ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನನದೊಳು ಅರಳುವ ಚಿಣ್ಣರ ಕನಸಿನ ಕಾವ್ಯ

ಗ್ರಾಮೀಣ ಸೊಗಡು ಬಿಂಬಿಸುವ ಜೀವಗ್ರಾಮ ‘ಹಿಂಗಾರ’
Last Updated 31 ಮಾರ್ಚ್ 2018, 9:31 IST
ಅಕ್ಷರ ಗಾತ್ರ

ಶಿವಮೊಗ್ಗ: ಗ್ರಾಮೀಣ ಪ್ರದೇಶದ ಪರಿಚಯವೇ ಇಲ್ಲದ ಮಕ್ಕಳಿಗೆ ಹಳ್ಳಿ ಸೊಗಡಿನ ಜೀವನಶೈಲಿ ಪರಿಚಯಿಸುವ ವಿಶಿಷ್ಟ ತಾಣ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಬಳಿಯ ‘ಹಿಂಗಾರ’.

ಕಾರ್ಪೊರೇಟ್‌ ಸಂಸ್ಕೃತಿಯ ನಗರ ಪ್ರದೇಶಗಳಲ್ಲಿ ಬೆಳೆದ ಮಕ್ಕಳಿಗೆ ಗ್ರಾಮೀಣ ಜೀವನ ಅದ್ಭುತ ಅನುಭವ ಕಟ್ಟಿಕೊಡುತ್ತದೆ. ಅದರಲ್ಲೂ ಮಲೆನಾಡಿನ ದಟ್ಟ ಕಾನನದ ಮಧ್ಯೆ ಇಂತಹ ಗ್ರಾಮ ಇದ್ದರೆ ಅದರ ಅನುಭೂತಿಯೇ ವಿಭಿನ್ನ. ‘ಹಿಂಗಾರ’ದ ಮೂಲಕ ಮಕ್ಕಳಿಗೆ ದೊರಕಿಸುವ ಪ್ರಯತ್ನ ಪ್ರತಿ ವರ್ಷವೂ ಸದ್ದಿಲ್ಲದೇ ಇಲ್ಲಿ ನಡೆಯುತ್ತಿದೆ.

ನಗರ ಜೀವನ ಮಕ್ಕಳ ಬಾಲ್ಯದ ಸವಿಗನಸುಗಳನ್ನೇ ಮುರುಟಿ ಹಾಕುತ್ತಿದೆ. ನಾಲ್ಕು ಗೋಡೆಗಳ ಮಧ್ಯೆ ಮಕ್ಕಳು ಪಠ್ಯಪುಸ್ತಕದ ಹುಳುಗಳ ರೀತಿ ಅಂಕ ಗಳಿಕೆ ಯಂತ್ರಗಳಾಗಿದ್ದಾರೆ. ಲವಲವಿಕೆ ಕಳೆದುಕೊಂಡು ಯಾಂತ್ರೀಕೃತ ಗೊಂಬೆಗಳಂತೆ ಬದುಕು ರೂಪಿಸಿಕೊಳ್ಳುತ್ತಿದ್ದಾರೆ. ಅಂತಹ ಮಕ್ಕಳಿಗೆ ಮಲೆನಾಡಿನ ನಿಸರ್ಗದ ತಾಣಗಳು ಪ್ರಕೃತಿಯ ಅಂತರಾಳ ಪರಿಚಿಸುವ ಜತೆಗೆ ಗ್ರಾಮೀಣ ಜನರ ಒಡನಾಟ, ಅಲ್ಲಿನ ಸಂಪ್ರದಾಯ, ಕೃಷಿ, ದುಡಿಮೆಯ ಶ್ರಮದ ಪರಿಕಲ್ಪನೆ ಬದುಕಿಗೆ ಪ್ರೇರಣೆ ನೀಡುತ್ತದೆ ಎನ್ನುತ್ತಾರೆ ಇದರ ರೂವಾರಿ ಶಶಾಂಕ್‌ ಹೆಗ್ಡೆ.

(ಹಿಂಗಾರದಲ್ಲಿ ಮಕ್ಕಳ ಖುಷಿಯ ಕ್ಷಣ.)

