ಸೋಮವಾರ, ಆಗಸ್ಟ್ 2, 2021
26 °C
ಕರ್ನಾಟಕ ಕಾಲೇಜು ಎನ್‌ಎಸ್‌ಎಸ್ ಘಟಕದ ಯೋಜನೆ

ಧಾರವಾಡ | ‘ಇಂಗು ಕೆರೆ’ಗೆ ಪ್ರಶಸ್ತಿ ಹಣ ಬಳಕೆ

ಇ.ಎಸ್. ಸುಧೀಂದ್ರ ಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಗ್ರಾಮೀಣಾಭಿವೃದ್ಧಿಗಾಗಿ ರಾಷ್ಟ್ರೀಯ ಪ್ರಶಸ್ತಿಯೊಂದಿಗೆ ದೊರೆತ ನಗದು ಬಹುಮಾನವನ್ನು ವಿನಿಯೋಗಿಸಿ ಕರ್ನಾಟಕ ಕಾಲೇಜು ಆವರಣದಲ್ಲಿ ಮಳೆನೀರನ್ನು ಇಂಗಿಸಲು ಕೆರೆಯೊಂದರ ನಿರ್ಮಾಣಕ್ಕೆ ರಾಷ್ಟ್ರೀಯ ಸೇವಾ ಯೋಜನಾ (ಎನ್‌ಎಸ್‌ಎಸ್) ಘಟಕ ಸಿದ್ಧತೆ ನಡೆಸಿದೆ.

ಶತಮಾನ ಕಂಡ ಕರ್ನಾಟಕ ಕಾಲೇಜು ಆವರಣದಲ್ಲಿ ಅಪರೂಪದ ಸಸ್ಯ ಸಂಕುಲಗಳಿವೆ. ಆವರಣದಲ್ಲಿ ಬಿದ್ದ ಮಳೆನೀರು ಚರಂಡಿ ಮೂಲಕ ಹೊರಕ್ಕೆ ಹೋಗುತ್ತಿದೆ. ಹೀಗೆ ಓಡುವ ನೀರನ್ನು ಹಿಡಿದು ನಿಲ್ಲಿಸಿ, ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಎನ್‌ಎಸ್‌ಎಸ್ ಘಟಕ ಯೋಜನೆಯೊಂದನ್ನು ರೂಪಿಸಿದೆ.

ಇಡೀ ಆವರಣದಿಂದ ಹರಿದು ಬರುವ ನೀರನ್ನು ತಡೆದು ನಿಲ್ಲಿಸಲು ಇಂಗು ಕೆರೆ ನಿರ್ಮಿಸುವುದು, ಇಲ್ಲಿ ಒಟ್ಟು ಎರಡು ಘಟಕಗಳಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದಾರೆ. ಈಗಾಗಲೇ ಗ್ರಾಮೀಣ ಭಾಗಗಳಲ್ಲಿ ಕೆರೆ ನಿರ್ಮಾಣ, ಶೌಚಾಲಯ, ದನದ ಕೊಟ್ಟಿಗೆ ನಿರ್ಮಿಸುವುದರ ಜತೆಗೆ ನೈರ್ಮಲ್ಯ ಹಾಗೂ ಅಂತರ್ಜಲ ಹೆಚ್ಚಳ ಕುರಿತು ಅರಿವು ಮೂಡಿಸಿದ ಅನುಭವಿಗಳು ಇವರು.

ಈ ಕುರಿತು ಪ್ರತಿಕ್ರಿಯಿಸಿದ ಎನ್‌ಎಸ್‌ಎಸ್‌ ಕಾರ್ಯಕ್ರಮ ಅಧಿಕಾರಿ ಡಾ.ಬಿ.ಎಸ್.ಭಜಂತ್ರಿ, ‘ಎನ್‌ಎಸ್‌ಎಸ್‌ ಘಟಕಕ್ಕೆ ಲಭಿಸಿರುವ ರಾಷ್ಟ್ರೀಯ ಪ್ರಶಸ್ತಿ ₹1ಲಕ್ಷ ಮೊತ್ತವನ್ನು ಪರಿಸರಕ್ಕೆ ಪೂರಕವಾದ ಶಾಶ್ವತ ಕಾರ್ಯಗಳಿಗೆ ವಿನಿಯೋಗಿಸಲು ನಿರ್ಧರಿಸಲಾಯಿತು. ನೀರು ಇಂಗಿಸಲು ಸ್ಥಳವನ್ನು ಗುರುತಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ವಿಶ್ವವಿದ್ಯಾಲಯದ ಕುಲಪತಿಗೆ ಕಳುಹಿಸಲಾಗುವುದು. ಒಪ್ಪಿಗೆ ಸಿಗುತ್ತಿದ್ದಂತೆ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳಿಂದಲೇ ಕೆರೆ ನಿರ್ಮಿಸುವುದು ನಮ್ಮ ಯೋಜನೆ’ ಎಂದರು.

‘ಲೋಕೋಪಯೋಗಿ ಇಲಾಖೆ ದರಪಟ್ಟಿಯಂತೆ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿದ್ದು ₹2ಲಕ್ಷ ಖರ್ಚಾಗುವ ಅಂದಾಜು ಇದೆ. ಪ್ರಶಸ್ತಿಯಿಂದ ಬಂದ ₹1ಲಕ್ಷದ ಜತೆಗೆ, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯಲ್ಲಿ ಸಮಾನ ಮನಸ್ಕರ ತಂಡ ಸ್ಥಾಪಿಸಿರುವ ಕ್ಷೇಮನಿಧಿಯಲ್ಲಿ ₹50ಸಾವಿರದಷ್ಟು ಹಣವಿದ್ದು ಅದನ್ನೂ ಬಳಸಲು ನಿರ್ಧರಿಸಲಾಗಿದೆ. ನನಗೆ ನೀಡಿರುವ ವೈಯಕ್ತಿಕ ಪ್ರಶಸ್ತಿಯ ನಗದನ್ನೂ ವಿನಿಯೋಗಿಸಲು ನಿರ್ಧರಿಸಿದ್ದೇನೆ. ಈಗಿರುವ ಇಂಗು ಗುಂಡಿಯನ್ನು ತುಸು ತೊಡ್ಡದು ಮಾಡಿ ಏರಿ ನಿರ್ಮಿಸುವುದು, ಸುತ್ತಲೂ ಕಲ್ಲು ಕಟ್ಟುವುದು, ಬೇಲಿ ನಿರ್ಮಿಸುವ ಯೋಜನೆ ಇದೆ’ ಎಂದು ಡಾ. ಭಜಂತ್ರಿ ವಿವರಿಸಿದರು.

*
ಅನುಮತಿಗಾಗಿ ವಿಶ್ವವಿದ್ಯಾಲಯಕ್ಕೆ ವರದಿ ಸಲ್ಲಿಸಲು ಸಿದ್ಧತೆ ನಡೆದಿದೆ. ಕಾಲೇಜು ಆರಂಭಗೊಂಡು ವಿದ್ಯಾರ್ಥಿಗಳು ಬಂದ ನಂತರ ಆರಂಭಿಸುವ ಉದ್ದೇಶವಿದೆ.
-ಡಾ. ಬಿ.ಎಫ್.ಚಾಕಲಬ್ಬಿ, ಪ್ರಾಚಾರ್ಯ, ಕರ್ನಾಟಕ ಕಾಲೇಜು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು