ಸರ್ಕಾರಕ್ಕೆ ಕೆಟ್ಟ ಹೆಸರು ಬಾರದಂತೆ ಕೆಲಸ ಮಾಡಿ: ಎಚ್.ಡಿ.ಕುಮಾರಸ್ವಾಮಿ

7
ರಕ್ಷಣಾ ತಂಡ, ಸ್ಥಳೀಯರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಧನ್ಯವಾದ

ಸರ್ಕಾರಕ್ಕೆ ಕೆಟ್ಟ ಹೆಸರು ಬಾರದಂತೆ ಕೆಲಸ ಮಾಡಿ: ಎಚ್.ಡಿ.ಕುಮಾರಸ್ವಾಮಿ

Published:
Updated:

ಮಡಿಕೇರಿ: ‘ಪ್ರಕೃತಿ ವಿಕೋಪಕ್ಕೆ ಕೊಡಗು ಜಿಲ್ಲೆಯಲ್ಲಿ ಭಾರಿ ಅನಾಹುತ ಸಂಭವಿಸಿದ್ದು ದುರಂತ. ಬೆಟ್ಟ ಕುಸಿತ ಹಾಗೂ ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಿಸಿದ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಶನಿವಾರ ಅರ್ಧ ಗಂಟೆ ಭೇಟಿಗೆ ಆಕ್ಷೇಪ ವ್ಯಕ್ತವಾಗಿದ್ದ ಬೆನ್ನಲ್ಲೇ ಭಾನುವಾರ ಮತ್ತೆ ಪ್ರವಾಹಪೀಡಿತ ಪ್ರದೇಶಗಳನ್ನು ವೀಕ್ಷಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

‘ಪರಿಸ್ಥಿತಿ ಸುಧಾರಣೆ ಆಗುವ ತನಕವೂ ರಾಜ್ಯಮಟ್ಟದ ಅಧಿಕಾರಿಗಳು ಜಿಲ್ಲೆಯಲ್ಲೇ ಮೊಕ್ಕಾಂ ಹೂಡಲಿದ್ದಾರೆ. ಸಂತ್ರಸ್ತರಿಗೆ ಸೂರು ಕಲ್ಪಿಸಲು ಸರ್ಕಾರ ಬದ್ಧವಾಗಿದೆ’ ಎಂದರು.

‘ಲೋಕೋಪಯೋಗಿ ಇಲಾಖೆಯ ಕೆಲಸವೇ ಹೆಚ್ಚು. ಎಲ್ಲ ರಸ್ತೆಗಳಲ್ಲೂ ಲಘು ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ಸರ್ಕಾರಕ್ಕೆ ಕೆಟ್ಟ ಹೆಸರು ಬಾರದಂತೆ ಎಚ್ಚರಿಕೆಯಿಂದ ಪರಿಹಾರ ಕೆಲಸ ಮಾಡಬೇಕು. ಪರಿಹಾರ ಕೇಂದ್ರಗಳಲ್ಲಿ ಸಮಸ್ಯೆ ಉಂಟಾದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು’ ಎಂದು ಎಚ್ಚರಿಸಿದರು.

‘ವಿದ್ಯುತ್‌ ಸಂಪರ್ಕ ಕಲ್ಪಿಸಲು ವಿವಿಧೆಡೆಯಿಂದ 6 ತಂಡಗಳು ಜಿಲ್ಲೆಗೆ ಬಂದಿವೆ. ಪರ್ಯಾಯ ವಸತಿ ಕಲ್ಪಿಸಲು ಸರ್ಕಾರಿ ಜಾಗವನ್ನು ಕೂಡಲೇ ಗುರುತಿಸಲಾಗುವುದು. ಕಾರ್ಮಿಕರಿಗೆ ಉದ್ಯೋಗ ಖಾತ್ರಿಯಲ್ಲಿ ಕೂಲಿ ಕೊಡಲಾಗುವುದು’ ಎಂದು ಹೇಳಿದರು.

‘ಕೃಷಿ ಇಲಾಖೆ ಹಾಗೂ ಕಾಫಿ ಮಂಡಳಿ ಅಧಿಕಾರಿಗಳು ಬೆಳೆ ನಷ್ಟದ ಸಮೀಕ್ಷೆ ನಡೆಸಿ ಶೀಘ್ರವೇ ವರದಿ ಸಲ್ಲಿಸಬೇಕು’ ಎಂದು ಹೇಳಿದರು.

ಸ್ವಚ್ಛತೆಗೆ ಬಿಬಿಎಂಪಿ ಪೌರಕಾರ್ಮಿಕರು: ಕುಶಾಲನಗರದ ಪ್ರವಾಹಪೀಡಿತ ಪ್ರದೇಶದ ಮನೆಗಳ ಸ್ವಚ್ಛತೆಗೆ ಬಿಬಿಎಂಪಿಯ 300 ಪೌರಕಾರ್ಮಿಕರನ್ನು ಕಳುಹಿಸಿಕೊಡಲಾಗುವುದು ಎಂದರು.

‘ಇಂತಹ ಪರಿಸ್ಥಿತಿಯಲ್ಲೂ ವಿರೋಧ ಪಕ್ಷದ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ಸಮಸ್ಯೆಗಳಿದ್ದರೆ ಸರ್ಕಾರ ಮಾಹಿತಿ ನೀಡಬೇಕು. ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ. ಪರಿಹಾರ ಕೇಂದ್ರಗಳಲ್ಲಿ ವ್ಯವಸ್ಥೆ ಸರಿಯಿಲ್ಲವೆಂದು ಆರೋಪಿಸುತ್ತಿದ್ದಾರೆ. ಕೆಲವರಲ್ಲಿ ಸಣ್ಣತನ ಇರುತ್ತದೆ’ ಎಂದು ದೂರಿದರು.

***

ಮಾಹಿತಿ ಪಡೆದ ರಾಷ್ಟ್ರಪತಿ, ಪ್ರಧಾನಿ 
ಬೆಂಗಳೂರು: ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಭಾನುವಾರ ದೂರವಾಣಿ ಕರೆ ಮಾಡಿ ಕೊಡಗು ಜಿಲ್ಲೆಯ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು.

‘ಕೊಡಗು ಜಿಲ್ಲಾಡಳಿತವು ರಕ್ಷಣೆ ಹಾಗೂ ಪರಿಹಾರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಸೇನಾ ಸಿಬ್ಬಂದಿ, ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. 3,500ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ’ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.

‘ಕೇಂದ್ರ ಸರ್ಕಾರವು ರಕ್ಷಣೆ ಹಾಗೂ ಪರಿಹಾರ ಕಾರ್ಯಗಳಿಗೆ ಎಲ್ಲ ರೀತಿಯ ನೆರವು ನೀಡಲಿದೆ’ ಎಂದು ಮೋದಿ ಭರವಸೆ ನೀಡಿದರು.

***

ಅಧಿಕಾರಿಗಳಿಂದ ತಾರತಮ್ಯ: ಆರೋಪ
ಕೊಳ್ಳೇಗಾಲ: ‘ಪರಿಹಾರ ಕೇಂದ್ರಕ್ಕೆ ಬಂದು ಮೂರು ದಿನಗಳಾದರೂ ನಮಗೆ ಅಗತ್ಯ ಸಾಮಗ್ರಿ ಕೊಟ್ಟಿಲ್ಲ. ಶನಿವಾರ ಬಂದ ಹಳೆ ಅಣಗಳ್ಳಿ ಗ್ರಾಮಸ್ಥರಿಗೆ ಅಧಿಕಾರಿಗಳು ಎಲ್ಲ ಸೌಲಭ್ಯ ಕಲ್ಪಿಸಿದ್ದಾರೆ’ ಎಂದು ಆರೋಪಿಸಿ ದಾಸನಪುರ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು.

ಪ್ರವಾಹಪೀಡಿತ ಸಂತ್ರಸ್ತರಿಗಾಗಿ, ಪಟ್ಟಣದ ಬಿಸಿಎಂ ಹಾಸ್ಟೆಲ್‌ನಲ್ಲಿ ಪರಿಹಾರ ಕೇಂದ್ರ ತೆರೆದಿದ್ದು, ದಾಸನಪುರ ಗ್ರಾಮಸ್ಥರನ್ನು ಅಲ್ಲಿಗೆ ಸ್ಥಳಾಂತರ ಮಾಡಲಾಗಿದೆ. ಈಗ ಹಳೆ ಅಣಗಳ್ಳಿ ಗ್ರಾಮಸ್ಥರಿಗೂ ಆಶ್ರಯ ನೀಡಲಾಗಿದೆ.

‘ಅಧಿಕಾರಿಗಳು ತಾರತಮ್ಯ ಎಸಗುತ್ತಿದ್ದಾರೆ. ನಮಗೆ ಯಾವುದೇ ರೀತಿಯ ಸೌಕರ್ಯ ಇಲ್ಲ. ನಮ್ಮನ್ನು ಬೇರೆ ಕಡೆ ಕಳುಹಿಸಿಕೊಡಿ. ಇಲ್ಲವಾದರೆ, ನಮ್ಮ ಊರಿಗೆ ಹೋಗುತ್ತೇವೆ. ಪ್ರವಾಹ ಬಂದರೂ ಅಲ್ಲೇ ಸಾಯುತ್ತೇವೆ’ ಎಂದು ದಾಸನಪುರ ಗ್ರಾಮಸ್ಥರು ಒತ್ತಾಯಿಸಿದರು.

***
‘ಸಂತ್ರಸ್ತರಿಗೆ ಎರಡು ತಿಂಗಳ ವೇತನ’

ಮೈಸೂರು: ಕೊಡಗು ಹಾಗೂ ಕೇರಳದ ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ಕಾಗಿ ಎರಡು ತಿಂಗಳ ವೇತನ ನೀಡುವುದಾಗಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತಿಳಿಸಿದರು.

ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಒಂದು ತಿಂಗಳ ವೇತನವನ್ನು ಕೊಡಗಿಗೆ ಹಾಗೂ ಇನ್ನೊಂದು ತಿಂಗಳ ವೇತನವನ್ನು ಕೇರಳದ ಸಂತ್ರಸ್ತರಿಗೆ ನೀಡುವುದಾಗಿ ಹೇಳಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !