ಶುಕ್ರವಾರ, ಡಿಸೆಂಬರ್ 6, 2019
20 °C
ಗಂಡಸಾಗಿ ನೀವೆಷ್ಟು ತಂದಿದ್ದೀರಿ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ತಿರುಗೇಟು, ಕುಮಾರಸ್ವಾಮಿ ವಿರುದ್ಧ ವ್ಯಂಗ್ಯ

ರಮೇಶ್ ಸರ್ ಎನ್ನುತ್ತಿದ್ದ ಲಕ್ಷ್ಮಿಈಗ ಡಿಕೆ ಸರ್ ಎನ್ನುತ್ತಾರೆ: ಯತ್ನಾಳ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆಲಸಂಗ (ಅಥಣಿ ತಾಲ್ಲೂಕು): ‘ಹೌದವ್ವಾ ನಿನ್ನ ನೋಡಿದ ಕೂಡ್ಲೇ ಎಲ್ಲರೂ ಕೊಡ್ತಾರೆ. ಬೆಂಗಳೂರಿನಲ್ಲಿ ಏನು ನಡೆಯುತ್ತದೆ ಎನ್ನುವುದು ನನಗೆ ಗೊತ್ತಿಲ್ಲವೇ? ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದರೆ ನಮಗೆ ಕಾಣುವುದಿಲ್ಲವೇ?’

– ‘ಮಹಿಳೆಯಾಗಿ ಕ್ಷೇತ್ರಕ್ಕೆ ₹ 1,200 ಕೋಟಿ ಅನುದಾನ ತಂದಿದ್ದೇನೆ. ಗಂಡಸರಾಗಿ ನಿಮಗೇನಾಗಿದೆ’ ಎಂದು ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರನ್ನು ಟೀಕಿಸಿದ್ದ ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿರುಗೇಟು ನೀಡಿದ್ದು ಹೀಗೆ.

ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಕುಮಠಳ್ಳಿ ಗಂಡಸ್ತನದ ಬಗ್ಗೆ ಒಬ್ಬರು ಕೇಳಿದ್ದಾರೆ. ಕುಮಠಳ್ಳಿ ಸಿ.ಎಂ. ಮುಂದೆ ಗಂಡಸ್ತನ ತೋರಿಸಬೇಕಾ? ಹಂಗ್‌ ಮಾಡಿದೀನಿ, ಹಿಂಗ್ ಮಾಡಿದೀನಿ ಡ್ಯಾಶ್‌ ಡ್ಯಾಶ್‌ ಅಂತಾರೆ. ನಿಮಗೆ ಅನುದಾನ ಹೇಗೆ ಕೊಟ್ಟಿದ್ದಾರೆಂದು ನಮಗೂ ಗೊತ್ತಿದೆ ಡ್ಯಾಶ್‌ ಡ್ಯಾಶ್‌!’ ಎಂದು ಟೀಕಿಸಿದರು.

ಇದನ್ನೂ ಓದಿ: ಕ್ಷೇತ್ರಕ್ಕೆ ಹಣ ತರದವ ವೀರನೂ...! ಕುಮಠಳ್ಳಿ ವಿರುದ್ಧ ಲಕ್ಷ್ಮೀ ಹೇಳಿದ್ದೇನು?

‘ಮೊದಲು ರಮೇಶ್ ಸರ್ ಎನ್ನುತ್ತಿದ್ದ ಲಕ್ಷ್ಮಿ ಈಗ, ಡಿಕೆ ಸರ್‌ ಎನ್ನುತ್ತಿದ್ದಾರೆ. ಯಾರನ್ನು ಯಾವಾಗ ಕೆಡುವುತ್ತಾರೋ ಗೊತ್ತಿಲ್ಲ. ನನ್ನ ಬಗ್ಗೆ ಏನಾದರೂ ಹಗುರವಾಗಿ ಮಾತನಾಡಿದ್ದರೆ ಹೊಡೆದು ಬರ್ತಿದ್ದೆ’ ಎಂದು ವಾಗ್ದಾಳಿ ನಡೆಸಿದರು.

‘ನಮ್ಮ‌ ಧರ್ಮ ಉಳಿಯಬೇಕೆಂದರೆ ಮತ ಹಾಕಿ, ಇಲ್ಲವಾದರೆ ಹೋಗಿ ಎಂದು ಹೇಳಿ ಮತ ಕೇಳಿದ್ದೆ. ಅದಕ್ಕೆ ಎಲ್ಲರೂ ಮತ ಹಾಕಿದರು’ ಎಂದರು.

‘ನನ್ನನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದರೆ ಒಲ್ಲೆ ಎನ್ನುವುದಿಲ್ಲ’ ಎಂದು ಇಂಗಿತ ವ್ಯಕ್ತಪಡಿಸಿದರು.

‘‘ನೀವು ಮುಖ್ಯಮಂತ್ರಿಯಾಗುವುದು ಇದೇ ಕೊನೆ. ನನ್ನನ್ನು ಮಂತ್ರಿ ಮಾಡುತ್ತೀರೋ ಇಲ್ಲವೋ ಗೊತ್ತಿಲ್ಲ. ಜನರು ನೆನಪಿನಲ್ಲಿಡುವಂಥ ಕೆಲಸ ಮಾಡಿ’ ಎಂದು ಯಡಿಯೂರಪ್ಪ ಅವರಿಗೆ ಹೇಳಿದ್ದೇನೆ’’ ಎಂದರು.

‘ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗ ಈ ಭಾಗಕ್ಕೆ ಬರಲಿಲ್ಲ. ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಕುಳಿತು ಹಣ ಸಂಗ್ರಹಿಸುತ್ತಿದ್ದರು. ವಿಜಯಪುರದ ಗ್ರಾಮವೊಂದರಲ್ಲಿ ವಾಸ್ತವ್ಯ ಹೂಡಿದ್ದ ಮನೆಗೆ ಎಸಿ ಹಾಕಿಸಿದ್ದರು. ಟಿವಿಯವರು ಹೋಗುತ್ತಿದ್ದಂತೆಯೇ ಪ್ರವಾಸಿಮಂದಿರಕ್ಕೆ ಬಂದರು. ಊಟ ಮಾಡಿ ಮಲಗಿದ್ದರು. ಮುಂಜಾನೆ ನಾಲ್ಕೂವರೆಗೆ ಎದ್ದು ವಾಸ್ತವ್ಯದ ಮನೆಗೆ ಹೋದರು. ಗ್ರಾಮ ವಾಸ್ತವ್ಯದಲ್ಲಿ ಮಧ್ಯರಾತ್ರಿ‌ ಏನು ನಡೆಯುತ್ತಿತ್ತು ಎನ್ನುವುದು ಗೊತ್ತಿದೆ’ ಎಂದು ಲೇವಡಿ ಮಾಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು