ಗುರುವಾರ , ಸೆಪ್ಟೆಂಬರ್ 23, 2021
22 °C
ಕೃಷ್ಣಾ ನದಿ ತಟದಲ್ಲಿ ಮಹಿಳೆಯರ ಪ್ರತಿಭಟನೆ ಆರಂಭ

‘ಗಂಡ ಕುಡಿಯದಿದ್ದರೆ ಮಗ ಬದುಕಿರುತ್ತಿದ್ದ’

ವೆಂಕಟೇಶ್ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ‘ನನ್ನ ಗಂಡ ಕುಡಿದು ಬಂದ್ರ ರಾತ್ರಿಯೆಲ್ಲಾ ಪುಟ್ಟ ಮಗಳೊಂದಿಗೆ ರಸ್ತೆಯಲ್ಲೇ ಕಾಲ ಕಳೆಯುತ್ತಿದ್ದೆ. ನಶೆಯೊಳಗ ಕೈಗೆ ಏನು ಸಿಕ್ರೂ ತೊಗೊಂಡು ಹೊಡೀತಿದ್ದ. ಜೀವಕ್ಕ ಅಂಜಿ, ಮನೆಯೊಳಗ ಇರ್ತಿರಲಿಲ್ಲ. ಕುಡಿತ ಆತಗೂ (ಪತಿ) ನುಂಗ್ತು, ಮಗನಿಗೂ ನುಂಗಿತು’ ಎಂದು ಹುನಗುಂದ ತಾಲ್ಲೂಕು ತೊಂಡೆಕೆರೆಯ ಗಂಗಮ್ಮ ಮಾದರ ಹೇಳಿದರು.

ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ ಕರ್ನಾಟಕ ಮದ್ಯ ನಿಷೇಧ ಆಂದೋಲನದಡಿ ಸೋಮವಾರ ಇಲ್ಲಿನ ಸಂಗಮೇಶ್ವರ ದೇವಸ್ಥಾನದ ಬಳಿಯ ಕೃಷ್ಣಾ ನದಿ ತಟದಲ್ಲಿ ಸಾವಿರಾರು ಮಹಿಳೆಯರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಅವರಲ್ಲಿ ಗಂಗಮ್ಮ ಕೂಡ ಭಾಗಿಯಾಗಿದ್ದಾರೆ.

‘ಪತಿ ಕುಡಿತದ ಚಟಕ್ಕ ಊರಾಗ ₹ 30 ಸಾವಿರ ಸಾಲ ಮಾಡಿದ್ದ. ಹಂಗಾಗಿ ಬೆಂಗಳೂರಿಗೆ ದುಡಿಯಾಕ ಹೋದ್ವಿ. ಅಲ್ಲಿನ ಕೆ.ಆರ್‌.ಪುರಂನ ಶಾಂತಿ ಕಾಲೊನಿಯಲ್ಲಿ ದೊಡ್ಡ ಕಟ್ಟಡದ ಗೌಂಡಿ ಕೆಲಸ ಮಾಡ್ತಿದ್ವಿ. ಐದನೇ ಕ್ಲಾಸ್ ಓದ್ತಾ ಇದ್ದ ಮಗ ಕಿರಣ, ಅದೇ ಕಟ್ಟಡದ ಕೆಳಗೆ ಇದ್ದ ದೊಡ್ಡ ಸಂಪಿನೊಳಗೆ (ತೊಟ್ಟಿ) ಬಿದ್ದು ಸತ್ತ. ಗಂಡ ಕುಡೀಲಿಕ್ರ ನಾವು ಊರೂ ಬಿಡುತ್ತಿರಲಿಲ್ಲ. ಮಗನೂ ಸಾಯುತ್ತಿರಲಿಲ್ಲ, ಸಾಲ ತೀರಿಸಲು ದುಡಿಯಲು ಹೋಗಿದ್ದವರು ಊರಿಗೆ ಮಗನ ಹೆಣ ತಂದೆವು‘ ಎಂದು ಗಂಗಮ್ಮ ಹೇಳಿದಾಗ ಕಣ್ಣಂಚಲ್ಲಿ ನೀರಿತ್ತು. 

ಜಲಸತ್ಯಾಗ್ರಹ ಇಂದು: ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಪಟ್ಟು ಹಿಡಿದಿರುವ ಪ್ರತಿಭಟನಾಕಾರರು, ಸರ್ಕಾರದ ಗಮನ ಸೆಳೆಯಲು ಮಂಗಳವಾರ ನದಿ ನೀರಿನಲ್ಲಿ ಕುಳಿತು ಜಲಸತ್ಯಾಗ್ರಹ ನಡೆಸಲಿದ್ದಾರೆ.

ಪ್ರತಿಭಟನೆ: ಕರ್ನಾಟಕ ಮದ್ಯ ನಿಷೇಧ ಆಂದೋಲನದಡಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಸಾವಿರಾರು ಮಹಿಳೆಯರು, ಕೂಡಲಸಂಗಮದ ಸಂಗಮನಾಥ ದೇವಸ್ಥಾನದ ಮುಂಭಾಗದ ಕೃಷ್ಣಾ ನದಿ ತಟದಲ್ಲಿ ಕುಳಿತು ಸೋಮವಾರ ಅನಿರ್ದಿಷ್ಟ ಅವಧಿಯ ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನಾ ನಿರತರಿಗೆ ನದಿ ದಡ
ದಲ್ಲಿಯೇ ಅಡುಗೆ ಸಿದ್ಧಪಡಿಸಲಾಗುತ್ತಿದೆ.

ಉಪವಾಸ: ಮದ್ಯ ನಿಷೇಧಕ್ಕೆ ಆಗ್ರಹಿಸಿ 2019ರ ಜನವರಿ 27ರಂದು ಚಿತ್ರದುರ್ಗದಿಂದ ಬೆಂಗಳೂರಿಗೆ ಆಯೋಜಿಸಿದ್ದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕಿನ ಕೈರವಾಡಗಿಯ ರೇಣುಕಮ್ಮ ನೆಲಮಂಗಲದ ಬಳಿ ಲಾರಿ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದರು. ಅವರ ಗೌರವಾರ್ಥ ರಾಯಚೂರಿನ ರಮ್ಜಾನಬಿ, ರೇಣುಕಮ್ಮ, ಬಳ್ಳಾರಿಯ ಶಂಕರಮ್ಮ, ಕೊಟ್ರಮ್ಮ ಹಾಗೂ ಅಭಯ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

***

‘ಮದ್ಯ ನಿಷೇಧಕ್ಕೆ ಆಗ್ರಹಿಸಿ ಇನ್ನೆರಡು ದಿನಗಳಲ್ಲಿ 20 ಸಾವಿರ ಮಹಿಳೆಯರ ಸಹಿ ಸಂಗ್ರಹಿಸಿ. ಸಿ.ಎಂಗೆ ಕಳುಹಿಸಿಕೊಡಲಿದ್ದೇವೆ

- ಸ್ವರ್ಣಾ ಭಟ್, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ

***

‘ನಮ್ಮೂರಲ್ಲಿ ಮದ್ಯ ಸೇವಿಸಿದರೆ ₹5 ಸಾವಿರ, ಮಾರಾಟ ಮಾಡಿದರೆ ₹10 ಸಾವಿರ ದಂಡ ವಿಧಿಸುತ್ತೇವೆ. 

- ಖಾಜಾಸಾಬ್, ನೀರಲಕೇರಿ, ಲಿಂಗಸುಗೂರು ತಾಲ್ಲೂಕು, ರಾಯಚೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು