ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಹಂಕ: ರೈತರ ಸಂತೆ, ಸಮಸ್ಯೆಗಳ ಕಂತೆ

Last Updated 11 ಅಕ್ಟೋಬರ್ 2019, 19:36 IST
ಅಕ್ಷರ ಗಾತ್ರ

ಯಲಹಂಕ: ಇಲ್ಲಿನ ರೈತರ ಸಂತೆಯ ಆವರಣ ಮತ್ತು ಮುಂಭಾಗದ ರಸ್ತೆಯಲ್ಲಿ ಸರಕು ಹಾಗೂ ಗ್ರಾಹಕರ ವಾಹನಗಳನ್ನು ಅವೈಜ್ಞಾನಿಕವಾಗಿ ನಿಲುಗಡೆ ಮಾಡುತ್ತಿರುವ ಪರಿಣಾಮ, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಬೇಕಾಗಿದೆ.

ಬೀದಿ ಬದಿ ವ್ಯಾಪಾರಿಗಳು ರಸ್ತೆಯಲ್ಲಿ ತರಕಾರಿಗಳನ್ನು ರಾಶಿ ಹಾಕಿಕೊಂಡು ವ್ಯಾಪಾರ ಮಾಡುತ್ತಾರೆ. ಸಂತೆಗೆ ಬರುವ ಗ್ರಾಹಕರು ರಸ್ತೆಯ ಎರಡೂ ಕಡೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುತ್ತಾರೆ. ಇದರಿಂದಾಗಿ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಸ್ಥಳವಿಲ್ಲದೆ ಸಂಚಾರ ದಟ್ಟಣೆ ನಿರ್ಮಾಣವಾಗುತ್ತಿದೆ. ನೌಕರರು ಸಮಯಕ್ಕೆ ಸರಿಯಾಗಿ ಕಚೇರಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳೂ ಸಮಸ್ಯೆ ಎದುರಿಸುತ್ತಿದ್ದಾರೆ.

‘ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳು ಮತ್ತು ಸಂಚಾರ ಪೊಲೀಸರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಯಲಹಂಕ ನಿವಾಸಿ ವೀರಭದ್ರೇಗೌಡ ದೂರಿದರು.

‘ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಮುಗಿದ ನಂತರ ತರಕಾರಿ ತ್ಯಾಜ್ಯಗಳನ್ನು ಅಲ್ಲಿಯೇ ಬಿಟ್ಟು ಹೋಗುವುದರಿಂದ ರಸ್ತೆಯಲ್ಲೆಲ್ಲಾ ಕಸದ ರಾಶಿ ಹರಡುತ್ತದೆ. ಇದನ್ನು ತಿನ್ನಲು ಬರುವ ಹಸುಗಳು ಮತ್ತು ನಾಯಿಗಳು ವಾಹನಗಳಿಗೆ ಅಡ್ಡ ಬರುವುದರಿಂದ ವಾಹನ ಸವಾರರು ಆತಂಕದಿಂದ ಈ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಈಗಾಗಲೇ ಹಲವು ಮಂದಿ ವಾಹನಗಳಿಂದ ಬಿದ್ದು ಗಾಯಗೊಂಡಿದ್ದಾರೆ’ ಎಂದು ಅವರು ತಿಳಿಸಿದರು.

‘ವ್ಯಾಪಾರಿಗಳಿಗೆ ಸಂತೆಯೊಳಗೆ ಮಳಿಗೆಗಳನ್ನು ನೀಡಿದ್ದರೂ ತರಕಾರಿಗಳನ್ನು ಮಳಿಗೆಯ ಕೆಳಗಿಟ್ಟು ವ್ಯಾಪಾರ ಮಾಡುವುದರಿಂದ ಗ್ರಾಹಕರಿಗೆ ನಡೆದಾಡಲು ಸ್ಥಳವಿಲ್ಲದೆ ಕಿರಿಕಿರಿ ಅನುಭವಿಸಬೇಕಾಗಿದೆ. ಇದರಿಂದ ಆಗಾಗ ಗ್ರಾಹಕರ ಮೊಬೈಲ್, ಹಣ ಕಳವಾಗುತ್ತಿರುವ ಪ್ರಕರಣಗಳೂ ನಡೆಯುತ್ತಿರುತ್ತವೆ’ ಎಂದು ಸ್ಥಳೀಯ ನಿವಾಸಿ ಮಂಜುನಾಥ್ ದೂರಿದರು.

‘ತರಕಾರಿಗಳನ್ನು ವಿಲೇವಾರಿ ಮಾಡಲು ಸಂತೆಯೊಳಗೆ ಬರುವ ಸರಕು ವಾಹನಗಳನ್ನು ನಿಲ್ಲಿಸಿ ಹೋಗುವ ಚಾಲಕರು, ಗಂಟೆಗಟ್ಟಲೆ ಇತ್ತ ಸುಳಿಯುವುದಿಲ್ಲ. ಇದರ ಜೊತೆಗೆ ಗ್ರಾಹಕರು ತಮ್ಮ ಕಾರುಗಳನ್ನು ನಿಲ್ಲಿಸಿ ಹೋಗುವುದರಿಂದ ನಿಯಮಾನುಸಾರ ಸಂತೆಯೊಳಗೆ ಬಂದುಹೋಗುವ ವಾಹನಗಳಿಗೆ ಸ್ಥಳಾವಕಾಶವಿಲ್ಲದೆ ಪರದಾಡಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಭದ್ರತಾ ಸಿಬ್ಬಂದಿ ಜತೆ ಜಗಳವಾಡುತ್ತಾರೆ’
ಸರಕು ವಾಹನಗಳು ರಸ್ತೆಯಲ್ಲಿ ನಿಲ್ಲಿಸಿ ತರಕಾರಿಗಳನ್ನು ಸಂತೆಯೊಳಗೆ ವಿಲೇವಾರಿ ಮಾಡಬೇಕೆಂದು ಸೂಚಿಸಿದ್ದರೂ ಸಂತೆಯೊಳಗೆ ವಾಹನ ತಂದು ವಿಲೇವಾರಿ ಮಾಡುತ್ತಾರೆ. ಇದರ ಜೊತೆಗೆ ಗ್ರಾಹಕರ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದ ತರಕಾರಿಗಳನ್ನು ಕೊಳ್ಳಲು ಬರುವ ಗ್ರಾಹಕರಿಗೆ ನಡೆದಾಡಲು ಸ್ಥಳವಿಲ್ಲದೆ ಸಮಸ್ಯೆಯಾಗುತ್ತಿದೆ. ಧ್ವನಿವರ್ಧಕದ ಮೂಲಕ ಸಾಕಷ್ಟು ಬಾರಿ ಘೋಷಿಸಿದರೂ ಚಾಲಕರು ಬರುವುದಿಲ್ಲ. ಪ್ರಶ್ನಿಸಲು ಮುಂದಾಗುವ ಭದ್ರತಾ ಸಿಬ್ಬಂದಿಯ ಮೇಲೆಯೆ ಜಗಳಕ್ಕೆ ಬರುತ್ತಾರೆ ಎಂದು ರೈತರ ಸಂತೆಯ ಮೇಲ್ವಿಚಾರಕ ರಮೇಶ್ ಹೇಳಿದರು.

‘ಅಧಿಕಾರಿಗಳ ನಡುವೆ ಸಮನ್ವಯ ಇರಬೇಕು’
ನಿಯಮಗಳನ್ನು ಉಲ್ಲಂಘಿಸುವ ಸರಕು ವಾಹನಚಾಲಕರು ಮತ್ತು ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುವ ಗ್ರಾಹಕರ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಎಪಿಎಂಸಿ ಅಧಿಕಾರಿಗಳಿಗೆ ತಿಳಿಸಿದ್ದರೂ ಸಹ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಂಚಾರ ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಜೊತೆಗೆ ಸರಕು ವಾಹನ ಸವಾರರು ಹಾಗೂ ಗ್ರಾಹಕರು ಸ್ವಯಂಪ್ರೇರಿತರಾಗಿ ಸಹಕಾರ ನೀಡಿದರೆ ಸಮಸ್ಯೆ ಬಗೆಹರಿಯಲಿದೆ ಎಂದು ಕೆಂಪೇಗೌಡ ವಾರ್ಡ್‌ನ ಪಾಲಿಕೆ ಸದಸ್ಯೆ ಚಂದ್ರಮ್ಮ ಕೆಂಪೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT