ಶೌಚಾಲಯದಲ್ಲೇ ಮಹಿಳೆ ವಾಸ

7
ತಾಯಿ, ಮಗಳಿಗೆ ಆಸರೆಯಾಗದ ಗ್ರಾಮ ಪಂಚಾಯಿತಿ

ಶೌಚಾಲಯದಲ್ಲೇ ಮಹಿಳೆ ವಾಸ

Published:
Updated:
Deccan Herald

ಗೌರಿಬಿದನೂರು: ತಾಲ್ಲೂಕಿನ ಮಂಚೇನಹಳ್ಳಿಯ ಎರಡನೇ ವಾರ್ಡ್‌ನಲ್ಲಿ ಮಹಿಳೆಯೊಬ್ಬರು ತಮ್ಮ ಮಗಳೊಂದಿಗೆ 5 ವರ್ಷಗಳಿಂದ ಸಾಮೂಹಿಕ ಶೌಚಾಲಯದಲ್ಲಿಯೇ ವಾಸವಿದ್ದು, ಜೀವನ ನಡೆಸುತ್ತಿದ್ದಾರೆ.

ವಸತಿ ಇಲ್ಲದೇ ಲಕ್ಷ್ಮಿದೇವಮ್ಮ (38) ಮತ್ತು ಅವರ ಪುತ್ರಿ ಸುಚಿತ್ರಾ (7) ಶೌಚಾಲಯದ ಒಂದೇ ಕೋಣೆಯಲ್ಲಿ ಇದ್ದಾರೆ. ಅದರಲ್ಲೇ ಅಡುಗೆ, ದೇವರ ಪೂಜೆ, ನಿದ್ದೆ, ಮಗಳಿಗೆ ಪಾಠ ಎಲ್ಲವೂ ಇದರಲ್ಲೇ ನಡೆಯುತ್ತಿದೆ.

ಪತಿ ವೆಂಕಟೇಶ್ ಅಕಾಲಿಕವಾಗಿ ಮರಣ ಹೊಂದಿದಾಗ ಮನೆ ಇಲ್ಲದೆ ಕಂಗೆಟ್ಟಿದ್ದ ಲಕ್ಷ್ಮಿದೇವಮ್ಮಗೆ ತಾತ್ಕಾಲಿಕವಾಗಿ ಆಸರೆ ನೀಡಿದ್ದು ಶೌಚಾಲಯ. ನಂತರ ವಸತಿ ಯೋಜನೆ
ಯಡಿ ಮನೆ ಮಂಜೂರಾತಿಗೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು. ಆದರೆ ಇದುವರೆಗೆ ಯಾವುದೇ ಉತ್ತರ ಸಿಕ್ಕಿಲ್ಲ. ಜನಪ್ರತಿನಿಧಿಗಳನ್ನು ಅಂಗಲಾಚಿ ಬೇಡಿದರೂ ಸೂರು ಕಲ್ಪಿಸಲಿಲ್ಲ. ಹೀಗಾಗಿ ಹಾಳುಬಿದ್ದಿದ್ದ ಶೌಚಾಲಯವೇ ಮನೆಯಾಯಿತು. ಅವರ ಕಷ್ಟದ ಕಣ್ಣೀರು ಒರೆಸಲು ಯಾರೂ ಮುಂದಾಗಿಲ್ಲ.

ಈ ಕುರಿತು ಲಕ್ಷ್ಮಿದೇವಮ್ಮ ಅವರನ್ನು ಮಾತನಾಡಿಸಿದಾಗ, ‘5 ವರ್ಷಗಳಿಂದ ಮನೆಗಾಗಿ ನಾನು ತಾಲ್ಲೂಕಿನಲ್ಲಿ ಭೇಟಿಯಾಗದ ಅಧಿಕಾರಿ
ಗಳು, ಜನಪ್ರತಿನಿಧಿಗಳೇ ಉಳಿದಿಲ್ಲ. ಯಾರೊಬ್ಬರೂ ಸಮಸ್ಯೆಗೆ ಸ್ಪಂದಿಸಿಲ್ಲ. ಕೂಲಿ ಮಾಡಿಕೊಂಡು ಬದುಕುತ್ತಿರುವ ನನಗೆ ದಿಕ್ಕು ಕಾಣದೆ ಶೌಚಾಲಯದಲ್ಲೇ ಬದುಕುತ್ತಿದ್ದೇನೆ’ ಎಂದರು.

‘ಶೀಘ್ರ ಮನೆ ಮಂಜೂರು’

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಬಸವರಾಜು ಅವರು, ‘ದಶಕದ ಹಿಂದೆ ನಿರ್ಮಿಸಿದ್ದ ಶೌಚಾಲಯದಲ್ಲಿ ನೀರು ಇಲ್ಲದ ಕಾರಣ ಜನಬಳಕೆ ಮಾಡಿರಲಿಲ್ಲ. ಹೀಗಾಗಿ ಲಕ್ಷ್ಮಿದೇವಮ್ಮ ಅವರ ಆಶ್ರಯಕ್ಕೆ ಕಾರಣವಾಗಿದೆ. ಮುಂದಿನ ಗ್ರಾಮ ಸಭೆಯಲ್ಲಿ ಚರ್ಚಿಸಿ ಮನೆ ಮಂಜೂರು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 4

  Sad
 • 0

  Frustrated
 • 1

  Angry

Comments:

0 comments

Write the first review for this !