ನಾನು ಹೆತ್ತವ್ವ, ಸಲಹುವಳು ಭಾರತ ಮಾತೆ

ಸೋಮವಾರ, ಮಾರ್ಚ್ 25, 2019
28 °C

ನಾನು ಹೆತ್ತವ್ವ, ಸಲಹುವಳು ಭಾರತ ಮಾತೆ

Published:
Updated:
Prajavani

ಶಿವಮೊಗ್ಗ: ‘ನಾನು ಅವನನ್ನು ಹೆತ್ತಿದ್ದೇನೆ ಅಷ್ಟೇ. ಸಲಹುತ್ತಿರುವುದು ಭಾರತಮಾತೆ. ಅವಳ ಮಡಿಲಿಗೆ ಹಾಕಿ ಇಲ್ಲಿಗೆ 17 ವರ್ಷಗಳಾಗಿವೆ. ನನ್ನ ಮಗನ ಜತೆ ದೇಶದ ಎಲ್ಲ ಸೈನಿಕರನ್ನೂ ಆಕೆ ಜೋಪಾನ ಮಾಡಲಿ. ಇದು ನನ್ನ ಹಾರೈಕೆ...’

ಭದ್ರಾವತಿ ತಾಲ್ಲೂಕು ಉಕ್ಕುಂದದ ವಸಂತಮ್ಮ ಅವರ ಮನದಾಳ ಇದು. ಪುತ್ರ ಸಿ.ಮಂಜುನಾಥ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಗನ ದೇಶಸೇವೆ ತಾಯಿಗೆ ಹೆಮ್ಮೆ ತಂದಿದೆ. ಮಗನ ಶೌರ್ಯ, ಸಾಹಸ ಅವರಲ್ಲೂ ಆತ್ಮವಿಶ್ವಾಸ ಮೂಡಿಸಿದೆ.

‘ಅವನಿನ್ನೂ 9ನೇ ತರಗತಿಯಲ್ಲಿದ್ದಾಗಲೇ ಪತಿ ತೀರಿಕೊಂಡರು. ಕೂಲಿನಾಲಿ ಮಾಡಿ ಇಬ್ಬರು ಮಕ್ಕಳನ್ನು ಓದಿಸಿದೆ. ಎಸ್ಸೆಸ್ಸೆಲ್ಸಿ ಮಗಿಸಿದ ನಂತರ ಡಿಪ್ಲೊಮಾ ಸೇರಿಸಿದೆ. ಅದು ಮುಗಿಯುವ ವೇಳೆಗೆ ಸೇನೆಯಲ್ಲಿ ಕೆಲಸ ಸಿಕ್ಕಿತು. ನನ್ನ ಅಣ್ಣನ ಮಗ ಗೋಪಿ ಅರ್ಜಿ ಹಾಕಿಸಿದ್ದ. 19 ತುಂಬುವ ಮೊದಲೇ ಕೆಲಸಕ್ಕೆ ಸೇರಿದ. ಆರಂಭದ ದಿನಗಳಲ್ಲಿ ನಿತ್ಯವೂ ಆತಂಕ. ನಿದ್ದೆಯೇ ಬರುತ್ತಿರಲಿಲ್ಲ. ಮಗನ ಕ್ಷೇಮಕ್ಕೆ ಮನ ತುಡಿಯುತ್ತಿತ್ತು. ಪಂಜಾಬ್, ಕಾಶ್ಮೀರಗಳಲ್ಲಿ ಕೆಲಸ ಮಾಡುವಾಗ ಕಳವಳ ಕಡಿಮೆಯಾಗುತ್ತಿರಲಿಲ್ಲ’.

‘ಈಗ ಅಸ್ಸಾಂಗೆ ವರ್ಗವಾಗಿದೆ. ಪುಲ್ವಾಮಾ ಘಟನೆ ನಂತರ ಹಲವು ದಿನ ನಿದ್ದೆಯೇ ಸುಳಿದಿರಲಿಲ್ಲ. ಎಲ್ಲರೂ ನಮ್ಮ ಮಕ್ಕಳು ಅಲ್ಲವೇ? ಅವರೆಲ್ಲ ದೇಶಸೇವೆ ಮಾಡುವುದು ಆದ್ಯ ಕರ್ತವ್ಯ. ನಾವೇ ಧೈರ್ಯಗೆಟ್ಟರೆ ಅವರು ಅಲ್ಲಿ ನೆಮ್ಮದಿಯಾಗಿ ಕೆಲಸ ಮಾಡಲು ಆಗುವುದಿಲ್ಲ. ಹಾಗಾಗಿ, ಅವನಿಗೆ ಹೆದರಬೇಡ ಎಂದು ನಾನೇ ಧೈರ್ಯ ತುಂಬುತ್ತೇನೆ’.

‘ವಾರಕ್ಕೆ ಎರಡು ದಿನ ಕರೆ ಮಾಡಿ ಮಾತನಾಡುತ್ತಾನೆ. ಸಾಮಾನ್ಯ ಸನ್ನಿವೇಶ ಇದ್ದಾಗ ವರ್ಷಕ್ಕೆ ಎರಡು ಬಾರಿ ಬಂದು ಹೋಗುತ್ತಾನೆ. ತುರ್ತು ಸಂದರ್ಭಗಳಲ್ಲಿ ರಜೆ ರದ್ದಾಗಿ ಎಷ್ಟೋ ಬಾರಿ ವಾಪಸ್ ಹೋಗಿದ್ದಾನೆ. ಸೊಸೆ ಸುನಿತಾ, ಇಬ್ಬರು ಮೊಮ್ಮಕ್ಕಳು ಶಿವಮೊಗ್ಗದಲ್ಲೇ ನೆಲೆಸಿದ್ದಾರೆ. ಆರೋಗ್ಯ ಸಮಸ್ಯೆ ಕಾರಣ ಕೆಲಸ ಮಾಡಲು ಆಗುತ್ತಿಲ್ಲ. ಮಗನೇ ಹಣ ಕಳುಹಿಸುತ್ತಾನೆ. ಊರಲ್ಲೇ ಮನೆ ಕಟ್ಟಿಸಿಕೊಟ್ಟಿದ್ದಾನೆ. ಹೆಂಡತಿ, ಮಕ್ಕಳಿದ್ದರೂ ತಾಯಿಯನ್ನು ಮರೆಯದ ಅವನ ಪ್ರೀತಿ ಅನನ್ಯ’ ಎಂದು ಬಣ್ಣಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !