಡಗು ಜಿಲ್ಲೆಯಲ್ಲಿರುವವರು ಪ್ರವಾಹದಿಂದ ಈಗಾಗಲೇ ಸಾಕಷ್ಟು ಕಳೆದುಕೊಂಡಿದ್ದಾರೆ. ಸಂಬಳವೂ ಸಿಗದಿದ್ದರೆ ಅವರ ಸ್ಥಿತಿ ಹೇಗಿರಬಹುದು ಎಂದು ನೀವೇ ಊಹಿಸಿಕೊಳ್ಳಿ. ಈ ಬಗ್ಗೆ ವಿವರಿಸಿ ಮೇಲಿನ ಅಧಿಕಾರಿಗಳಿಗೆ ಅನೇಕ ಬಾರಿ ಪತ್ರ ಬರೆದಿದ್ದೇನೆ. ಆದರೆ, ಯಾವುದೇ ಉತ್ತರ ಬಂದಿಲ್ಲ. ಫೋನ್‌ ಮಾಡಿ ಕೇಳಿದಾಗ ಮಾರ್ಚ್‌ವರೆಗೂ ಸಂಬಳ ಬರುವುದು ಅನುಮಾನ ಎನ್ನುತ್ತಿದ್ದಾರೆ’ ಎಂದು ವಿವರಿಸಿದರು.

‘ಆರ್ಥಿಕ ಇಲಾಖೆಯಲ್ಲಿ ಏನೋ ಸಮಸ್ಯೆ ಆಗಿದ್ದರಿಂದ ವೇತನ ತಡವಾಗಿದೆ ಎಂದು ಹೇಳಲಾಗುತ್ತಿದೆ. ಆಗಸ್ಟ್‌ನಿಂದ ಅಧಿಕಾರಿ ವರ್ಗ ಸೇರಿದಂತೆ ಯಾರಿಗೂ ಸಂಬಳ ಆಗಿಲ್ಲ. ಆಗ ಬಗ್ಗೆ ನಿರಂತವಾಗಿ ಕೇಳುತ್ತಲೇ ಇದ್ದೇವೆ. ಹಣ ಬಿಡುಗಡೆಯಾಗಿದೆ ಎಂದಿದ್ದಾರೆ. ಯಾವಾಗ ಸಂಬಳ ಬರುತ್ತದೋ ಎಂದು ಕಾದು ನೋಡಬೇಕು’ ಎಂದು ಉಪನಿರ್ದೇಶಕರೊಬ್ಬರು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿನ ವೇತನ ಸಮಸ್ಯೆ ಬಗ್ಗೆ ಕೃಷಿಕರಾದ ಪ್ರಸಾದ್‌ ರಕ್ಸಿದಿ ವಿವರಿಸಿದ್ದು, ಆ ಬಗ್ಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ  ಬರೆದುಕೊಂಡಿದ್ದಾರೆ. ಅವರ ಬರಹ ಹೀಗಿದೆ...

ನಮ್ಮ ಪ್ರಮುಖ ಇಲಾಖೆಗಳಲ್ಲಿ ಒಂದಾದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿನ ಮೂರು ಮತ್ತು ನಾಲ್ಕನೇ ದರ್ಜೆ ನೌಕರರಿಗೆ ಆರುತಿಂಗಳಿನಿಂದ ಸಂಬಳ ಕೊಟ್ಟಿಲ್ಲ. ಕಾರಣ ಕೇಳಿದರೆ ಆ ಇಲಾಖೆ ಹಣಕಾಸು ಇಲಾಖೆಗೆ ಬೇಡಿಕೆ ಸಲ್ಲಿಸುವಾಗ ತಾಂತ್ರಿಕವಾಗಿ ಏನೋ ತಪ್ಪಾಗಿದೆಯಂತೆ. ಇದನ್ನು ಸರಿಪಡಿಸಬೇಕಾದ್ದು ಹಣಕಾಸು ಇಲಾಖೆ. ಅಲ್ಲಿನವರಿಗೆ ಈ ಬಗ್ಗೆ ಕೇಳಿದರೆ ಏನೇನೋ ಸಬೂಬು ಹೇಳುತ್ತಿದ್ದಾರಂತೆ

ತಾಂತ್ರಿಕ ಕಾರಣ ಸರಿಪಡಿಸಿ ನೌಕರರ ಸಂಬಳ ಬಿಡುಗಡೆ ಮಾಡಲು ಹಣ (ಎಲ್ಲರೂ ಸೇರಿ ದೊಡ್ಡ ಮೊತ್ತದ) ನೀಡುವಂತೆ ಕೇಳಿದ ಸುದ್ದಿಯೂ ಇದೆ. ಮಹಿಳೆ ಮತ್ತು ಮಕ್ಕಳ ಇಲಾಖೆ ನಮ್ಮ ಸಂವೇದನಾಶೀಲ ಸಚಿವೆ ಎಂದು ಹೆಸರಾಗಿರುವ ಜಯಮಾಲ ಅವರಲ್ಲಿದೆ. ಇನ್ನು ಹಣಕಾಸು ಇಲಾಖೆ, ಜನರ ಕಷ್ಟವನ್ನು ನೋಡಿ ಕಣ್ಣೀರಿಡುವ ಮುಖ್ಯಮಂತ್ರಿ ಅವರ ಬಳಿಯೇ ಇದೆ. ಇವರಿಬ್ಬರೂ ಮನಸ್ಸು ಮಾಡಿದರೆ ಸಾವಿರಾರು ನೌಕರಿಗೆ ಸಂಬಳ ಕೊಡಿಸಬಹುದು.

ಯಾವುದೇ ಸರ್ಕಾರ ಅಥವಾ ಸಂಸ್ಥೆ ತನ್ನ ನೌಕರರು ಭ್ರಷ್ಟರಾಗದಂತೆ ನೋಡಿಕೊಳ್ಳಬೇಕಾದರೆ ಅವರು ಮರ್ಯಾದೆಯಿಂದ ಬದುಕುವಂತೆ ಸಂಬಳ ನೀಡಬೇಕು ಮತ್ತು ಅದು ಸಕಾಲದಲ್ಲಿ ದೊರೆಯುವ ವ್ಯವಸ್ಥೆ ಮಾಡಬೇಕು. ಇದು ಅದರ ಕನಿಷ್ಠ ಕರ್ತವ್ಯ. ಇಲ್ಲವಾದಲ್ಲಿ, ನೌಕರರಾರಾದರೂ ಏನು ಮಾಡಬೇಕು? ಐದಾರು ತಿಂಗಳಿನಿಂದ ಸಂಬಳವಿಲ್ಲ (ಮಾರ್ಚ ತನಕವೂ ಸಂಬಳ ದೊರೆಯಲಾರದೆಂಬ ಸುದ್ದಿಯೂ ಇದೆ) ಹೀಗಾದರೆ ಬೇರೆ ಆದಾಯಗಳಿಲ್ಲದ ನೌಕರರ ಗತಿಯೇನು?

ಸರ್ಕಾರ ಸಾಲ ಮನ್ನಾಕ್ಕೆ ಹಣ ಕ್ರೋಡೀಕರಣದ ಸಂಕಷ್ಟದಲ್ಲಿ ಇಲಾಖೆಗಳಿಗೆ ಹಣ ಬಿಡುಗಡೆ ಮಾಡಲು ತಡೆಯೊಡ್ಡುತ್ತಿದೆ ಎಂಬ ಮಾತೂ ಇದೆ. ಏನೇ ಆದರೂ ಸಂಬಳ ಕೊಡುವುದು ಕೆಲಸ ಮಾಡಿಸಿಕೊಂಡವನ ಕರ್ತವ್ಯ.

‘ನನಗೆ ಪರಿಚಿತರೊಬ್ಬರು ಈ ಸಮಸ್ಯೆ ಬಗ್ಗೆ ತಿಳಿಸಿದರು. ಈ ಬಗ್ಗೆ ಇನ್ನಷ್ಟು ವಿಚಾರಿಸಿದಾಗ ಎಲ್ಲಾ ಕಡೆಗಳಲ್ಲಿ ಈ ಸಮಸ್ಯೆ ಇರುವುದು ತಿಳಿಯಿತು. ಹಾಗಾಗಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದೇನೆ. ಸಚಿವರು ಗಮನ ಹರಿಸಿ ಅವರಿಗೆಲ್ಲ ಬೇಗ ವೇತನ ದೊರೆತರೆ ಅಷ್ಟೇ ಸಾಕು’ ಎಂದು ಪ್ರಸಾದ್‌ ತಿಳಿಸಿದರು.

***

ಮೊದಲನೇ ಮತ್ತು ಎರಡನೇ ಹಂತದ ವೇತನದ ಹಣವನ್ನು ಬಿಡುಗಡೆ ಮಾಡಲಾಗಿದೆ. ಮೂರನೇ ಹಂತದ ಹಣ ಬಿಡುಗಡೆ ಆಗಬೇಕಿದೆ. ಶೀಘ್ರದಲ್ಲಿ ಅದು ಆಗುತ್ತದೆ

–ಜಯಮಾಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

ಬರಹ ಇಷ್ಟವಾಯಿತೆ?

 • 17

  Happy
 • 2

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !