ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಎಲ್ಲೆಡೆ ಶಾಂತಿಯುತ

ಚಾಮರಾಜನಗರ, ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲದಲ್ಲಿ ಉತ್ತಮ ಪ್ರತಿಕ್ರಿಯೆ
Last Updated 13 ಮೇ 2018, 11:29 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಎಲ್ಲ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ ಶಾಂತಿಯುತ ಮತದಾನ ನಡೆಯಿತು.

ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಮೊದಮೊದಲು ತೀರಾ ನೀರಸ ಎನ್ನುವಂತಹ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಬೆಳಿಗ್ಗೆ 9 ಗಂಟೆಯ ನಂತರ ಮತದಾನ ಬಿರುಸು ಪಡೆಯಿತು.

ಮೊದಲ ಎರಡು ಗಂಟೆಯ ಅವಧಿಯಲ್ಲಿ ಕೇವಲ ಶೇ 10ರಷ್ಟು ಮಾತ್ರ ಮತದಾನವಾಗಿತ್ತು. ನಂತರ, ಒಂದೇ ಗಂಟೆಯ ಅವಧಿಯಲ್ಲಿ ಮತದಾನದ ಪ್ರಮಾಣ ‌ಶೇ 16ರಷ್ಟಾಯಿತು. ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಶೇ 45.83ರಷ್ಟು ಮಂದಿ ಮತದಾನ ಮಾಡಿದ್ದರು. ಮಧ್ಯಾಹ್ನ 3 ಗಂಟೆಗೆ ಶೇ 60.65ರಷ್ಟು ಮತದಾನವಾಗಿತ್ತು.

ಬೆಂಗಳೂರು, ಮೈಸೂರು, ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗಿದ್ದವರು ತಮ್ಮ ತಮ್ಮ ಊರುಗಳಿಗೆ ಹಿಂತಿರುಗಿದ ನಂತರ ಮತದಾನದ ಶೇಕಡಾವಾರು ಪ್ರಮಾಣದಲ್ಲಿ ಹೆಚ್ಚಳವಾಯಿತು. ಕೆಲವು ಗ್ರಾಮಗಳಲ್ಲಿ ಅದುವರೆಗೂ ಬಿಕೊ ಎನ್ನುತ್ತಿದ್ದ ಮತಗಟ್ಟೆಗಳಲ್ಲಿ ಒಮ್ಮಿಂದೊಮ್ಮೆಗೆ ಸರತಿ ಸಾಲುಗಳು ಸೃಷ್ಟಿಯಾದವು.‌

ವಯೋವೃದ್ಧರು, ಅಂಗವಿಕಲರಿಗಾಗಿ ಗಾಲಿ ಕುರ್ಚಿಯ ವ್ಯವಸ್ಥೆ ಮಾಡಲಾಗಿತ್ತು. ನಂಜೇದೇವನಪುರದಲ್ಲಿ ಮಹದೇವನಾಯಕ (85) ಹಾಗೂ ಇತರರನ್ನು ಗಾಲಿಕುರ್ಚಿಯ ಸಹಾಯದಿಂದ ಸಿಬ್ಬಂದಿ ಮತಗಟ್ಟೆ ಒಳಗೆ ಕರೆದುಕೊಂಡು ಹೋಗುವ ಮೂಲಕ ಸಹಾಯ ಮಾಡಿದರು. ಹನೂರು ಪಟ್ಟಣದ ಮತಗಟ್ಟೆ ಸಂಖ್ಯೆ 105ರಲ್ಲಿ ಶತಾಯುಷಿ ಬಸಮ್ಮ ಮತದಾನ ಮಾಡಿದರು.

ಮಧ್ಯಾಹ್ನದ ವೇಳೆಗೆ ಅಧಿಕವಾದ ಸ್ತ್ರೀಯರ ಸಾಲು: ಮಧ್ಯಾಹ್ನದ ವೇಳೆಗೆ ಸಾಮಾನ್ಯವಾಗಿ ಎಲ್ಲ ಮತಗಟ್ಟೆಗಳ ಮುಂದೆ ಸ್ತ್ರೀಯರ ಸಾಲುಗಳು ಹೆಚ್ಚಾದವು. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಅಡುಗೆ ಕೆಲಸವನ್ನು ಮುಗಿಸಿದ ಸ್ತ್ರೀಯರು ಸಹಜವಾಗಿಯೇ ಗುಂಪುಗುಂಪಾಗಿ ಮತಗಟ್ಟೆಗಳಿಗೆ ಬಂದರು. ಇದರಿಂದ ಉದ್ದನೆಯ ಸರತಿ ಸಾಲುಗಳು ಕಂಡು ಬಂದವು.

ಹನೂರಿನ ಕೋಣನಕೆರೆಯ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆ, ಕೊಳ್ಳೇಗಾಲದ ಪುರಾಣಿಪೋಡುವಿನ ಗಿರಿಜನ ಆಶ್ರಮ ಶಾಲೆ, ಚಾಮರಾಜನಗರ ಕೆ.ಗುಡಿಯ ಆಶ್ರಮ ಶಾಲೆ, ಗುಂಡ್ಲುಪೇಟೆಯ ಮದ್ದೂರಿನ ಆಶ್ರಮ ಶಾಲೆಗಳಲ್ಲಿನ ಮತಗಟ್ಟೆಗಳನ್ನು ‘ಎಥ್ನಿಕ್’ ಮತಗಟ್ಟೆಗಳೆಂದು ಕರೆದು, ಸಾಂಪ್ರದಾಯಿಕವಾಗಿ ಸಿಂಗರಿಸಲಾಗಿತ್ತು.

ಕೆಲವೆಡೆ ತಳಿರು ತೋರಣಗಳನ್ನು ಕಟ್ಟುವ ಮೂಲಕ ಮತಗಟ್ಟೆಗಳನ್ನು ಸಿಂಗರಿಸಲಾಗಿದ್ದರೆ ಮತ್ತೆ ಕೆಲವೆಡೆ ಬಣ್ಣಬಣ್ಣದ ಕಾಗದಗಳು, ಬಲೂನು, ಬಾಳೆಯ ಕಂದುಗಳನ್ನು ಕಟ್ಟಲಾಗಿತ್ತು. ಕೆಲವು ಮತಗಟ್ಟೆಗಳ ಮುಂದೆ ಚಿತ್ತಾಕರ್ಷಕ ರಂಗೋಲಿಗಳೂ ಇದ್ದವು. ಬುಡಕಟ್ಟು ಜನಾಂಗದ ಸಂಸ್ಕೃತಿ ಬಿಂಬಿಸುವಂತಹ ಚಿತ್ರಗಳು ಅಲ್ಲಿದ್ದವು. ಕೆ.ಗುಡಿ ಮತಗಟ್ಟೆಯ ಮುಂದೆ ಆದಿವಾಸಿಗಳ ನೃತ್ಯವನ್ನು ಪ್ರದರ್ಶಿಸುವ ಮೂಲಕ ಬುಡಕಟ್ಟು ಜನಾಂಗದವರು ಮತದಾನ ಮಾಡುವಂತೆ ಪ್ರೇರೇಪಿಸಿದ್ದು ಈ ಬಾರಿಯ ವಿಶೇಷವಾಗಿತ್ತು.

ತಾಂತ್ರಿಕ ದೋಷ

ಚಾಮರಾಜನಗರ ತಾಲ್ಲೂಕು ನಂಜೇದೇವನಪುರ ಗ್ರಾಮದ ಮತಗಟ್ಟೆ ಸಂಖ್ಯೆ 230ರಲ್ಲಿ ವಿದ್ಯುನ್ಮಾನ ಮತಯಂತ್ರವು ನಿಧಾನಗತಿಯಲ್ಲಿ ಕಾರ್ಯನಿರ್ವಹಿಸತೊಡಗಿತು. ಒಂದು ಮತದಾನಕ್ಕೂ ಮತ್ತೊಂದು ಮತದಾನಕ್ಕೂ ಇರುವ ಸಮಯದ ಅಂತರ ಹೆಚ್ಚಾಗತೊಡಗಿತು. ಇದರಿಂದ ಮತದಾನ ಪ್ರಕ್ರಿಯೆ ನಿಧಾನವಾಯಿತು. ಸ್ಥಳಕ್ಕೆ ಬಂದ ತಂತ್ರಜ್ಞರು ಮತಯಂತ್ರವನ್ನು ಸರಿಪಡಿಸಿದ ಬಳಿಕವಷ್ಟೇ ಮತದಾನ ಮುಂದುವರೆಯಿತು.

ಇದೇ ರೀತಿ ಹಂಡರಕಳ್ಳಿ ಮತಗಟ್ಟೆ ಸಂಖ್ಯೆ 34ರ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿತು. 300 ಮತಗಳು ಚಲಾವಣೆಯಾದ ಬಳಿಕ ಯಂತ್ರ ಸ್ಥಗಿತಗೊಂಡಿತು. ಒಂದು ಸಾವಿರಕ್ಕೂ ಅಧಿಕ ಮತದಾರರು ಇರುವ ಈ ಮತಗಟ್ಟೆಯ ಮತದಾರರು ಗಲಿಬಿಲಿಗೊಂಡರು. ತಂತ್ರಜ್ಞರು ಮತಯಂತ್ರವನ್ನು ದುರಸ್ತಿಪಡಿಸಿದ ಬಳಿಕ ಮತದಾನ ಮತ್ತೆ ಆರಂಭವಾಯಿತು.

ಗ್ರಾಮಸ್ಥರ ಮನವೊಲಿಕೆ

ಕಾಡಂಚಿನ ಗ್ರಾಮಗಳಾದ ಹನೂರಿನ ಚಂಗಡಿ, ಮಾರ್ಟಳ್ಳಿ, ಗುಂಡ್ಲುಪೇಟೆಯ ಚಿಕ್ಕಎಲೆಚೆಟ್ಟಿ ಹಾಗೂ ಹಿರಿಕಾಟಿ ಗ್ರಾಮಸ್ಥರು ಮತದಾನಕ್ಕೆ ಬಹಿಷ್ಕಾರ ಹಾಕಿದ್ದರು. ಬೆಳಿಗ್ಗೆ 11 ಗಂಟೆಯವರೆಗೂ ಯಾರೊಬ್ಬರೂ ಮತ ಚಲಾಯಿಸಲು ಬರಲಿಲ್ಲ. ಆಗ ಸ್ಥಳಕ್ಕೆ ಬಂದ ಚುನಾವಣಾಧಿಕಾರಗಳು ಗ್ರಾಮಸ್ಥರ ಮನವೊಲಿಸಿದರು. ಮಧ್ಯಾಹ್ನ 12 ಗಂಟೆಯ ನಂತರ ಇಲ್ಲಿ ಹೆಚ್ಚಿನ ಮತದಾನವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT