ಗುರುವಾರ , ಮಾರ್ಚ್ 4, 2021
18 °C

ಸಂಸದ ಡಿ.ಕೆ. ಸುರೇಶ್‌ ನನ್ನದೆಂದು ಬಿಡುಗಡೆ ಮಾಡಿದ ಪತ್ರ ನಕಲಿ: ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರವನ್ನು ಅಸ್ಥಿರಗೊಳಿಸುವ ಸಲುವಾಗಿ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ಆದಾಯತೆರಿಗೆ ಇಲಾಖೆ ಅಧಿಕಾರಿಗಳಿಗೆ ಬಿ.ಎಸ್‌.ಯಡಿಯೂರಪ್ಪ ಅವರು ಪತ್ರ ಬರೆದಿದ್ದರು ಎಂದು ಸಂಸದ ಡಿ.ಕೆ.ಸುರೇಶ್‌ ಬಿಡುಗಡೆ ಮಾಡಿರುವ ಪತ್ರ ನಕಲಿ ಎಂದು ಯಡಿಯೂರಪ್ಪ ಟ್ವೀಟ್‌ ಮಾಡಿದ್ದಾರೆ.

ಶನಿವಾರ ಡಿ.ಕೆ.ಶಿವಕುಮಾರ್‌ ಸಹೋದರ  ಡಿ.ಕೆ. ಸುರೇಶ್‌ ಪತ್ರಿಕೋಷ್ಠಿ ನಡೆಸಿ ಕೇಂದ್ರ ಸರ್ಕಾರ, ಇಲ್ಲಿನ ಸರ್ಕಾರವನ್ನು ಅಸ್ಥಿರಗೊಳಿಸಲು ಮತ್ತು ಡಿ.ಕೆ.ಶಿವಕುಮಾರ್‌ ಅವರನ್ನು ಹೆದರಿಸಲು ಸಿಬಿಐ, ಇ.ಡಿ. ಮತ್ತು  ಆದಾಯ ತೆರಿಗೆ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು. ಇದೇ ವೇಳೆ 2017ರಲ್ಲಿ ಯಡಿಯೂರಪ್ಪ ಅವರು ಡಿ.ಕೆ. ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರು ಎಂದು ಒಂದು ಪತ್ರವನ್ನು ಬಿಡುಗಡೆ ಮಾಡಿದ್ದರು.

ಡಿ.ಕೆ.ಸುರೇಶ್‌ ಬಿಡುಗಡೆ ಮಾಡಿರುವ ಪತ್ರಕ್ಕೆ ಟ್ವೀಟ್‌ ಮೂಲಕ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ’ಡಿಕೆಶಿ ಸಹೋದರರು ನಕಲಿ ಪತ್ರವನ್ನು ನಾನು ಬರೆದದ್ದು ಎಂದು ತೋರಿಸಿದ್ದಾರೆ, ಅಪವಿತ್ರ ಸರ್ಕಾರವನ್ನು ಉಳಿಸಲು ಕಾಂಗ್ರೆಸ್‌ ಹತಾಶೆಯಿಂದ ಈ ರೀತಿ ಮಾಡಿದೆ. ನಾನು ಇಂತಹ ಕೀಳು ಮಟ್ಟದ ರಾಜಕಾರಣ ಮಾಡುವುದಿಲ್ಲ, ಇದು ಸಾಬೀತಾದರೆ ನಾನು ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ. 

ಕರ್ನಾಟಕ ಬಿಜೆಪಿ ಘಟಕವು ಅಸಲಿ ಮತ್ತು ನಕಲಿ ಪತ್ರದ ಬಗ್ಗೆ ಟ್ವೀಟ್‌ ಮಾಡಿದೆ. ಡಿ.ಕೆ. ಸುರೇಶ್‌ ಬಿಡುಗಡೆ ಮಾಡಿರುವ ಪತ್ರ ನಕಲಿಯಾಗಿದ್ದು, ಅದು ಯಡಿಯೂರಪ್ಪ ಅವರ ಲೆಟರ್‌ ಹೆಡ್‌ ಅಲ್ಲ ಎಂದು ಹೇಳಿದೆ. ಫೋಟೊಶಾಪ್‌ನಲ್ಲಿ ನಕಲಿ ಪತ್ರವನ್ನು ಸೃಷ್ಟಿಲಾಗಿದೆ ಎಂದು ಟ್ವೀಟ್‌ ಮಾಡಿದೆ. 

ನಕಲಿ ಮತ್ತ ಅಸಲಿ ಪತ್ರದ (ಲೆಟರ್‌ ಹೆಡ್ ) ಸಾಮ್ಯತೆಗಳು

*  ಅಸಲಿ ಪತ್ರದ ಬಲ ಭಾಗದಲ್ಲಿ ಮಾಜಿ ಮುಖ್ಯಮಂತ್ರಿ ಎಂದು ಇದೆ, ಆದರೆ ನಕಲಿ ಪತ್ರದಲ್ಲಿ  ಮಾಜಿ ಮುಖ್ಯಮಂತ್ರಿ ಎಂಬುದಿಲ್ಲ.

* ಅಸಲಿ ಪತ್ರದ ಕೆಳಗೆ ದೆಹಲಿಯ ವಿಳಾಸ ಇದೆ. ಆದರೆ ನಕಲಿ ಪತ್ರದಲ್ಲಿ ಬೆಂಗಳೂರಿನ ವಿಳಾಸವಿದೆ. ಬೆಂಗಳೂರಿನ ವಿಳಾಸವಿದ್ದರೂ ಶಿವಮೊಗ್ಗದ ದೂರವಾಣಿ ಸಂಖ್ಯೆಗಳಿವೆ. 

* ಅಸಲಿ ಪತ್ರದ ಇ–ಮೇಲ್‌ ವಿಳಾಸ ಸಣ್ಣ ಅಕ್ಷರಗಳಲ್ಲಿದೆ.  ಆದರೆ ನಕಲಿ ಪತ್ರದಲ್ಲಿ ’ಬಿ’ ದೊಡ್ಡ ಅಕ್ಷರದಲ್ಲಿದೆ.

* ಅಸಲಿ ಪತ್ರದಲ್ಲಿ ಯಡಿಯೂರಪ್ಪ ಸಹಿ ಮಾಡುವ ಸ್ಥಳ ಬಲ ಭಾಗದಲ್ಲಿ ಇದೆ. ಆದರೆ ನಕಲಿ ಪತ್ರದಲ್ಲಿ ಎಡ ಬಾಗದಲ್ಲಿ ಇದೆ ಎಂದು ಬಿಜೆಪಿ ಕರ್ನಾಟಕ ಟ್ವೀಟ್‌ ಮಾಡಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು