ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಕನಸು ಭಗ್ನ: ಮೈತ್ರಿ ಸಂಗ ಭದ್ರ

ಸುದ್ದಿ ವಿಶ್ಲೇಷಣೆ
Last Updated 11 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಳಗಾವಿ: ಉತ್ತರದ ರಾಜ್ಯಗಳ ಚುನಾವಣಾ ಫಲಿತಾಂಶ ‘ಕೈ –ದಳ ಮೈತ್ರಿ ಭಂಗ’ಕ್ಕೆ ಕಾರಣವಾಗಲಿದೆ ಎಂಬ ಬಿಜೆಪಿ ಲೆಕ್ಕಾಚಾರ ಉಲ್ಟಾ ಆಗಿದ್ದು, ಮತ್ತೆ ಮುಖ್ಯಮಂತ್ರಿಯಾಗುವ ಬಿ.ಎಸ್‌. ಯಡಿಯೂರಪ್ಪ ಕನಸು ಸದ್ಯಕ್ಕೆ ಭಗ್ನವಾಗಿದೆ.

ಜೆಡಿಎಸ್‌–ಕಾಂಗ್ರೆಸ್‌ ನಾಯಕರಲ್ಲಿ ಈ ಫಲಿತವು ಹೊಸ ಉಮೇದು ತಂದಿದ್ದು, ಸರ್ಕಾರದ ಭಾಗಿದಾರರಲ್ಲಿನ ವಿಶ್ವಾಸವನ್ನು ಮತ್ತ‌ಷ್ಟು ಬಲಿಷ್ಠಗೊಳಿಸಲಿದೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿಯೇತರ ಪಕ್ಷಗಳ ಒಗ್ಗೂಡುವಿಕೆಗೆ ಹೊಸ ಆಯಾಮ ಬಂದಿದ್ದು, ಇದರಿಂದಾಗಿ ಲೋಕಸಭೆ ಚುನಾವಣೆವರೆಗೂ ಮೈತ್ರಿ ಸರ್ಕಾರ ಸುಭದ್ರವಾಗಿರುವುದು ಖಚಿತವಾದಂತಾಗಿದೆ.

’ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡದಲ್ಲಿ ಬಿಜೆಪಿ ಮತ್ತೆ ಗೆದ್ದರೆ ‘ಆಪರೇಷನ್‌ ಕಮಲ’ ಪ್ರಕ್ರಿಯೆ ಬಿರುಸುಗೊಳ್ಳಲಿದೆ. 7–8 ಆಸುಪಾಸಿನಲ್ಲಿದ್ದ ಕಾಂಗ್ರೆಸ್‌ನ ಅತೃಪ್ತ ಶಾಸಕರ ಬಲ 17‌ಕ್ಕೆ ಏರಲಿದೆ. ’ಆರೇಳು ಶಾಸಕರು ಬಿಜೆಪಿಗೆ ಹೋಗಬಹುದು’ ಎಂದು ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದು ಇದಕ್ಕೆ ಸಾಕ್ಷಿ’ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದರು. ಡಿಸೆಂಬರ್‌ನಲ್ಲಿ ರಾಜಕೀಯ ಧಮಾಕ ಆಗಲಿದ್ದು, ಕರ್ನಾಟಕದಲ್ಲಿ ಭೂಕಂಪ ಆಗಲಿದೆ ಎಂದೂ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕೂಡ ಹೇಳಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ, ಅಧಿವೇಶನದ ವೇಳೆ ಸರ್ಕಾರ ಕಂಪಿಸಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡಿದ್ದವು.

ಫಲಿತಾಂಶದ ಪ್ರಭಾವ: ಪ್ರಧಾನಿ ನರೇಂದ್ರ ಮೋದಿ ಹಾಗೂ ‘ಚಾಣಕ್ಯ’ ಅಮಿತ್ ಶಾ ಅವರ ಜನಪ್ರಿಯತೆ ಮತ್ತು ತಂತ್ರಗಾರಿಕೆ ಕುಸಿದಿದ್ದು, ಉತ್ತರದ ಮೂರು ರಾಜ್ಯಗಳಲ್ಲಿ ಕಮಲ ಪಕ್ಷ ಅಧಿಕಾರ ಕಳೆದುಕೊಂಡಿದೆ. ಈಗ ಆಪರೇಷನ್ ಕಮಲಕ್ಕೆ ಕೈಹಾಕಿದರೆ ಎದುರಾಳಿ ಪಕ್ಷಗಳಿರುವ ಮೈತ್ರಿ ಸರ್ಕಾರವನ್ನು ಉರುಳಿಸಿದ ಆಪಾದನೆಗೆ ಗುರಿಯಾಗಬೇಕಾಗುತ್ತದೆ ಎಂಬ ಭಯ ಇದೆ. ಹೀಗಾಗಿ, ಬಿಜೆಪಿ ವರಿಷ್ಠರು ಈ ಕಾರ್ಯಾಚರಣೆಗೆ ಇಳಿಯಲಾರರು ಎಂದೇ ಹೇಳಲಾಗುತ್ತಿದೆ.

ಯಡಿಯೂರಪ್ಪ ಹಾಗೂ ಶಾಸಕ ಬಿ.ಶ್ರೀರಾಮುಲು ಆಪ್ತರು ನಡೆಸಿದ ಆಪರೇಷನ್ ಕಮಲದ ಯತ್ನ ಅನೇಕ ಬಾರಿ ವಿಫಲವಾಗಿದೆ. ಅಗತ್ಯ ಸಂಖ್ಯಾಬಲ ಕೂಡದೇ ಇರುವುದರಿಂದ ಪದೇ ಪದೇ ಹಿನ್ನಡೆಯಾಗಿದೆ. ಕಾಂಗ್ರೆಸ್ ಮುಕ್ತ ಭಾರತ ಎಂಬ ಘೋಷಣೆಗೆ ಹಿನ್ನಡೆಯಾಗಿರುವುದರಿಂದ, ಈ ಹಂತದಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿಯತ್ತ ವಾಲುವುದು ಕಷ್ಟ. ಇನ್ನು ಆ‍ಪರೇಷನ್ ಕಮಲಕ್ಕೆ ಶಾಸಕರು ಬಲಿಯಾಗದೇ ಇರುವುದರಿಂದ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಕನಸಷ್ಟೇ ಎಂದು ಅನೇಕ ನಾಯಕರು ಪ್ರತಿಪಾದಿಸಲು ಆರಂಭಿಸಿದ್ದಾರೆ.

ಸುವರ್ಣ ವಿಧಾನಸೌಧದ ಮೊಗಸಾಲೆಯಲ್ಲಿ ಚರ್ಚೆಯಲ್ಲಿ ತೊಡಗಿದ್ದ ಬಿಜೆಪಿ, ಕಾಂಗ್ರೆಸ್ ಶಾಸಕರು ಇದೇ ಅಭಿಪ್ರಾಯ ಹೊಂದಿದ್ದರು. ‘ಪಾಪ ಯಡಿಯೂರಪ್ಪ’ ಎಂಬ ಅನುಕಂಪದ ಮಾತುಗಳನ್ನೂ ಆಡುತ್ತಿದ್ದರು. ಸದನದೊಳಗೆ ಸರ್ಕಾರವನ್ನು ಯಡಿಯೂರಪ್ಪ ತರಾಟೆಗೆ ತೆಗೆದುಕೊಳ್ಳುತ್ತಿದ್ದಾಗಲೂ ಅವರ ಹಿಂದಿನ ಸಾಲುಗಳಲ್ಲಿ ಶಾಸಕರ ಸಂಖ್ಯೆ ಕ್ಷೀಣಿಸಿತ್ತು. ಅವರಲ್ಲಿಯೂ ಉತ್ಸಾಹ ಕರಗಿದಂತಿತ್ತು. ಇನ್ನು ವಿರೋಧ ಪಕ್ಷವೇ ಕಾಯಂ ಎಂದು ಅನೇಕ ಬಿಜೆಪಿ ಶಾಸಕರು ಆಡಿಕೊಳ್ಳುತ್ತಿದ್ದರು.

‘ಬಿಜೆಪಿಯಿಂದ ಆಹ್ವಾನ ಬಂದಿದೆ. ಸಚಿವ ಸ್ಥಾನದ ಭರವಸೆ ಕೊಟ್ಟಿದ್ದಾರೆ ಎಂಬ ಬೆದರಿಕೆ ಹಾಕಲು ಅವಕಾಶ ಇತ್ತು. ಇನ್ನು ಮುಂದೆ ಈ ರೀತಿಯಲ್ಲಿ ಹೇಳಿಕೊಂಡು ತಿರುಗಿದರೆ ಪಕ್ಷ ವಿರೋಧಿ ಚಟುವಟಿಕೆ ಎಂದು ಹಣೆಪಟ್ಟಿ ಕಟ್ಟಿ ಶಿಸ್ತುಕ್ರಮ ಜರುಗಿಸಬಹುದು. ಬಿಜೆಪಿಯ ವೈಭವದ ದಿನಗಳು ಮುಗಿಯುತ್ತಿದ್ದು, ಅಧಿಕಾರದಿಂದ ಕುಸಿಯುವ ದಿನಗಳು ಶುರುವಾಗಿವೆ. ಈ ಹೊತ್ತಿನಲ್ಲಿ ಅಲ್ಲಿಗೆ ಹೋಗಿ ಮಾಡುವುದು ಏನಿದೆ. ಬಿಜೆಪಿ ವಿರೋಧಿ ಅಲೆ ಆರಂಭವಾಗಿದ್ದು, ರಾಜೀನಾಮೆ ಕೊಟ್ಟರೆ ಮತ್ತೆ ಗೆಲ್ಲುವುದು ಸುಲಭವಲ್ಲ. ಅದರ ಬದಲು ಪಕ್ಷದಲ್ಲಿದ್ದರೆ ಒತ್ತಡ ಹೇರಿಯಾದರೂ ಕ್ಷೇತ್ರದ ಕೆಲಸವನ್ನು ಮಾಡಿಸಿಕೊಳ್ಳಲು ಸಾಧ್ಯ’ ಎಂಬುದು ಕಾಂಗ್ರೆಸ್ ಶಾಸಕರ ಮಾತಿನ ತಿರುಳಾಗಿತ್ತು.

ಲೋಕಸಭೆ ಚುನಾವಣೆ ಬಳಿಕ ಸಂಪುಟ ವಿಸ್ತರಣೆ

ಅಧಿವೇಶನಕ್ಕೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಇದೇ 22ಕ್ಕೆ ನಿಗದಿ ಮಾಡಲಾಗಿದ್ದ ಸಚಿವ ಸಂಪುಟ ವಿಸ್ತರಣೆಯ ಮುಹೂರ್ತ ಲೋಕಸಭೆ ಚುನಾವಣೆವರೆಗೂ ನಡೆಯುವ ಸಾಧ್ಯತೆ ಇಲ್ಲ.

ಮೂರು ಪ್ರಮುಖ ರಾಜ್ಯಗಳಲ್ಲಿ ಬಿಜೆಪಿ ಸೋಲುಕಂಡು, ಕಾಂಗ್ರೆಸ್‌ ವಿಜಯ ಸಾಧಿಸಿದೆ. ಈ ಬೆಳವಣಿಗೆಯು ಸಂಪುಟ ವಿಸ್ತರಣೆಯ ಮೇಲೆ ಕರಿನೆರಳು ಚಾಚಿದೆ. ಅತೃಪ್ತ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರಬಹುದು ಎಂಬ ಭಯದಿಂದ ಸಂಪುಟ ವಿಸ್ತರಣೆಯೆಂಬ ಗಜ್ಜರಿಯನ್ನು ಅನ್ನು ಶಾಸಕರ ಮುಂದೆ ತೂಗು ಹಾಕಲಾಗಿತ್ತು.

ಬಿಜೆಪಿ ಹಿನ್ನಡೆ ಅನುಭವಿಸುವುದರಿಂದ ಯಾವುದೇ ಶಾಸಕರು ಪಕ್ಷ ತೊರೆಯುವುದಿಲ್ಲ ಎಂಬ ಭರವಸೆ ಪಕ್ಷದ ನಾಯಕರಲ್ಲಿ ಮೂಡಿದೆ. ಸತತ ಸೋಲಿನಿಂದ ಕಂಗೆಟ್ಟು ದುರ್ಬಲವಾಗಿದ್ದ ಕಾಂಗ್ರೆಸ್ ಹೈಕಮಾಂಡ್ ಕೂಡ ಈಗ ಪ್ರಬಲವಾಗಿದ್ದು, ಭಿನ್ನಮತ ಪ್ರದರ್ಶಿಸುವ ಶಾಸಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ಸಂಪುಟ ವಿಸ್ತರಣೆ ಎಂಬುದು ಲೋಕಸಭೆ ಚುನಾವಣೆ ಮುಗಿಯುವವರೆಗೂ ನನೆಗುದಿಗೆ ಬೀಳಲಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದರು.

ಜೆಡಿಎಸ್‌ನಲ್ಲಿ ತೆಲಂಗಾಣ ಪರಿಣಾಮ

ತೆಲಂಗಾಣದಲ್ಲಿ ಟಿಆರ್‌ಎಸ್‌ ಜಯಬೇರಿ ಬಾರಿಸಿರುವುದು ಜೆಡಿಎಸ್‌ನಲ್ಲಿ ಹೊಸ ಲೆಕ್ಕಾಚಾರಕ್ಕೆ ಅವಕಾಶ ಕಲ್ಪಿಸಿದೆ.

ರಾಷ್ಟ್ರೀಯ ಪಕ್ಷಗಳನ್ನು ಬದಿಗೆ ತಳ್ಳಿರುವ ಕೆ.ಚಂದ್ರಶೇಖರರಾವ್‌, ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ಏರಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಜತೆ ಸೇರಿಕೊಂಡು ಸರ್ಕಾರ ನಡೆಸುತ್ತಿರುವ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ತಮ್ಮ ‘ಕರ್ಮಭೂಮಿ’ಯಲ್ಲಿ ಪಕ್ಷದ ಪ್ರಭಾವ ವಿಸ್ತರಿಸಲು ಈ ಫಲಿತಾಂಶ ದಾರಿಮಾಡುವ ಕೊಡಲಿದೆ ಎಂದೂ ಹೇಳಲಾಗುತ್ತಿದೆ.

ಒಕ್ಕಲಿಗ ಮತಗಳು ಪ್ರಬಲವಾಗಿರುವ ಕ್ಷೇತ್ರಗಳಿಗೆ ಆದ್ಯತೆ ಹಾಗೂ ರೈತ ಕೇಂದ್ರಿತ ಕಾರ್ಯಕ್ರಮಗಳನ್ನು ಜಾರಿ ಮಾಡುವ ಮೂಲಕ ಜೆಡಿಎಸ್‌ ಮತಬ್ಯಾಂಕ್ ಭದ್ರಪಡಿಸಿಕೊಂಡು ಪ್ರಾದೇಶಿಕ ಪಕ್ಷವನ್ನು ಬಲಪಡಿಸುವತ್ತ ಗಂಭೀರವಾಗಿ ಆಲೋಚಿಸಲು ಇದು ಕಾರಣವಾಗಲಿದೆ. ಹಳೇ ಮೈಸೂರು ಕ್ಷೇತ್ರದತ್ತ ಹೆಚ್ಚಿನ ಒತ್ತು ನೀಡಿರುವ ಕುಮಾರಸ್ವಾಮಿ, ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟು, ತಮ್ಮ ನೆಲೆಯನ್ನು ಕೇಂದ್ರೀಕರಿಸಲು ಫಲಿತಾಂಶ ಪರಿಣಾಮ ಬೀರಲಿದೆ ಎಂದೂ ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT