ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರ್ಥ್ಯದಲ್ಲಿ ತ್ರಿವಿಕ್ರಮ...

Last Updated 20 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ನನಗೆ ನೆನಪಿರುವ ಮಟ್ಟಿಗೆ ನಾನು ಎಲ್‌.ಎಸ್‌.ಶೇಷಗಿರಿರಾವ್‌ ಅವರನ್ನು ಮೊದಲು ನೋಡಿದ್ದು ವಿದ್ಯಾರ್ಥಿಯಾಗಿದ್ದಾಗ, 1962ರಲ್ಲಿ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವರು ಆಗ ಕನ್ನಡದ ಸಣ್ಣ ಕತೆಗಳ ಬಗ್ಗೆ ಮಾತನಾಡಿದ್ದರು, ಸಾಹಿತ್ಯ ಓದಲು ತೊಡಗಿದ್ದ ನನಗೆ ಅದು ತುಂಬ ಹಿಡಿಸಿತು; ಅದಕ್ಕೆ ಕಾರಣ ಅವರ ವಿಶ್ಲೇಷಣಾ ರೀತಿ ಮತ್ತು ವಿಮರ್ಶನ ವಿಚಕ್ಷಣೆ. ಆ ಹೊತ್ತಿಗೇ ಅವರು ವಿಮರ್ಶಕರೆಂದು ಪ್ರಸಿದ್ಧರಾಗಿದ್ದರು. ಆದರೆ ಅವರು ಮೊದಲು ಬರವಣಿಗೆಯನ್ನು ಆರಂಭಿಸಿದ್ದು ಸಣ್ಣ ಕತೆಗಳನ್ನು ಬರೆಯುವ ಮೂಲಕ. 1948ರಿಂದ 1963ರವರೆಗೆ ನಾಲ್ಕು ಕಥಾಸಂಗ್ರಹಗಳನ್ನು ಪ್ರಕಟಿಸಿದರು. 1950ರ ದಶಕದಲ್ಲಿ ಸಣ್ಣ ಕತೆಗಳಿಗೆ ಮೀಸಲಾಗಿದ್ದ ‘ಕತೆಗಾರ’ ಮಾಸ ಪತ್ರಿಕೆಯ ಸಂಪಾದಕರು ಪತ್ರಿಕೆಯಲ್ಲಿ ಪ್ರಕಟವಾಗುವ ಎಲ್ಲ ಕತೆಗಳ ಬಗ್ಗೆ ವಿಮರ್ಶೆಯನ್ನು ಇವರಿಂದ ಬರೆಯಿಸಿ ಮಾರನೆಯ ತಿಂಗಳ ಸಂಚಿಕೆಯಲ್ಲಿ ಅದನ್ನು ಅಚ್ಚುಮಾಡುತ್ತಿದ್ದರು. ಹೀಗಾಗಿ ಕತೆಗಾರ ಶೇಷಗಿರಿ ರಾಯರು ವಿಮರ್ಶಕರಾಗಲು ಕಾರಣವಾಯಿತು. ಈಗಲೂ ಸಾಹಿತ್ಯ ವಲಯವು ಅವರನ್ನು ಮುಖ್ಯವಾಗಿ ವಿಮರ್ಶಕರೆಂದೇ ಗುರುತಿಸುತ್ತದೆ.

ಲಕ್ಷ್ಮೇಶ್ವರ ಸ್ವಾಮಿರಾವ್ ಶೇಷಗಿರಿ ರಾವ್ ಅವರದು ಮೂಲ ಮಹಾರಾಷ್ಟ್ರ, ಪೇಶ್ವೆಗಳ ಕಾಲದಲ್ಲಿ ದೇಶಪಾಂಡೆಗಳಗಿದ್ದವರಂತೆ. ಎಂಟು ಹತ್ತು ಪೀಳಿಗೆಗಳ ಹಿಂದೆ ಆ ವಂಶ ಕನ್ನಡ ನಾಡಿಗೆ ವಲಸೆ ಬಂತು, ಇವರ ಹಿರಿಯರು ನೆಲೆಸಿದ್ದು ಲಕ್ಷ್ಮೇಶ್ವರದಲ್ಲಿ. ಇವರ ಮುತ್ತಾತನ ಕಾಲಕ್ಕೆ ಕುಟುಂಬವು ಬೆಂಗಳೂರಿಗೆ ವಲಸೆ ಬಂತು.

ಒಮ್ಮೆ ಗೆಳೆಯರೊಡನೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ಗೆ ಸೈಕಲ್‌ನಲ್ಲಿ ಹೋಗಿ ಎಲ್ಲಿ ಏನು ನೋಡಬೇಕೆಂದು ತಿಳಿಯದೆ ಕಕ್ಕಾಬಿಕ್ಕಿಯಾಗಿರುವಾಗ ಯಾರೋ ಹಿರಿಯರು ಏನು ಬೇಕೆಂದು ಇಂಗ್ಲಿಷ್‌ನಲ್ಲಿ ಕೇಳಿದರಂತೆ, ಸಂಸ್ಥೆಯನ್ನು ನೋಡುವ ಹಂಬಲ ಹೇಳಿದಾಗ ಅವರು ಯಾರನ್ನೋ ಕರೆದು ಎಲ್ಲ ತೋರಿ
ಸಲು ಹೇಳಿದರಂತೆ. ವಾಪಸು ಬಂದಾಗಿ ಹುಡುಗರಿಗಾಗಿ ಐಸ್‌ಕ್ರೀಂ ತರಿಸಿದ್ದರಂತೆ. ಅವರು ಬೇರಾರೂ ಅಲ್ಲ,
ಸರ್ ಸಿ.ವಿ. ರಾಮನ್.

ಸೆಂಟ್ರಲ್ ಕಾಲೇಜಿನಲ್ಲಿ ಅವರು ಇಂಗ್ಲಿಷ್ ಆನರ್ಸ್ ಓದಿದರು. ಆಗ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್
ಪ್ರಾಧ್ಯಾಪಕರಾಗಿದ್ದುದು ಬಿ.ಎಂ. ಶ್ರೀಕಂಠಯ್ಯನವರು, ಅವರ ಸೇವೆಯ ಕೊನೆಯ ವರ್ಷ ಅದು. ಇವರನ್ನು ಇಂಟರ್‌ವ್ಯೂ ಮಾಡಿದಾಗ ಹೇಳಿದ್ದು, ‘ಸಾನೆಟ್ ವಿಷಯ ನೀವು ಬರೆದರೆ ಇಂಗ್ಲಿಷರು ಯಾರು ಓದುತ್ತಾರೆ, ಅದೇ ಕನ್ನಡದಲ್ಲಿ ಬರೆದರೆ ನಮ್ಮ ಜನ ನಿಮ್ಮ ಬಗ್ಗೆ ಹೆಮ್ಮೆ ತಾಳುತ್ತಾರೆ’ ಎಂದು. ಅದು ಮುಂದೆ ರಾಯರ ಮಾರ್ಗದರ್ಶಕ ಸೂತ್ರವಾಯಿತು.

ಹತ್ತೊಂಬತ್ತನೇ ವಯಸ್ಸಿಗೇ ಸೆಂಟ್ರಲ್ ಕಾಲೇಜಿನಲ್ಲಿ ಆಧ್ಯಾಪಕರಾದರು. ಹಳೆ ಮೈಸೂರಿನ ಅನೇಕ ಕಡೆಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಕೊನೆಗೆ ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಅಧ್ಯಾಪಕರಾಗಿ 1985ರಲ್ಲಿ ನಿವೃತ್ತರಾದರು.

ತಮ್ಮ ಪ್ರೀತಿಯ ಅಧ್ಯಾಪನದೊಡನೆ ಅವರ ಬರವಣಿಗೆಯೂ ನಿರಂತರವಾಗಿ ಸಾಗಿತು. ಹಿಂದಿನ ಸೃಜನಶೀಲ ಕೃತಿಗಳಲ್ಲದೆ ಹತ್ತಾರು ವಿಮರ್ಶಾಕೃತಿಗಳು, ಮಕ್ಕಳ ಸಾಹಿತ್ಯ, ಜೀವನ ಚರಿತ್ರೆಗಳು, ಹತ್ತಾರು ಅನುವಾದ ಕೃತಿಗಳು, ಸಂಪಾದಿತ ಕೃತಿಗಳನ್ನು ಕನ್ನಡದಲ್ಲಿ ಹೊರತಂದುದಲ್ಲದೆ, ಇಂಗ್ಲಿಷ್‌ನಲ್ಲಿಯೂ ಸಾಕಷ್ಟು ಕೃತಿರಚನೆ ಮಾಡಿದರು. ಅವರ ‘ಕಾದಂಬರಿ-ಸಾಮಾನ್ಯ ಮನುಷ್ಯ’ ಅವರಿಗೆ ಹೆಸರು ತಂದಿತ್ತ ಮೊದಲ ವಿಮರ್ಶಾಕೃತಿ. ಗೋಲ್ಡ್‌ಸ್ಮಿತ್, ಷೇಕ್ಸ್‌ಪಿಯರ್, ಕಾಫ್ಕಾ ಮುಂತಾದವರ ಬಗ್ಗೆ ಕನ್ನಡದಲ್ಲಿ ಬರೆದದ್ದಲ್ಲದೆ, ಮಾಸ್ತಿ, ಟಿ.ಪಿ. ಕೈಲಾಸಂ ಬಗ್ಗೆ ಹಾಗೂ ಹೊಸಗನ್ನಡ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದ ಚರಿತ್ರೆಯನ್ನು ಇಂಗ್ಲಿಷ್‌ನಲ್ಲಿ ಬರೆದರು.

‘ಗ್ರೀಕ್ ರಂಗಭೂಮಿ ಮತ್ತು ನಾಟಕ’ ಎಂಬ ಹೆಬ್ಬೊತ್ತಗೆಯು ಅವರ ವಿದ್ವದ್ದರ್ಶನವನ್ನು ಮಾಡಿಸುವ ಒಂದು ಗ್ರಂಥ. ಗ್ರೀಕ್ ರಂಗಭೂಮಿ ಮತ್ತು ಡಯಿನಿಸಸ್ ಸಂಬಂಧದಿಂದ ತೊಡಗಿ, ಗ್ರೀಕ್ ಗಂಭೀರ ನಾಟಕದ ಅವಲೋಕನ ಮಾಡಿ, ಪ್ರಸಿದ್ಧರಾದ ಈಸ್ಕಿಲಸ್, ಯೂರಿಪಿಡೀಸ್ ಮತ್ತು ಸಾಕ್ರಟೀಸ್‌ರ ಕೃತಿಸಮುಚ್ಚಯವನ್ನು ತಲಸ್ಪರ್ಶಿಯಾಗಿ ಪರಿಚಯ ಮಾಡಿಸುವ ಈ ಗ್ರಂಥವು ಒಂದು ವಿಷಯದ ಬಗ್ಗೆ ಕೃತಿರಚನೆ ಮಾಡು
ವವರಿಗೆ ಮಾರ್ಗದರ್ಶಕವಾಗಿದೆ.

ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ತಂದಿತ್ತ ಕೃತಿ ‘ಇಂಗ್ಲಿಷ್ ಸಾಹಿತ್ಯ ಚರಿತ್ರೆ’ಯೂ ಇಂತಹುದೇ ಮತ್ತೊಂದು ಗ್ರಂಥ.ಇಂದಿನ ಪೀಳಿಗೆಯವರಿಗಾಗಿ ವಿಶೇಷ ಆಸ್ಥೆಯಿಂದ ಇಂಗ್ಲಿಷ್‌ನಲ್ಲಿ ನಿರೂಪಿಸಿ
ರುವ ನಾಲ್ಕು ಸಂಪುಟಗಳ ‘ಮಹಾಭಾರತ’ವನ್ನು ಭಾರತೀಯ ವಿದ್ಯಾಭವನವು ಪ್ರಕಟಿಸಿದ್ದು, ಅವುಗಳ ಕನ್ನಡ ಅನುವಾದ (ಜಿ.ಎನ್. ರಂಗನಾಥರಾವ್) ಈಚೆಗಷ್ಟೇ ಬಿಡುಗಡೆಯಾಗಿದೆ. ಶ್ರೀ ರಾಯರು ಹಲವಾರು ಇಂಗ್ಲಿಷ್-ಕನ್ನಡ ನಿಘಂಟುಗಳನ್ನೂ ತಯಾರಿಸಿದ್ದಾರೆ, ‘ಇಂಗ್ಲಿಷ್ ಮೇಡ್ ಈಸಿ’ ಎಂಬ ಕೃತಿಯನ್ನೂ ರಚಿಸಿ ಅಭ್ಯಾಸಿಗಳಿಗೆ ಮಹದುಪಕಾರ ಮಾಡಿದ್ದಾರೆ. ‘ಭಾರತ ಭಾರತಿ’ ಮತ್ತು ಇಂಗ್ಲಿಷ್ ಕನ್ನಡ ಎರಡೂ ಭಾಷೆಗಳಲ್ಲಿ ಅವರು ಸಂಪಾದಿಸಿರುವ ‘ದಿವ್ಯದರ್ಶನ ಮಾಲೆ’ಗಳು ಎಳೆಯರ ಮನಸ್ಸನ್ನು ಹಿಗ್ಗಿಸುವಲ್ಲಿ ಸಹಾಯಕ
ವಾಗಿದೆ. ಹೀಗೆ ಅವರು ಎಂಬತ್ತಕ್ಕೂ ಹೆಚ್ಚು ಕನ್ನಡ ಕೃತಿಗಳನ್ನೂ, ಮೂವತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಇಂಗ್ಲಿಷ್ ಕೃತಿಗಳನ್ನೂ ಬರೆದು ಪ್ರಸಿದ್ಧರಾಗಿದ್ದಾರೆ.

ಕೆಲವು ಹಿರಿಯ ಸಾಹಿತಿಗಳ ಸಮಗ್ರ ಕೃತಿಗಳಿಗೆ ಅವರು ಬರೆದ ಪ್ರಸ್ತಾವನೆಗಳು ಅವರ ತೂಕದ ವಿಮರ್ಶೆಗೆ ನಿದರ್ಶನ. ವಿ.ಸೀ, ಕೆ.ಎಸ್.ನ, ಅವರ ಸಮಗ್ರ ಕೃತಿಗಳಿಗೆ ಬರೆದ ಪ್ರಸ್ತಾವನೆಗಳನ್ನು ನೋಡಿದರೆ ಇದು ಮನದಟ್ಟಾಗುತ್ತದೆ. ಹೇಳಬೇಕಾದ್ದನ್ನು ಸ್ಪಷ್ಟವಾಗಿ ಹೇಳಿದರೂ ಸೌಜನ್ಯವನ್ನು ಕಳೆದುಕೊಳ್ಳದ ಅವರ ಶೈಲಿ ವಿಮರ್ಶಕರಿಗೆ ಸರಿ ನಿಲವನ್ನು ಪ್ರದರ್ಶಿಸುವಂಥದು. ರಾಯರದು ಸಹಾನುಭೂತಿಪರವಾದ ವಿಮರ್ಶೆ, ‘ಕುಡುಗೋಲು ಕೊಡಲಿ’ ಹಿಡಿದು ಬರುವ ಜವರಾಯನ ರೀತಿಯದಲ್ಲ. ಅಲ್ಲದೆ ಅವರ ವಿಮರ್ಶೆ ಎಂದಿಗೂ ಪಕ್ಷಪಾತರಹಿತವಾದದ್ದು, ಆಧುನಿಕ ಕನ್ನಡ ಸಾಹಿತ್ಯದ ವಿವಿಧ ಚಳವಳಿಗಳ ಮುಖ್ಯ ಲೇಖಕರನ್ನು ಅವರು ವಿಮರ್ಶಿಸುವ ಪರಿಗೆ ‘ಹೊಸಗನ್ನಡ ಸಾಹಿತ್ಯ ಚರಿತ್ರೆ’ ಗ್ರಂಥವನ್ನು ನೋಡಬೇಕು.

ನಿರಂತರ ಅಧ್ಯಾಪನ ಅವರಿಗೆ ಹಿತಕರವಾದುದಾದರೂ ಅವರ ಕಾರ್ಯಕ್ಷೇತ್ರ ಅಷ್ಟಕ್ಕೇ ಸೀಮಿತವಾಗ
ಲಿಲ್ಲ. ಅವರು ಕೆಲವು ಕಾಲ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಅಧ್ಯಕ್ಷರಾಗಿ ಓದುವ ಪ್ರವೃತ್ತಿಯನ್ನು ಬೆಳೆಸುವಲ್ಲಿ ಸಹಾಯಕರಾದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ತಮ್ಮ ಇಪ್ಪತ್ತೆರಡನೇ ವರ್ಷದಲ್ಲಿಯೇ ಕಾರ್ಯ ನಿರ್ವಹಿಸಿದರು. ಗೋಕಾಕ್ ಚಳವಳಿಯ ನಂತರ ಕಾಲದಲ್ಲಿ ಅವರು ಕನ್ನಡಕ್ಕಾದ ಅನ್ಯಾಯವನ್ನು ಪ್ರತಿಭಟಿಸುತ್ತಲೇ ಬಂದವರು.

ತಮ್ಮ ಸಜ್ಜನಿಕೆಯಿಂದ ರಾಯರು ಎಲ್ಲರಿಗೂ ಹತ್ತಿರವಾಗಿದ್ದರು. ತಮ್ಮ ‘ಇಂಗ್ಲಿಷ್ ಸಾಹಿತ್ಯ ಚರಿತ್ರೆ’ಯನ್ನವರು ವಿದ್ಯಾರ್ಥಿಗಳಿಗೇ ಅರ್ಪಿಸಿದ್ದಾರೆಂಬುದನ್ನು ನೆನಪಿಸಿಕೊಳ್ಳಬೇಕು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು, ಅಖಿಲ ಭಾರತ 74ನೇ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ – ಅವರ ಕಾರ್ಯಕ್ಕೆ ಸಂದ ಅರ್ಹ ಗೌರವಗಳು. ಇಂತಹ ರಾಯರು ನಿಜವಾಗಿಯೂ ವಿಶೇಷರು. ಅವರು ಆಧುನಿಕ ಕನ್ನಡ ಸಾಹಿತ್ಯಾಕಾಶದಲ್ಲಿ ಒಂದು ಹೊಳೆಯುವ ನಕ್ಷತ್ರವಾಗಿ ಉಳಿಯುತ್ತಾರೆ ಎಂಬುದು ನಿಜ. ಅವರ ಅಧ್ಯಯನಶೀಲತೆ, ಸಾಹಿತ್ಯಪ್ರೀತಿ, ಸಜ್ಜನಿಕೆ ಮತ್ತು ನಿರ್ಮತ್ಸರತ್ವಗಳು ಕಿರಿಯರಿಗೆ ಮಾರ್ಗದರ್ಶಕವಾಗಲೆಂದು ಈ ಸಂದರ್ಭದಲ್ಲಿ ಆಶಿಸುವ ಕೆಲಸ ನಮ್ಮದು. ಶೇಷಗಿರಿರಾಯರ ವ್ಯಕ್ತಿತ್ವಕ್ಕೆ ಇದೋ ನಮ್ಮ ದೀರ್ಘದಂಡ ನಮಸ್ಕಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT