ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸ ಗೆದ್ದ ಯಡಿಯೂರಪ್ಪ | ಸಂಪುಟ ವಿಸ್ತರಣೆ: ಎಲ್ಲ ‘ಅಮಿತ’ ಆಟ

‘ಸುಪ್ರೀಂ’ ಮೊರೆ ಹೋದ ಜಾರಕಿಹೊಳಿ, ಕುಮಠಳ್ಳಿ, ಶಂಕರ್
Last Updated 29 ಜುಲೈ 2019, 20:06 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿಶ್ವಾಸ ಮತ ಗೆದ್ದಿದ್ದು, ಅವರ ನೇತೃತ್ವದ ಏಕವ್ಯಕ್ತಿ ಸಚಿವ ಸಂಪುಟ ವಿಸ್ತರಣೆಯ ಹಣೆಬರಹವು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಅಂಗಳ ತಲುಪಿದೆ.

ಸೋಮವಾರ ನಡೆದ ಕಲಾಪದಲ್ಲಿ ವಿಶ್ವಾಸ ಮತ ಯಾಚನೆ ಮಂಡಿಸಿದ ಯಡಿಯೂರಪ್ಪ ಅದನ್ನು ಧ್ವನಿಮತದ ಮೂಲಕ ಗೆದ್ದರು. ಬಳಿಕ, ಮೂರು ತಿಂಗಳ ಅವಧಿಯಲ್ಲಿ ಸರ್ಕಾರ ಮಾಡಬೇಕಾದ ಖರ್ಚಿಗೆ ಲೇಖಾನುದಾನವನ್ನೂ ಪಡೆದುಕೊಂಡರು. ಅದಾದ ತರುವಾಯ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು.

‘ಮಂಗಳವಾರ ನವದೆಹಲಿಗೆ ತೆರಳಲಿರುವ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲಿದ್ದಾರೆ. ಶುಕ್ರವಾರದ ಹೊತ್ತಿಗೆ ಸಂಪುಟ ವಿಸ್ತರಣೆಯಾಗಲಿದೆ ಎಂಬ ಲೆಕ್ಕಾಚಾರ ಇತ್ತು. ಆದರೆ, ದೆಹಲಿಗೆ ಬರುವಂತೆ ಪಕ್ಷದ ನಾಯಕರಿಂದ ಸೂಚನೆ ಬರಲಿಲ್ಲ. ಹೀಗಾಗಿ, ವಿಧಾನಸಭಾಧ್ಯಕ್ಷರ ಚುನಾವಣೆ ಮುಗಿದ ನಂತರವೇ ಕೇಂದ್ರ ನಾಯಕರ ಜತೆ ಚರ್ಚಿಸುವ ತೀರ್ಮಾನಕ್ಕೆ ಯಡಿಯೂರಪ್ಪ ಬಂದಿದ್ದಾರೆ’ ಎಂದು ಪಕ್ಷದ ಮೂಲಗಳು ವಿವರಿಸಿವೆ.

‘ಈಗಿನ ಪರಿಸ್ಥಿತಿ ಗಮನಿಸಿದರೆ ಶುಕ್ರವಾರವೂ ಮುಹೂರ್ತ ಕೂಡಿ ಬರುವುದು ಅನುಮಾನ. ಆಗಸ್ಟ್ 7ರವರೆಗೆ ಸಂಸತ್ ಅಧಿವೇಶನದಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಸಹ ಈ ಅವಧಿಯಲ್ಲಿ ಸಿಗುವ ಸಾಧ್ಯತೆ ಇಲ್ಲ. ಈಗಿನ ಬೆಳವಣಿಗೆಗಳನ್ನು ನೋಡಿದರೆ, ಸಂಸತ್‌ ಅಧಿವೇಶನ ಮುಗಿಯವವರೆಗೆ ಸಂಪುಟ ವಿಸ್ತರಣೆ ಕಷ್ಟ’ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದರು.

ಸಂಪುಟ ಸಂಕಟ: ‘ಆರು ವರ್ಷಗಳ ಬಳಿಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಲು 30ಕ್ಕೂ ಹೆಚ್ಚು ಹಿರಿಯರು ಹಾಗೂ ದಶಕದ ಹಿಂದೆ ವಲಸೆ ಬಂದವರು ಉತ್ಸುಕರಾಗಿದ್ದಾರೆ. ಆದರೆ, ಈ ಬಾರಿ ಹಿರಿಯರು, ಪ್ರಾದೇಶಿಕ ಅಥವಾ ಜಾತಿಯ ಪ್ರಾತಿನಿಧ್ಯದ ಆಧಾರದ ಮೇಲೆ ಸಚಿವ ಸ್ಥಾನ ಹಂಚಿಕೆ ಮಾಡುವುದಿಲ್ಲ. ಅಲ್ಲದೇ, ಕಳಂಕಿತರು, ಭ್ರಷ್ಟಾಚಾರದ ಹಗರಣದ ಆರೋಪ ಹೊತ್ತಿರುವವರನ್ನು ಸಂಪುಟದಿಂದ ಹೊರಗಿಡಲು ಎಂಬ ನಿರ್ಧಾರಕ್ಕೆ ವರಿಷ್ಠರು ಬಂದಿದ್ದಾರೆ. ಯಡಿಯೂರಪ್ಪ ಅವರು ಬಯಸಿದರೂ ವರಿಷ್ಠರು ಅದಕ್ಕೆ ಮಣೆ ಹಾಕುವುದಿಲ್ಲ. ಹೀಗಾಗಿ, ಹಿರಿತನ ಅಥವಾ ಜಾತಿ ಕೋಟಾದ ಮೇಲೆ ಸಚಿವ ಸ್ಥಾನ ಗಿಟ್ಟಿಸುವುದು ಕಷ್ಟ’ ಎಂದು ಅವರು ವಿವರಿಸಿದರು.

‘ಯಾರು ಸಚಿವರಾಗಬೇಕು ಎಂಬ ಪಟ್ಟಿಯನ್ನು ವರಿಷ್ಠರಿಗೆ ಕಳುಹಿಸುವುದಷ್ಟೇ ನಮ್ಮ ಕೆಲಸ. ಅದಕ್ಕೆ ಒಪ್ಪಿಗೆ ನೀಡುವುದು ಪ್ರಧಾನಿ, ಶಾ, ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿವೇಚನೆಗೆ ಬಿಟ್ಟಿದ್ದಾಗಿದೆ. ನಮ್ಮ ಶಿಫಾರಸಿನ ಪಟ್ಟಿಯಲ್ಲಿರುವವರ ಪೈಕಿ, ಸದನದ ಒಳಗೆ ಅಥವಾ ಹೊರಗೆ ಸರ್ಕಾರವನ್ನು ಪ್ರಬಲವಾಗಿ ಸಮರ್ಥಿಸಿಕೊಳ್ಳುವ ನಾಲ್ಕೈದು ಮಂದಿಗೆ ಅವಕಾಶ ಸಿಗಬಹುದಷ್ಟೆ’ ಎಂದು ಹೇಳಿದರು.

ಅನರ್ಹರು ಕೋರ್ಟ್‌ಗೆ: ಶಾಸಕ ಸ್ಥಾನ ದಿಂದ ಅನರ್ಹಗೊಂಡ ರಮೇಶ ಜಾರಕಿ ಹೊಳಿ, ಮಹೇಶ ಕುಮಠಳ್ಳಿ ಹಾಗೂ ಆರ್. ಶಂಕರ್ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಉಳಿದವರು, ಅದೇ ಹಾದಿ ಹಿಡಿಯಲಿದ್ದಾರೆ.

ನಿಗಮ–ಮಂಡಳಿ ನೇಮಕ ರದ್ದು

ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ನಿಗಮ, ಮಂಡಳಿ, ಪ್ರಾಧಿಕಾರ, ಆಯೋಗ, ಸಂಸ್ಥೆಗಳ ಅಧ್ಯಕ್ಷ ಹಾಗೂ ನಿರ್ದೇಶಕರ ನೇಮಕಾತಿಗಳನ್ನು ಬಿಜೆಪಿ ಸರ್ಕಾರ ರದ್ದುಪಡಿಸಿದೆ.

ಎಲ್ಲ ಅಧಿಕಾರೇತರ ಅಧ್ಯಕ್ಷರು, ನಿರ್ದೇಶಕರ ನಾಮನಿರ್ದೇಶನಗಳನ್ನು ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ ತಕ್ಷಣದಿಂದ ರದ್ದುಪಡಿಸಲಾಗಿದೆ. ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ಗಳಿಗೆ ನೇಮಕವಾಗಿದ್ದ ಸದಸ್ಯರ ಪಟ್ಟಿ ಕೂಡ ರದ್ದುಗೊಂಡಿದೆ. ಅಕಾಡೆಮಿಗಳ ಅಧ್ಯಕ್ಷರ ಅಧಿಕಾರ ಕುರಿತು ಮಂಗಳವಾರ ಸ್ಪಷ್ಟನೆ ಹೊರಬೀಳಲಿದೆ.

ಬಿಎಸ್‌ವೈ ಹೊಸ ಬಜೆಟ್‌?

ಯಡಿಯೂರಪ್ಪ ಅವರು ತಮ್ಮ ಸರ್ಕಾರದ ನಿಲುವು–ಕಾರ್ಯಕ್ರಮಗಳನ್ನು ಬಿಂಬಿಸುವ ಹೊಸ ಬಜೆಟ್‌ ಮಂಡಿಸಲಿದ್ದಾರೆಯೇ ಎಂಬ ಚರ್ಚೆ ರಾಜ ಕೀಯ ವಲಯದಲ್ಲಿ ನಡೆದಿದೆ. ಕುಮಾರಸ್ವಾಮಿ ಮಂಡಿಸಿದ ಬಜೆಟ್‌ಗೆ ಅನುಮೋದನೆ ಪಡೆಯದೇ, ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಅನ್ವಯವಾಗುವಂತೆ ಲೇಖಾನುದಾನಕ್ಕೆ ಮಾತ್ರ ಸೋಮವಾರ ಒಪ್ಪಿಗೆ ಪಡೆದಿರುವುದು ಈ ಚರ್ಚೆಗೆ ದಾರಿ ಮಾಡಿದೆ.

ಸಭಾಧ್ಯಕ್ಷ ಸ್ಥಾನಕ್ಕೆ ಬೋಪಯ್ಯ?

ಕೆ.ಆರ್‌.ರಮೇಶ್‌ ಕುಮಾರ್‌ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಸಭಾಧ್ಯಕ್ಷ ಸ್ಥಾನದ ಚುನಾವಣೆಗೆ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಕಣಕ್ಕಿಳಿಸಲು ಬಿಜೆಪಿ ತೀರ್ಮಾನಿಸಿದೆ.

ಬುಧವಾರ ಬೆಳಿಗ್ಗೆ 11ಕ್ಕೆ ಚುನಾವಣೆ ನಡೆಯಲಿದೆ. ಮಂಗಳವಾರ ಮಧ್ಯಾಹ್ನ 12 ಗಂಟೆಯೊಳಗೆ ಅಭ್ಯರ್ಥಿಗಳು ತಮ್ಮ ಸೂಚನಾಪತ್ರವನ್ನು ವಿಧಾನಸಭೆ ಕಾರ್ಯದರ್ಶಿಗೆ ಸಲ್ಲಿಸಬೇಕಿದೆ.

ಒಂದು ವೇಳೆ ಕಾಂಗ್ರೆಸ್‌– ಜೆಡಿಎಸ್‌ ಮಿತ್ರ ಪಕ್ಷಗಳು ಅಭ್ಯರ್ಥಿ ಕಣಕ್ಕಿಳಿಸಿದರೆ, ಚುನಾವಣೆ ಖಚಿತ. ಇಲ್ಲವಾದರೆ ಬೋಪಯ್ಯ ಅವಿರೋಧ ಆಯ್ಕೆಯಾಗಲಿದ್ದಾರೆ. ವಿರೋಧ ಪಕ್ಷದ ಕಡೆಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೇ ಎಂಬ ಬಗ್ಗೆ ಮಂಗಳವಾರ ಬೆಳಿಗ್ಗೆ ವಿರೋಧ ಪಕ್ಷದ ನಾಯಕರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸಭಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಜಗದೀಶ ಶೆಟ್ಟರ್‌, ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರೂ ಪ್ರಸ್ತಾಪವಾಗಿತ್ತು.

‘ಶಾಸಕರಾಗಿರಲು ಇದೇ ಕೊನೆ ಅವಕಾಶ, ಸಚಿವ ಸ್ಥಾನ ಕೊಡಿ’ ಎಂದು ಬೋಪಯ್ಯ ಅವರು ಯಡಿಯೂರಪ್ಪರಿಗೆ ಮನವಿ ಮಾಡಿದ್ದರು. ಆದರೆ, ಸಚಿವ ಸ್ಥಾನ ಸಿಗುವ ಖಾತ್ರಿ ಇಲ್ಲ ಎಂಬ ಕಾರಣಕ್ಕೆ, ಬೋಪಯ್ಯ ಪಕ್ಷದ ವರಿಷ್ಠರ ತೀರ್ಮಾನ ಒಪ್ಪಿಕೊಂಡರು ಎಂದು ಮೂಲಗಳು ತಿಳಿಸಿವೆ.

* ನಾನು ತಪ್ಪು ದಾರಿಯಲ್ಲಿ ನಡೆದರೆ ವಿರೋಧ ಪಕ್ಷದ ಪ್ರಮುಖರು ಒಂದು ಕರೆ ಮಾಡಿದರೆ ಸಾಕು. ತಪ್ಪನ್ನು ತಿದ್ದಿಕೊಳ್ಳುವೆ. ಜನಮೆಚ್ಚುವ ಆಡಳಿತ ನೀಡುವೆ

-ಬಿ.ಎಸ್‌. ಯಡಿಯೂರಪ್ಪ,ಮುಖ್ಯಮಂತ್ರಿ

* ಯಡಿಯೂರಪ್ಪ 3ವರ್ಷ 10 ತಿಂಗಳು ಮುಖ್ಯಮಂತ್ರಿ ಯಾಗಿರಬೇಕೆಂಬುದು ನನ್ನ ಅಭಿಲಾಶೆ. ಆದರೆ, ಎಷ್ಟು ದಿನ ಅಧಿಕಾರ ದಲ್ಲಿರುತ್ತಾರೋ ಗ್ಯಾರಂಟಿ ಇಲ್ಲ

-ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ

* ಇನ್ನಷ್ಟು ಶಾಸಕರ ರಾಜೀನಾಮೆ ಕೊಡಿಸಲು ಬಿಜೆಪಿ ತಯಾರಿ ನಡೆಸಿರುವುದು ಗೊತ್ತಾಗಿದೆ. ಅದನ್ನು ನಿಲ್ಲಿಸಿ. ಶಾಸಕರು ನಿರ್ಭೀತಿಯಿಂದಿರುವಂತೆ ನೋಡಿಕೊಳ್ಳಿ

-ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT