ಕರ್ನಾಟಕ ಕುಸ್ತಿ ಹಬ್ಬ ನಾಳೆಯಿಂದ

7
ಪೈಲ್ವಾನರಿಗೂ ಉದ್ದೀಪನಾ ಮದ್ದು ಪರೀಕ್ಷೆ

ಕರ್ನಾಟಕ ಕುಸ್ತಿ ಹಬ್ಬ ನಾಳೆಯಿಂದ

Published:
Updated:

ಬೆಳಗಾವಿ: ದೇಶೀಯ ಕ್ರೀಡೆಯಾಗಿರುವ ಮಣ್ಣಿನ ಕುಸ್ತಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಮೊದಲ ಬಾರಿಗೆ ಹಮ್ಮಿಕೊಂಡಿರುವ ‘ಕರ್ನಾಟಕ ಕುಸ್ತಿ ಹಬ್ಬ’ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ 8ರಿಂದ ಮೂರು ದಿನಗಳ ಕಾಲ ನಡೆಯಲಿದೆ.

‘ಕುಸ್ತಿಯಲ್ಲಿ ಭಾಗವಹಿಸಲು ರಾಜ್ಯದ ಪಟುಗಳಿಗೆ ಮುಕ್ತ ಅವಕಾಶವಿದೆ. ಫೆ.7ರಂದು ಹೆಸರು ನೋಂದಾಯಿಸಿಕೊಂಡು ಅಖಾಡಾಕ್ಕೆ ಇಳಿಯಬಹುದು. 14 ವರ್ಷದೊಳಗಿನ ಬಾಲಕ, ಬಾಲಕಿಯರಿಗೆ ‘ಬಾಲಕೇಸರಿ’, 17 ವರ್ಷದೊಳಗಿನ ಬಾಲಕರಿಗೆ ‘ಕರ್ನಾಟಕ ಕಿಶೋರ’, ಬಾಲಕಿಯರಿಗೆ ‘ಕರ್ನಾಟಕ ಕಿಶೋರಿ’, 17 ವರ್ಷ ಮೇಲ್ಪಟ್ಟ ಯುವಕರಿಗೆ ‘ಕರ್ನಾಟಕ ಕೇಸರಿ’, ಯುವತಿಯರಿಗೆ ‘ಮಹಿಳಾ ಕರ್ನಾಟಕ ಕೇಸರಿ’ ಪ್ರಶಸ್ತಿ ಹಾಗೂ ನಗದು ನೀಡಲಾಗುವುದು. ಒಟ್ಟು ಬಹುಮಾನದ ಮೊತ್ತ ₹ 80 ಲಕ್ಷವಾಗಲಿದೆ’ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ  ಇಲಾಖೆಯ ಉಪನಿರ್ದೇಶಕ ಸೀಬಿರಂಗಯ್ಯ ಹೇಳಿದರು.

‘ಸುಮಾರು 750 ಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. ಇವರಿಗೆ ಉಟ, ವಸತಿ, ಸಾರಿಗೆ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಕ್ರೀಡಾಂಗಣದ ಮಧ್ಯಭಾಗದಲ್ಲಿ ಕೆಂಪು ಮಣ್ಣಿನ ಎರಡು ಅಖಾಡಾಗಳನ್ನು ನಿರ್ಮಿಸಲಾಗಿದ್ದು, ಕೊನೆಯ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ. ಅಂದಾಜು 1 ಲಕ್ಷಕ್ಕಿಂತ ಹೆಚ್ಚು ಜನರು ವೀಕ್ಷಿಸಲು ಆಗಮಿಸುವ ನಿರೀಕ್ಷೆಯಿದೆ’ ಎಂದು ತಿಳಿಸಿದರು.

ಉದ್ದೀಪನಾ ಮದ್ದು ಪರೀಕ್ಷೆ

‘ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸುವ ಪಟುಗಳ ಉದ್ದೀಪನಾ ಮದ್ದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ನಾಡಾ (ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಏಜೆನ್ಸಿ) ಅಧಿಕಾರಿಗಳ ತಂಡ ಶುಕ್ರವಾರ ಬಂದಿಳಿಯಲಿದೆ. ಯಾವುದೇ ಕ್ಷಣದಲ್ಲಿ ಅವರು ಪಟುಗಳನ್ನು ಪರೀಕ್ಷೆಗೆ ಒಳಪಡಿಸಬಹುದು’ ಎಂದು ಕರ್ನಾಟಕ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘದ ಅಧ್ಯಕ್ಷ ರತನಕುಮಾರ ಮಠಪತಿ ಹೇಳಿದರು.

ಸ್ಪರ್ಧೆಯ ಕೊನೆಯ ದಿನ ಅಜರ್‌ಬೈಜಾನ್‌ ಹಾಗೂ ಜಾರ್ಜಿಯಾ ದೇಶದ ಪೈಲ್ವಾನರ ಜೊತೆ ದೇಶೀಯ ಪಟುಗಳ ಕುಸ್ತಿಯಾಡಲಿದ್ದಾರೆ. ದಂಗಲ್‌ ಖ್ಯಾತಿಯ ಗೀತಾ ಪೊಗಾಟ್‌ ಅವರನ್ನು ಸೋಲಿಸಿದ, ಹರ್ಯಾಣದ ರೀತೂ ಮಲ್ಲಿಕ್‌ ಕೂಡ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !