ಗುರುವಾರ , ನವೆಂಬರ್ 14, 2019
19 °C

ಕ್ಯಾಬ್‌ನಿಂದ ತಳ್ಳಿ ಮಹಿಳೆಗೆ ಹಲ್ಲೆ; ಓಲಾ ಚಾಲಕ ಬಂಧನ

Published:
Updated:

ಬೆಂಗಳೂರು: ಮಹಿಳೆಯನ್ನು ಕ್ಯಾಬ್‌ನಿಂದ ಹೊರಗೆ ತಳ್ಳಿ ಹಲ್ಲೆ ಮಾಡಿದ್ದ ಆರೋಪದಡಿ ಚಾಲಕ ಶೇಖ್ ಅಹ್ಮದ್ ಜಮಲ್ ಎಂಬಾತನನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.

‘ನ. 7ರಂದು ಸಂಜೆ ನಡೆದಿರುವ ಘಟನೆ ಸಂಬಂಧ ಮಹಿಳೆಯ ಪತಿ ದೂರು ನೀಡಿದ್ದಾರೆ. ಅದನ್ನು ಆಧರಿಸಿ ಶೇಖ್‌ ಅಹ್ಮದ್‌ನನ್ನು ಬಂಧಿಸಲಾಗಿದೆ. ಆತನ ಕೃತ್ಯಕ್ಕೆ ಸಹಕರಿಸಿದ್ದ ಮೂವರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಶೇಖ್‌ ಅಹ್ಮದ್‌, ಓಲಾ ಕಂಪನಿಯಡಿ ಕ್ಯಾಬ್‌ ಚಲಾಯಿಸುತ್ತಿದ್ದ. ಮಹಿಳೆಯು ಕ್ಯಾಬ್‌ ಬುಕ್ಕಿಂಗ್ ಮಾಡಿದ್ದರು. ಸ್ಥಳಕ್ಕೆ ಹೋಗಿದ್ದ ಆರೋಪಿ ಮಹಿಳೆಯನ್ನು ಹತ್ತಿಸಿಕೊಂಡು ಹೊರಟಿದ್ದ.’

‘ಮಾರ್ಗಮಧ್ಯೆಯೇ ಮೊಬೈಲ್‌ನಲ್ಲಿ ಮಾತನಾಡುತ್ತ ಅತೀ ವೇಗವಾಗಿ ಅಜಾಗರೂಕತೆಯಿಂದ ಕ್ಯಾಬ್ ಚಲಾಯಿಸುತ್ತಿದ್ದ. ಅದನ್ನು ಮಹಿಳೆ ಪ್ರಶ್ನಿಸಿದ್ದರು. ಅಷ್ಟಕ್ಕೆ ಆರೋಪಿ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಅವರನ್ನು ಕ್ಯಾಬ್‌ನಿಂದ ಹೊರಗೆ ತಳ್ಳಿ ಹಲ್ಲೆ ಮಾಡಿದ್ದ’ ಎಂದು ಪೊಲೀಸರು ವಿವರಿಸಿದರು.

ಘಟನೆ ಸಂಬಂಧ ಪ್ರತಿಕ್ರಿಯೆ ಪಡೆಯಲು ಓಲಾ ಕಂಪನಿ ಪ್ರತಿನಿಧಿ ಲಭ್ಯರಾಗಲಿಲ್ಲ. 

ಪ್ರತಿಕ್ರಿಯಿಸಿ (+)