ತೀರ್ಥಹಳ್ಳಿಯಿಂದ ಆಗುಂಬೆ ಮಾರ್ಗದಲ್ಲಿ 22 ಕಿ.ಮೀ. ಸಾಗಿದರೆ ಹೊಸೂರು–ಗುಡ್ಡೆಕೇರಿ ಸಿಗುತ್ತದೆ. ಅಲ್ಲಿಂದ ಕುಂದಾದ್ರಿಯ ಕಡೆ ಎಡಕ್ಕೆ ತಿರುವು ತೆಗೆದುಕೊಂಡು 500 ಮೀಟರ್ ಸಾಗಿದರೆ ಹಿಂಗಾರದ ಬಾಗಿಲು ತೆರೆದುಕೊಳ್ಳುತ್ತದೆ. ಪ್ರಗತಿಪರ ರೈತ ಜಯರಾಮ ಹೆಗ್ಡೆ ಅವರ ಪುತ್ರ ಶಶಾಂಕ್‌ ಹೆಗ್ಡೆ ಅವರ ಕನಸಿನ ಕೂಸು ಈ ಹಿಂಗಾರ.

ಓದು ಮುಗಿದ ನಂತರ ಉನ್ನತ ಶಿಕ್ಷಣಕ್ಕೆ ಆಸ್ಟ್ರೇಲಿಯಾಕ್ಕೆ ಹೋಗಿದ್ದ ಶಶಾಂಕ್ ಅಲ್ಲೇ ಉದ್ಯೋಗ ಗಿಟ್ಟಿಸಿಕೊಂಡು ನೆಲೆ ನಿಂತಿದ್ದರು. ಇಲ್ಲಿ ಅವರ ತಂದೆ ತೋಟ, ಗದ್ದೆ ನೋಡಿಕೊಳ್ಳುವ ಜತೆಗೆ ಪ್ರಕೃತಿಯ ಮಡಿಲಲ್ಲಿ ‘ಹಿಂಗಾರ ರೆಸಾರ್ಟ್‌’ ನಡೆಸುತ್ತಿದ್ದರು. ಒಂಟಿಯಾಗಿದ್ದ ತಂದೆಗೆ ನೆರವಾಗಲು ಕೈತುಂಬ ಸಂಬಳ ನೀಡುವ ಕೆಲಸಕ್ಕೆ ರಾಜೀನಾಮೆ ನೀಡಿ ಬಂದ ಶಶಾಂಕ್ ಈಗ ಅಲ್ಲೇ ನೆಲೆ ನಿಂತಿದ್ದಾರೆ. ಕಳೆದ ಐದು ವರ್ಷಗಳಿಂದ ಜೀವ ಗ್ರಾಮದ ಪರಿಕಲ್ಪನೆಗೆ ಜೀವ ಕಳೆ ತುಂಬಿದ್ದಾರೆ.

ಆಟೋಟಕ್ಕೂ ದೇಸಿ ಸ್ಪರ್ಶ: ಮಕ್ಕಳಿಗೆ ಮಲೆನಾಡಿನ ದೇಸಿ ಕ್ರೀಡೆಗಳನ್ನು ಆಡಿಸಲಾಗುತ್ತದೆ. ಹುಲಿಕುಣಿತ, ಕೆಸರು ಗದ್ದೆ ಓಟ, ಲಗೋರಿ ಆಟ, ಎತ್ತಿನ ಗಾಡಿ ಓಡಿಸುವುದು, ಬಂಡಿ ಎಳೆಯುವುದು ಮತ್ತಿತರ ಆಟಗಳಿಗೆ ವಿಶೇಷ ಆದ್ಯತೆ ಇಲ್ಲಿದೆ. ಸ್ಥಳೀಯ ಕಲಾವಿದರು ಹುಲಿಕುಣಿತಕ್ಕೆ ಅಗತ್ಯವಾದ ಬಣ್ಣಗಳ ಚಿತ್ತಾರ ಮೂಡಿಸುತ್ತಾರೆ. ಹುಲಿ ತಮ್ಮಯ್ಯ, ರಮೇಶ್ ಮತ್ತವರ ತಂಡ ಹುಲಿ ವೇಷದ ವಿನ್ಯಾಸ ಮಾಡುತ್ತಾರೆ. ದೇಸಿ ಕಲೆ, ಕಲಾಕೃತಿಗಳಿಂದ ಇಡೀ ಜೀವ ಗ್ರಾಮ ಮೈದಳೆಯುತ್ತದೆ. ಕೆಸರು ಗದ್ದೆಯಲ್ಲಿ ಮಕ್ಕಳು ಓಡಿ, ಕುಣಿದು, ಕುಪ್ಪಳಿಸಿ ಮಣ್ಣಿನಾಕೃತಿ ತಳೆಯುತ್ತಾರೆ. ಬಣ್ಣ ಬಣ್ಣದ ಮುಖವಾಡ ಧರಿಸಿ ಹೊಸ ಲೋಕವನ್ನೇ ಸೃಷ್ಟಿಸುತ್ತಾರೆ. ಮಲೆನಾಡಿನ ಜನಪದ ಸಂಸ್ಕೃತಿಯ ಭಾಗವೇ ಆದ ಅಂಟಿಗೆ ಪಂಟಿಗೆ ಹಾಡುಗಳಿಗೆ ಇಲ್ಲಿ ವಿಶೇಷ ಪ್ರಾಶಸ್ತ್ಯ ನೀಡಲಾಗುತ್ತದೆ. ರೋಹಿತ್ ಹೊಸೂರು, ಆದರ್ಶ ಮತ್ತು ಸಂಗಡಿಗರು ಹಾಡು ಕಲಿಸುತ್ತಾರೆ.

(ಮಕ್ಕಳ ಬಡಿಗೆ ಮೇಲಿನ ನಡಿಗೆ.)

ಸ್ಥಳೀಯ ರೈತರು, ಕೃಷಿ ಕಾರ್ಮಿಕರು, ಬರಹಗಾರರು, ಛಾಯಾಗ್ರಾಹಕರು, ವನ್ಯಜೀವಿ ಸಂಶೋಧಕರು, ಖಗೋಳ ಶಾಸ್ತ್ರಜ್ಞರು, ಅಧಿಕಾರಿಗಳು ವಿಶೇಷ ಅತಿಥಿಗಳಾಗಿ ಭಾಗವಹಿಸಿ ಮಕ್ಕಳ ಜತೆ ಅನುಭವ ಹಂಚಿಕೊಳ್ಳುತ್ತಾರೆ. ಕೊನೆಯ ದಿನ ಹಿಂಗಾರದಿಂದ ಗುಡ್ಡೆಕೇರಿವರೆಗೆ ಜನಪದ ಜಾಥಾ ಇರುತ್ತದೆ.  ಗುಡ್ಡೆಕೇರಿ, ಹೊಸೂರು ಗ್ರಾಮಸ್ಥರ ಜತೆ ಕುಳಿತು ಸಾಮೂಹಿಕ ಭೋಜನ ಸವಿಯಲಾಗುತ್ತದೆ.

ವನ್ಯಜೀವಿ ತಜ್ಞ ಗಿರೀಶ್ ಗೌಡ, ಹವ್ಯಾಸಿ ಖಗೋಳ ತಜ್ಞ ಗಿರೀಶ್ ಗೌಡ, ದೇಸಿ ಸಂಸ್ಕೃತಿ ಚಿಂತಕ ರೋಹಿತ್ ಹೆಗ್ಡೆ, ಶಿಕ್ಷಣ ತಜ್ಞ ಎಚ್‌.ಪಿ. ಮಂಜುಬಾಬು, ಕೃಷಿ ತಜ್ಞರಾದ ಕಡಿದಾಳು ದಯಾನಂದ್, ಜಯರಾಮ್ ಹೆಗ್ಡೆ, ಜಯೇಶ್ ಹೆಗ್ಡೆ, ಹಸಿರು ಮನೆ ಮಹಾಬಲೇಶ್, ಕ್ರೀಡಾ ತರಬೇತುದಾರ ಹೇಮಂತ್, ಕಲಾವಿದ ಮೋಹನ್, ಕಥೆಗಾರ್ತಿ ಸೌಮ್ಯಾ ಭಾಗವತ್, ಹಬ್ಬಗಳ ಆಚರಣೆ ಕುರಿತು ಸತೀಶ್, ಮಾಸ್ಟರ್, ಹಸಿರುಮನೆ ನಂದನ್ ಸಮರ್ಥ ವಿವರ ನೀಡುತ್ತಾರೆ. ವಿಶೇಷ ಸಂಶೋಧನಾ ಗ್ರಾಮವಾಗಿ ವಾರಳಿ ಆಯ್ಕೆ ಮಾಡಿಕೊಳ್ಳಲಾಗಿದೆ.

(ಹಿಂಗಾರ ಶಿಬಿರದಲ್ಲಿ ಕಳೆದ ಬಾರಿ ಭಾಗವಹಿಸಿದ್ದ ತಂಡ.)

ಈ ಬಾರಿ ಬರುವ ಏಪ್ರಿಲ್‌ 12ರಿಂದ 15ರವರೆಗೆ ಜೀವ ಗ್ರಾಮದಲ್ಲಿ ನಾಲ್ಕು ದಿನ ವಿಶೇಷ ಶಿಬಿರ ಆಯೋಜಿಸಲಾಗಿದೆ.

**

ಕಾಡಿನ ಭಾಗವಾಗುವ ಮಕ್ಕಳು

ಜೀವ ಗ್ರಾಮಕ್ಕೆ ಬರುವ ಮಕ್ಕಳಿಗೆ ಸುತ್ತಲ ಅರಣ್ಯ ಪ್ರದೇಶಗಳನ್ನು ಆರಂಭದಲ್ಲೇ ಪರಿಚಯಿಸಲಾಗುತ್ತದೆ. ಹಲವು ಪ್ರಭೇದಗಳ ಮರ, ಗಿಡ, ಕಾಡಿನ ವಿಶೇಷ ಹಣ್ಣು, ಹಂಪಲು, ಔಷಧೀಯ ಸಸ್ಯಗಳ ಪರಿಚಯ, ವನ್ಯಜೀವಿ ಛಾಯಾಚಿತ್ರ ತರಬೇತಿ ಕೊಡಲಾಗುತ್ತದೆ.

(ಕಾಡಿನ ಮಧ್ಯೆ ಕಾಡು ಜನರ ವೇಷ.)

ಸ್ಥಳೀಯ ಕೃಷಿಕರ ಜತೆ ಗದ್ದೆನಾಟಿ ಮಾಡುವುದು, ಅಡಿಕೆ ಕೊಯ್ಲು ಸೇರಿದಂತೆ ಮಲೆನಾಡಿನ ಕೃಷಿ ಪದ್ಧತಿ ಹೇಳಿಕೊಡಲಾಗುತ್ತದೆ. ಸುತ್ತಮುತ್ತ ಇರುವ ಜಲಪಾತ, ಪ್ರೇಕ್ಷಣೀಯ ಸ್ಥಳಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಲಾಗುತ್ತದೆ. ವಿಶೇಷವಾಗಿ ಆಗುಂಬೆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಗುವ ಕಾಳಿಂಗ ಸರ್ಪ ಸೇರಿದಂತೆ ವಿವಿಧ ವನ್ಯಜೀವಿಗಳ ಕುರಿತು ಉರಗ, ವನ್ಯಜೀವಿ ತಜ್ಞರು ಸಮಗ್ರ ಮಾಹಿತಿ ನೀಡುತ್ತಾರೆ.

**

ಜೀವಗ್ರಾಮದಲ್ಲಿ ಮಕ್ಕಳ ಸಂಭ್ರಮ ಅನನ್ಯ. ಪ್ರತಿ ಮಗುವೂ ಪೋಷಕರ ಜತೆ ತೆರಳುವ ಮುನ್ನ ಕಂಬನಿ ಸುರಿಸುತ್ತದೆ. ಆ ಕ್ಷಣ ಬದುಕು ಸಾರ್ಥಕವೆನಿಸುತ್ತದೆ.

-ಶಶಾಂಕ್ ಹೆಗ್ಡೆ, ಮುಖ್ಯಸ್ಥರು, ಹಿಂಗಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT