‘ಲಿಂಗಾಯತ ಧರ್ಮ ಹೋರಾಟ ಬೆಂಬಲಿಸಿದ್ದರೆ ಬಿಎಸ್‌ವೈ ಸಿಎಂ ಆಗುತ್ತಿದ್ದರು’

7
ಸಿದ್ಧರಾಮ ಸ್ವಾಮೀಜಿ ಹೇಳಿಕೆ

‘ಲಿಂಗಾಯತ ಧರ್ಮ ಹೋರಾಟ ಬೆಂಬಲಿಸಿದ್ದರೆ ಬಿಎಸ್‌ವೈ ಸಿಎಂ ಆಗುತ್ತಿದ್ದರು’

Published:
Updated:
ಸಿದ್ಧರಾಮ ಸ್ವಾಮೀಜಿ

ಬೆಳಗಾವಿ: ‘ಸ್ವತಂತ್ರ ಲಿಂಗಾಯತ ಧರ್ಮ ಹೋರಾಟ ಬೆಂಬಲಿಸಿದ್ದರೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಿದ್ದರು’ ಎಂದು ನಾಗನೂರ ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ರಾಷ್ಟ್ರೀಯ ಬಸವ ಸೇನೆ ಜಿಲ್ಲಾ ಘಟಕಗಳ ವತಿಯಿಂದ ಇಲ್ಲಿನ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಲಿಂಗಾಯತ ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯಡಿಯೂರಪ್ಪ ಸಮಾಜದ ಹೆಮ್ಮೆ. ಹೋರಾಟದ ನೇತೃತ್ವ ವಹಿಸುವಂತೆ, ಚುನಾವಣೆಗೆ ಮುನ್ನವೇ ಅವರನ್ನು ಕೋರಿದ್ದೆವು. ಆದರೆ ಬರಲಿಲ್ಲ. ಬಂದಿದ್ದರೆ ಇನ್ನೂ 10ರಿಂದ 15 ಸ್ಥಾನಗಳನ್ನು ಬಿಜೆಪಿ ಪಡೆಯಬಹುದಿತ್ತು. ಸ್ವತಂತ್ರವಾಗಿ ಸರ್ಕಾರ ರಚಿಸಿ, ಆರಾಮವಾಗಿ ಅವರು ಮುಖ್ಯಮಂತ್ರಿ ಆಗಬಹುದಿತ್ತು. ಸ್ವಯಂಕೃತ ಅಪರಾಧದಿಂದಾಗಿ ಅವರಿಗೆ ಅಧಿಕಾರದಿಂದ ದೂರ ಉಳಿಯುವ ಪರಿಸ್ಥಿತಿ ಬಂದಿದೆ’ ಎಂದರು.

‘ಲಿಂಗಾಯತ ಧರ್ಮದ ಹೋರಾಟ ಬೆಂಬಲಿಸಿದ್ದರಿಂದಾಗಿ, ಕಾಂಗ್ರೆಸ್‌ 79 ಸ್ಥಾನಗಳನ್ನು ಪಡೆಯಿತು. ಇಲ್ಲವಾದಲ್ಲಿ 40 ಸ್ಥಾನಗಳನ್ನಷ್ಟೇ ಗಳಿಸುತ್ತಿತ್ತು. ಲಿಂಗಾಯತರ ಕೊಡುಗೆ ನೀಡಿದ್ದರಿಂದಾಗಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಿದೆ’ ಎಂದು  ಪ್ರತಿಪಾದಿಸಿದರು.

‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿಗೆ ಲಿಂಗಾಯತರ ಬೆಂಬಲ ಬೇಕಾದರೆ,‌ ರಾಜ್ಯ ಸರ್ಕಾರ ಕಳುಹಿಸಿರುವ ಶಿಫಾರಸು ಒಪ್ಪಿಕೊಳ್ಳಬೇಕು. ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು’ ಎಂದು ಆಗ್ರಹಿಸಿದರು.

‘ನಮ್ಮ ಹೋರಾಟವನ್ನು ಕೆಲವು ಸ್ವಾಮೀಜಿಗಳೂ ವಿರೋಧಿಸುತ್ತಿದ್ದಾರೆ. ಅವರಿಗೆ ನಮ್ಮ ಧರ್ಮಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ, ಘನತೆ ದೊರೆಯುವುದು, ಸಮಾಜದವರಿಗೆ ಅಲ್ಪಸಂಖ್ಯಾತರಿಗೆ ದೊರೆಯುವ ಸೌಲಭ್ಯಗಳು ಸಿಗುವುದು ಬೇಕಾಗಿಲ್ಲ. ಇದರಿಂದಾಗಿ, ಅಪಪ್ರಚಾರ ಮಾಡುತ್ತಿದ್ದಾರೆ. ಲಿಂಗಾಯತ ಧರ್ಮವಾದರೆ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಲಾಭವಾಗುತ್ತದೆ ಎಂದು ಹೇಳುತ್ತಿದ್ದಾರೆ. ಅದು ನಿಜವಾಗಿದ್ದರೆ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಯವರು ಬೆಂಬಲ ಕೊಡುತ್ತಿರಲಿಲ್ಲವೇ?’ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !