‘ಭಾಗ್ಯ’ವಿಧಾತನೊಂದಿಗೆ ಸೆಲ್ಫಿ ಸಂಭ್ರಮ

6

‘ಭಾಗ್ಯ’ವಿಧಾತನೊಂದಿಗೆ ಸೆಲ್ಫಿ ಸಂಭ್ರಮ

Published:
Updated:
Deccan Herald

ಬೆಂಗಳೂರು: ಶಾಸಕ ಸಿದ್ದರಾಮಯ್ಯ ಬರುತ್ತಿದ್ದಂತೆಯೇ ಮಹಿಳಾ ಸಮಾವೇಶದಲ್ಲಿ ಮಿಂಚಿನ ಸಂಚಾರ. ಸುತ್ತುವರಿದು ಸೆಲ್ಫಿ ತೆಗೆಸಿಕೊಂಡ ಸೀರೆಯುಟ್ಟ ನೀರೆಯರು. ಸಿದ್ದರಾಮಯ್ಯ ವೇದಿಕೆಯೇರಿದರೂ ಬಿಡದ ಸೆಲ್ಫಿ ಕ್ಯಾಮೆರಾಗಳು. ಕಾರ್ಯಕ್ರಮದುದ್ದಕ್ಕೂ ಅವರ ಗುಣಗಾನ, ಸರಣಿ ‘ಭಾಗ್ಯ’ಗಳ ಸ್ಮರಣೆ...

ಇದು ಅಹಲ್ಯಾಬಾಯಿ ಹೋಳ್ಕರ್‌ ಮಹಿಳಾ ಸಂಘ, ಕರ್ನಾಟಕ ಪ್ರದೇಶ ಕುರುಬರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಮಹಿಳಾ ಜಾಗೃತಿ ಸಮಾವೇಶದ ಝಲಕ್‌.

ಶ್ರೀ ಶ್ರೀ ಶ್ರೀ ಸಿದ್ದರಾಮಯ್ಯ...: ವೇದಿಕೆಯಲ್ಲಿದ್ದ ಸ್ವಾಮೀಜಿಗಳ ಹೆಸರು ಉಲ್ಲೇಖಿಸುವಾಗ ಶಾಸಕ ಸಿದ್ದರಾಮಯ್ಯ ಅವರಿಗೂ ಶ್ರೀ ಶ್ರೀ ಶ್ರೀ ಎಂದು ಕರೆಯಲಾಯಿತು. ಸಭೆಯಲ್ಲಿದ್ದ ‘ಭಕ್ತ ಮಣಿ’ಗಳು ಕೂಡಲೇ ಜೈಕಾರ ಕೂಗಿದರು. ಸಂಘದ ಸಂಸ್ಥಾಪನಾ ಅಧ್ಯಕ್ಷರ ಪ್ರಾಸ್ತಾವಿಕ ಭಾಷಣವೇ ಸಿದ್ದರಾಮಯ್ಯ ಅವರ ಸ್ತುತಿಗೆ ಮೀಸಲಾಯಿತು. ಸಿದ್ದರಾಮಯ್ಯ ಅವರು ಇನ್ನೊಮ್ಮೆ ಮುಖ್ಯಮಂತ್ರಿಯಾಗಬೇಕು. ಪ್ರಧಾನಿಯಾಗಬೇಕು ಎಂದು ಸಂಘದ ಪದಾಧಿಕಾರಿಗಳು ಪದೇಪದೇ ಘೋಷಿಸಿದರು.  

ಗಂಡಸರಾಗಿದ್ರೆ ಹಿಂದೆ ಹೋಗಿ...:  ‘ನೀವು ಗಂಡಸರಾಗಿದ್ರೆ ಹಿಂದೆ ಹೋಗಿ...’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಎಚ್‌.ಎಂ. ರೇವಣ್ಣ ಅವರು ಲಘುವಾಗಿ ಗುಡುಗಿದರು. ಅವರು ಮಾತ್ರ ವೇದಿಕೆಯಲ್ಲೇ ಸುತ್ತಾಡಿದರು. 

ಅಹಲ್ಯಾಬಾಯಿ ಹೋಳ್ಕರ್‌ ಅವರ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ನಡೆಯಿತು.

ಸಮಾಜದಲ್ಲಿ ಶಿಕ್ಷಣ ಜಾಗೃತಿ ಬರಬೇಕು. ಮಹಿಳೆಯರಿಗೆ ರಾಜಕೀಯ ಪ್ರಜ್ಞೆ ಬರಬೇಕು ಎಂಬ ಬಗ್ಗೆ ಚಿಂತನೆ ನಡೆದವು. ಕನಕದಾಸರ ಕೀರ್ತನೆಗಳನ್ನು ಲೀಲಾ ಆನಂದ್‌ ಮತ್ತು ಬಳಗದವರು ಹಾಡಿದರು.  

ಗಂಡಸರೇ ಹೊರೆ...: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಸುನಂದಮ್ಮ ಮಾತನಾಡಿ, ‘ಹೆಣ್ಣುಮಕ್ಕಳು ಹೊರೆಯಲ್ಲ. ಗಂಡಸರೇ ಹೊರೆ. ಹೊತ್ತು, ಹೆತ್ತು, ಸಲಹಿ, ಬಟ್ಟೆ ತೊಳೆದು, ಆಹಾರ ಕೊಟ್ಟು ಎಲ್ಲವನ್ನೂ ಮಾಡುವುದು ನಾವು. ಇದ್ಯಾವುದೂ ಬಜೆಟ್‌ನಲ್ಲಿ ಬರುವುದಿಲ್ಲ. ಆದರೆ, ಹೆಣ್ಣು ಹೊರೆ ಎಂದು ಭ್ರೂಣ ಹತ್ಯೆ ನಡೆಯುತ್ತಿದೆ. ಓದಿದವರಲ್ಲೂ ಈ ಪ್ರವೃತ್ತಿ ಇದೆ ಎಂದು ವಿಷಾದಿಸಿದರು.‌

‘ಆಹಾರದ ಒಡೆಯರು ನಾವು. ಆದರೆ, ಅಪೌಷ್ಟಿಕತೆಯಿಂದ ಬಳಲುವವರೂ ನಾವೇ. ಆಯ್ಕೆ, ನಿರ್ಣಯ ಮತ್ತು ಹಕ್ಕು ಚಲಾಯಿಸುವ ಸ್ವಾತಂತ್ರ್ಯ ಬೇಕು. ಅದಿಲ್ಲದಿದ್ದರೆ ಸ್ವಾತಂತ್ರ್ಯಕ್ಕೆ ಅರ್ಥ ಇರುವುದಿಲ್ಲ’ ಎಂದರು.

ಪಂಚಾಯಿತಿ ಸಭೆಯಲ್ಲಿ ಗಂಡನಿಗೇನು ಕೆಲಸ?

‘ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಶೇ 50ರಷ್ಟು ಮಹಿಳಾ ಮೀಸಲಾತಿ ಇದೆ. ಆದರೆ, ನೀವು ಎಷ್ಟು ಜನ ಒಬ್ಬರೇ ಸಭೆಯಲ್ಲಿ ಭಾಗವಹಿಸುತ್ತೀರಿ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. 

‘ಸಭೆಗಳಿಗೆ ನಿಮ್ಮ ಗಂಡಂದಿರನ್ನು ಕರೆದುಕೊಂಡೇ ಹೋಗುತ್ತೀರಿ. ಗ್ರಾಮ ಸಭೆ ನಡೀತಿರಬೇಕಾದರೆ ಗಂಡ ಹಿಂದೆ ಕುಂತಿರ್ತಾನೆ. ಅವನಿಗೇನು ಕೆಲಸ? ಬಿಬಿಎಂಪಿಯಲ್ಲಿ 198 ಸದಸ್ಯರ ಪೈಕಿ 100 ಮಂದಿ ಮಹಿಳೆಯರೇ ಇದ್ದಾರೆ. ಅಲ್ಲೂ ಕೂಡಾ ಗಂಡಂದಿರನ್ನು ಕರೆದುಕೊಂಡೇ ಬಂದಿರುತ್ತಾರೆ’ ಎಂದು ಹೇಳಿದರು

‘ಗಂಡು ಮಗು ಬೇಕು ಎನ್ನುವ ವ್ಯಾಮೋಹ ಗಂಡಸರು– ಹೆಂಗಸರು ಇಬ್ಬರಿಗೂ ಇದೆ. ವರದಕ್ಷಿಣೆ ವ್ಯಾಮೋಹ ಹೆಣ್ಣುಮಕ್ಕಳಿಗೂ ಇದೆ. ಅತ್ತೆಯಿಂದ ಸೊಸೆಗೆ ಕಿರುಕುಳ ಎಂದೇ ಆಗಾಗ ಕೇಳಿಬರುತ್ತದೆ. ಮಾವನಿಂದ ಕಿರುಕುಳ ಎಂಬ ಮಾತು ಕೇಳಿಬರುವುದು ಅಪರೂಪ’ ಎಂದು ವಿಶ್ಲೇಷಿಸಿದರು.

‘ಏನು ಮಾಡೋದು ಹೇಳಿ, ಹೊಟ್ಟೆಕಿಚ್ಚಿಗೆ ಮದ್ದಿಲ್ಲ. ನಾನು ಮತ್ತೊಮ್ಮೆ ಮುಖ್ಯಮಂತ್ರಿ ಆದೇನು ಅಂತ ಭಾವಿಸಿ ಹೊಟ್ಟೆಕಿಚ್ಚುಪಟ್ಟವರು ಬಹಳ ಮಂದಿ. ಈಗ ಸುಮ್ಮನೆ ಕೂರಿಸಿದರು ನೋಡಿ. ಆಗಲಿ, ಜನ ಒಮ್ಮೆ ಅವಕಾಶ ಕೊಟ್ಟಿದ್ದಾರೆ. ಆ ಅವಧಿಯಲ್ಲಿ ಮನಸ್ಸಿಗೆ ತೃಪ್ತಿಯಾಗುವಂತೆ ಕೆಲಸ ಮಾಡಿದ್ದೇನೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !