ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಸಲಹೆ ಬದಲಿಸಿತು ಜೀವನ

ಮದುವೆಯಾಗಿ ಅರ್ಧದಲ್ಲೇ ವಿದ್ಯಾಭ್ಯಾಸ ನಿಲ್ಲಿಸಿದ್ದ ಮಹಿಳೆ ‘ಡಾಕ್ಟರೇಟ್‌’ | ಇಬ್ಬರು ಮಕ್ಕಳ ತಾಯಿಗೆ ‘ಶಿಕ್ಷಕಿ’ ಭಾಗ್ಯ ಕೊಟ್ಟ ಓದುವ ಛಲ
Last Updated 25 ಜನವರಿ 2020, 19:42 IST
ಅಕ್ಷರ ಗಾತ್ರ

ಬೆಂಗಳೂರು: ಮದುವೆಯಾಯಿತು, ಓದು ಅರ್ಧಕ್ಕೇ ಮುಗಿಯಿತು, ಮಕ್ಕಳಾಯಿತು, ಸಂಸಾರದ ಭಾರ ಹೊರುವುದಾಯಿತು. ಬಹುತೇಕ ಮಹಿಳೆಯರ ಜೀವನ ಇದು. ಇಷ್ಟೆಲ್ಲ ಆದ ಮೇಲೂ ಓದುವುದು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಮಾಗಡಿ ಶಿವನಸಂದ್ರ ಹೈಸ್ಕೂಲ್‌ನ ಹಿಂದಿ ಶಿಕ್ಷಕಿ ಆರ್‌.ಪ್ರಭಾವತಿ.

ಅಷ್ಟಕ್ಕೂ ಅವರಿಗೆ ಪ್ರೇರಣೆಯಾದುದು ‘ಪ್ರಜಾವಾಣಿ’ಯ ‘ವಿದ್ಯಾರ್ಥಿ ಮಾರ್ಗದರ್ಶಿ’ಯಲ್ಲಿ ದೊರೆತ ಒಂದೇ ಒಂದು ಸಲಹೆ. ‘ಪದವಿ ಶಿಕ್ಷಣವನ್ನು ಅರ್ಧಕ್ಕೇ ಬಿಟ್ಟು ಹತ್ತು ವರ್ಷವಾಗಿದ್ದರೂ, ಈಗಲೂ ಪ್ರಯತ್ನಪಟ್ಟರೆ ಓದು ಮುಂದುವರಿಸಬಹುದು’ ಎಂದು ಅವರ ಪತ್ರಕ್ಕೆ ಉತ್ತರ ನೀಡಲಾಗಿತ್ತು. ಈ ಒಂದು ಸಲಹೆಯನ್ನೇ ಸವಾಲಿನಂತೆ ಸ್ವೀಕರಿಸಿದ ಶಿಕ್ಷಣವನ್ನು ಮುಂದುವರಿಸಿದ ಇಬ್ಬರು ಮಕ್ಕಳ ತಾಯಿ ಇನ್ನು ಕೆಲವೇ ದಿನಗಳಲ್ಲಿ ‘ಡಾಕ್ಟರೇಟ್‌’ ಪದವಿ ಪಡೆಯಲಿದ್ದಾರೆ.

ಪ್ರಭಾವತಿ ಅವರು 1995ರಲ್ಲಿ ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿ.ಎ. ವ್ಯಾಸಂಗ ಮಾಡುತ್ತಿದ್ದಾಗಲೇ ವಿವಾಹವಾಗಿತ್ತು. ಮೂವರು ಪುತ್ರಿಯರಲ್ಲಿ ಅವರೇ ಹಿರಿಯಾಕೆ. ಇನ್ನೂ ಇಬ್ಬರು ಸಹೋದರಿಯರ ಭವಿಷ್ಯವೂ ಮುಖ್ಯ ಎಂಬ ಕಾರಣಕ್ಕೆ ಮದುವೆಗೆ ಒಪ್ಪಿದ್ದರು. ಆದರೆ ಕಲಿಕೆ ಅರ್ಧದಲ್ಲೇ ನಿಂತಿತು. ಇಬ್ಬರು ಮಕ್ಕಳ ತಾಯಿಯಾದ ಬಳಿಕವೂ ಅವರಲ್ಲಿ ಕಲಿಕೆ ಮುಂದುವರಿಸುವ ತುಡಿತ ಕಡಿಮೆ ಆಗಿರಲಿಲ್ಲ. ಈ ತುಡಿತವೇ ಅವರಲ್ಲಿ ಮತ್ತೆ ಹೊಸ ಬದುಕಿನ ಕನಸು ಕಾಣುವಂತೆ ಮಾಡಿತು. ಅದಕ್ಕೆ ನೆರವಾದವರು ಅವರ ಪತಿ ಎಲ್‌ಐಸಿ ಉದ್ಯೋಗಿ ಜಯಪ್ರಕಾಶ್‌.

2004ರಲ್ಲಿ ‘ಪ್ರಜಾವಾಣಿ’ ನೀಡಿದ್ದ ಸಲಹೆಯಂತೆ ಪದವಿ ವ್ಯಾಸಂಗ ಪೂರ್ಣಗೊಳಿಸಲು ಪ್ರಭಾವತಿ ಮುಂದಾದರು. ವಿಶ್ವವಿದ್ಯಾಲಯದಿಂದ ವಿಶೇಷ ಅನುಮತಿ ಪಡೆದು ಅವರು ತಮ್ಮ ಛಲವನ್ನು ಸಾಧಿಸಿದರು. ಮಧುಗಿರಿಯಲ್ಲಿ ಹಿಂದಿ ಬಿ.ಇಡಿ.ಮಾಡಿದಾಗ ಇಬ್ಬರು ಮಕ್ಕಳೊಂದಿಗೆ ತರಗತಿಯಲ್ಲಿ ಪಾಠ ಕೇಳಿದ್ದರು. ಸಹಪಾಠಿಗಳು ‘ಅಮ್ಮಾ’ ಎಂದು ಕರೆಯುತ್ತಿದ್ದರೂ ಮನಸ್ಸಿಗೆ ಹಚ್ಚಿಕೊಳ್ಳದೆ ವ್ಯಾಸಂಗ ಪೂರ್ತಿಗೊಳಿಸಿದ್ದರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಿಂದಿ ಎಂ.ಎ ತರಗತಿಗೆ ಸೇರಿ ಮೊದಲ ವರ್ಷದಲ್ಲಿದ್ದಾಗಲೇಸಿಇಟಿಯಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್‌ ಗಳಿಸಿ ಹಿಂದಿ ಶಿಕ್ಷಕಿಯಾದರು. ಎಂ.ಎ. ಪದವಿಯನ್ನು ದೂರ ಶಿಕ್ಷಣದ ಮೂಲಕ ಪೂರ್ಣಗೊಳಿಸಿದರು. 2012ರಲ್ಲಿ ಮೊದಲ ಬಾರಿಗೆ ಜಾರಿಗೆ ಬಂದ ಪಿಎಚ್‌.ಡಿ.ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಹಿಂದಿ ವಿಭಾಗದ ಮುಖ್ಯಸ್ಥ ಡಾ.ಶೇಖರ್‌ ಮಾರ್ಗದರ್ಶನದಲ್ಲಿ ಪಿಎಚ್‌.ಡಿ. ಪೂರ್ಣಗೊಳಿಸಿದರು. ಮುಂದಿನ ತಿಂಗಳು ಡಾಕ್ಟರೇಟ್‌ ಪದವಿ ಅವರ ಕೈಸೇರಲಿದೆ. ಈ ಸಂಭ್ರಮವನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಅವರು, ‘ಪತ್ರಿಕೆ ನೀಡಿದ ಸಲಹೆಯಿಂದಲೇ ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಧನ್ಯವಾದ ಸಲ್ಲಿಸಿದರು.

ಪ್ರಭಾವತಿ ಅವರ ಪುತ್ರಿ ಇದೀಗ ಮಹಾರಾಷ್ಟ್ರದ ಲಾತೂರಿನಲ್ಲಿ ಕೃಷಿ ಜೀವವಿಜ್ಞಾನ ಎಂ.ಎಸ್ಸಿ ಕಲಿಯುತ್ತಿದ್ದು, ಪುತ್ರ ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ವಿಭಾಗದ 2ನೇ ವರ್ಷದ ವಿದ್ಯಾರ್ಥಿ.

***

ಕಲಿಕೆ ಎಂಬುದು ನಿರಂತರ. ಅದಕ್ಕೆ ವಯಸ್ಸಿನ ಅಡ್ಡಿ ಇಲ್ಲ. ದೃಢ ಮನಸ್ಸು, ಮನೆಯಲ್ಲಿ ಒಂದಿಷ್ಟು ಪ್ರೋತ್ಸಾಹ ಸಿಕ್ಕಿದರೆ ಬಯಸಿದ್ದನ್ನು ಸಾಧಿಸುವುದು ಅಸಾಧ್ಯವೇನಲ್ಲ

- ಆರ್‌.ಪ್ರಭಾವತಿ, ಹಿಂದಿ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT