ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೇ ಸಂಪುಟ ಸಭೆ ಆಗದಿರಲಿ: ಯಡಿಯೂರಪ್ಪ

ಸಂಪುಟ ಸಭೆಯಲ್ಲಿ ಭಾವುಕರಾದ ಮುಖ್ಯಮಂತ್ರಿ ಯಡಿಯೂರಪ್ಪ
Last Updated 20 ನವೆಂಬರ್ 2019, 20:22 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರ ಉಳಿಸಿಕೊಳ್ಳಬೇಕಾದರೆ ಕನಿಷ್ಠ ಎಂಟು ಕ್ಷೇತ್ರಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯದಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಶಾಸಕ ಸ್ಥಾನ ತ್ಯಜಿಸಿ ಬಿಜೆಪಿಗೆ ಬಂದಿರುವವರೂ ಸೇರಿದಂತೆ ಪಕ್ಷದ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಲು ಹಗಲಿರುಳು ಶ್ರಮಿಸುವಂತೆ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ತಾಕೀತು ಮಾಡಿದ್ದಾರೆ.

ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾರ್ಯಸೂಚಿಯಲ್ಲಿದ್ದ ವಿಷಯಗಳನ್ನು ಬದಿಗಿಟ್ಟು, ಉಪಚುನಾವಣೆ ಗೆಲ್ಲುವ ಕಾರ್ಯತಂತ್ರ, ಸಚಿವರ ಜವಾಬ್ದಾರಿಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ ಅವರು ಕೆಲವು ಕ್ಷಣ ಭಾವುಕತೆಗೂ ಒಳಗಾದರು ಎಂದು ಮೂಲಗಳು ಹೇಳಿವೆ.

‘ಕಾಂಗ್ರೆಸ್‌–ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದಾಗಿಯೇ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅವರೆಲ್ಲರನ್ನೂ ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಪ್ರಾಮಾಣಿಕವಾಗಿ ನಾವು ಕೆಲಸ ಮಾಡದೇ ಇದ್ದರೆ ಇದೇ ಕೊನೆಯ ಸಚಿವ ಸಂಪುಟ ಸಭೆಯಾಗುವ ಅಪಾಯವೂ ಇದೆ. ಹಾಗಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಿಮ್ಮದಾಗಿದೆ. ಸರ್ಕಾರ ಉಳಿಯಬೇಕಾದರೆ ಕನಿಷ್ಠ 8 ರಿಂದ 10 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು. ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿ ಇಟ್ಟುಕೊಂಡು ಕೆಲಸ ಮಾಡೋಣ ಎಂದು ಕಿವಿಮಾತು ಹೇಳಿದರು.’

‘ಸರ್ಕಾರದ ಬೆಂಬಲಕ್ಕೆ ನಿಂತವರು ಗೆಲ್ಲದೇ ಇದ್ದರೆ ನೀವೂ ಈ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ. ನಾನೂ ಇರಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾದರೆ ಈ ಸವಾಲಿನ ಚುನಾವಣೆಯನ್ನು ಗೆಲ್ಲಲೇಬೇಕು ಎಂದು ಹೇಳಿದ್ದಾಗಿ ಗೊತ್ತಾಗಿದೆ.’

‘ಗುರುವಾರದಿಂದಲೇ ಎಲ್ಲರೂ ತಮಗೆ ವಹಿಸಿದ ಜವಾಬ್ದಾರಿಯನ್ನು ನಿಭಾಯಿಸಲು ಉಸ್ತುವಾರಿ ವಹಿಸಿರುವ ಕ್ಷೇತ್ರಕ್ಕೆ ತೆರಳಬೇಕು. ಬಹಿರಂಗ ಪ್ರಚಾರ ಅಂತ್ಯವಾಗುವವರೆಗೆ ಯಾರೊಬ್ಬರೂ ಕ್ಷೇತ್ರ ಬಿಟ್ಟು ಕದಲಬಾರದು. ಚುನಾವಣೆಗೆ ಬೇಕಾದ ಎಲ್ಲ ತಂತ್ರಗಾರಿಕೆ, ಸಂಪನ್ಮೂಲ ಕ್ರೋಡೀಕರಣ, ಅತೃಪ್ತರ ಮನವೊಲಿಸುವುದು ಹಾಗೂ ನಮ್ಮ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿಗಳನ್ನು ಗೆಲ್ಲಿಸಲು ದುಡಿಯಬೇಕು ಎಂದು ಸೂಚಿಸಿದರು.’

ಕುರುಬ ಸಮುದಾಯದ ಸ್ವಾಮೀಜಿ ಕುರಿತು ಸಚಿವ ಮಾಧುಸ್ವಾಮಿ ಅವರು ಮಾತನಾಡಿದ್ದನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಯಡಿಯೂರಪ್ಪ, ‘ಆಗಿದ್ದು ಆಗಿ ಹೋಗಿದೆ. ಚುನಾವಣೆ ಹೊತ್ತಿನಲ್ಲಿ ನಾವು ಮಾತನಾಡಿದ್ದನ್ನೇ ಮುಂದಿಟ್ಟುಕೊಂಡು ವಿವಾದ ಎಬ್ಬಿಸಲು ವಿರೋಧ ಪಕ್ಷದವರು ಕಾದು ಕುಳಿತಿದ್ದಾರೆ. ಕೆಲವು ಮಾಧ್ಯಮದವರಿಗೂ ವಿವಾದವೇ ಬೇಕಾಗಿದೆ. ಪ್ರತಿಯೊಬ್ಬರೂ ಮಾತನಾಡುವ ಮುನ್ನ ಎಚ್ಚರವಹಿಸಬೇಕು. ಬಾಯಿ ತಪ್ಪಿ ಕೂಡ ಆಕ್ಷೇಪಾರ್ಹ ಮಾತು ಆಡಬಾರದು’ ಎಂದು ಹೇಳಿದ್ದಾಗಿ ಗೊತ್ತಾಗಿದೆ.

ಉಸ್ತುವಾರಿ ಬದಲು: ಕೆಲವು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಹರಸಾಹಸ ಪಡಬೇಕಾಗುತ್ತದೆ ಎಂಬ ಗುಪ್ತಚರ ಮಾಹಿತಿ ಆಧರಿಸಿ ಉಸ್ತುವಾರಿಗಳನ್ನು ಬದಲು ಮಾಡಲಾಗಿದೆ.

ಕೆ.ಆರ್. ಪೇಟೆ ಕ್ಷೇತ್ರದ ಜವಾಬ್ದಾರಿಯನ್ನು ಜೆ.ಸಿ. ಮಾಧುಸ್ವಾಮಿ ಅವರಿಂದ ಕಿತ್ತುಕೊಂಡು ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ವಹಿಸಲಾಗಿದೆ.

ಹೊಸಕೋಟೆ ಜವಾಬ್ದಾರಿಯನ್ನು ಅಶ್ವತ್ಥನಾರಾಯಣ ಅವರ ಬದಲು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್‌ ಹಾಗೂ ವಕ್ತಾರ ಅಶ್ವತ್ಥನಾರಾಯಣಗೌಡ ಅವರಿಗೆ ನೀಡಲಾಗಿದೆ.

ಚಿಕ್ಕಬಳ್ಳಾಪುರಕ್ಕೆ ಸಿ.ಟಿ. ರವಿ ಹಾಗೂ ಕೆ.ಆರ್. ಪುರಕ್ಕೆ ಆರ್. ಅಶೋಕ ಅವರನ್ನು ಉಸ್ತುವಾರಿಯಾಗಿ ನಿಯೋಜಿಸಲಾಗಿದೆ. ಯಶವಂತಪುರದಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ನೀಡಲಾಗಿದೆ.

ಅನರ್ಹರ ಗೆಲುವಿಗೆ ಹಲವು ಕಂಟಕ

ಕಾಂಗ್ರೆಸ್–ಜೆಡಿಎಸ್‌ನಿಂದ ಕರೆದುಕೊಂಡು ಬಂದ ಕಾರಣಕ್ಕೆ ‘ಅನರ್ಹ’ರಾಗಿ ಈಗ ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವುದು ಕಮಲ ಪಕ್ಷದ ನಾಯಕರಿಗೆ ದೊಡ್ಡ ಸವಾಲಾಗಿದೆ.

ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್–ಜೆಡಿಎಸ್‌ ಶಾಸಕರಾಗಿದ್ದವರ ವಿರುದ್ಧ ಹೋರಾಡುತ್ತಲೇ ರಾಜಕಾರಣ ಮಾಡಿಕೊಂಡು ಬಂದ ಬಿಜೆಪಿ ಕಾರ್ಯಕರ್ತರು ಈಗ ತಮ್ಮ ಹಿಂದಿನ ‘ಶತ್ರು’ವಿನ ಪರ ಕೆಲಸ ಮಾಡಬೇಕಾಗಿದೆ. ಹಿಂದಿನ ಶಾಸಕರನ್ನು ಪ್ರಶ್ನೆ ಮಾಡಿದ್ದಕ್ಕೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಹಾಕಿಸಿಕೊಂಡವರು ಈಗ ಅದೇ ಅಭ್ಯರ್ಥಿ ಪರವಾಗಿ ಮತಯಾಚಿಸುವ ಅನಿವಾರ್ಯಕ್ಕೆ ತುತ್ತಾಗಿದ್ದಾರೆ. ತಳಮಟ್ಟದ ಕಾರ್ಯಕರ್ತರ ಮಧ್ಯೆ ಇದ್ದ ಹಳೆ ಮುನಿಸುಗಳು ಹಾಗೆಯೇ ಉಳಿದಿದ್ದು, ಅವರ ಮಧ್ಯೆ ಹೊಸ ಬಾಂಧವ್ಯ ಬೆಸೆಯುವುದು ಸಂಕಷ್ಟದ ಕೆಲಸವಾಗಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು.

ಹೊಸಕೋಟೆ, ವಿಜಯನಗರ, ಗೋಕಾಕ, ಅಥಣಿಯಲ್ಲಿ ಪಕ್ಷದ ಟಿಕೆಟ್ ಸಿಗದೇ ಇರುವವರ ಪೈಕಿ ಇಬ್ಬರು ಪಕ್ಷೇತರರಾಗಿ, ಇನ್ನಿಬ್ಬರು ಜೆಡಿಎಸ್ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದಾರೆ. ಮನವೊಲಿಸುವ ಯತ್ನ ನಡೆಯುತ್ತಲೇ ಇದ್ದರೂ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡಿಲ್ಲ. ದೊಡ್ಡ ಮಟ್ಟದಲ್ಲಿ ಮತ ವರ್ಗಾವಣೆಯಾಗದೇ ಇದ್ದರೂ ಕೆಲವೊಂದಿಷ್ಟು ಕಾರ್ಯಕರ್ತರು ಅವರ ಜತೆಗೆ ಉಳಿದಿದ್ದಾರೆ. ಇದು ಅನರ್ಹರ ಗೆಲುವಿಗೆ ಅಡಚಣೆಯಾಗುವ ಸಾಧ್ಯತೆ ಇದೆ. ಪಕ್ಷದ ಕಾರ್ಯಕರ್ತರ ಮನವೊಲಿಸಿ, ಅಭ್ಯರ್ಥಿ ಪರ ಕೆಲಸ ಮಾಡುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಕ್ಷೇತ್ರವಾರು ನೇಮಿಸಿರುವ ಉಸ್ತುವಾರಿಗಳಿಗೆ ವಹಿಸಲಾಗಿದೆ. ಅದು ಎಷ್ಟರ ಮಟ್ಟಿಗೆ ಫಲ ಕೊಡುತ್ತದೆ ಎಂಬುದು ಫಲಿತಾಂಶದ ಬಳಿಕವಷ್ಟೇ ಗೊತ್ತಾಗಲಿದೆ ಎಂದು ಅವರು ವಿವರಿಸಿದರು.

‘ಅನರ್ಹ’ ಶಾಸಕರು ಪಕ್ಷಕ್ಕೆ ಬಂದಿರುವುದರಿಂದಾಗಿ ಅನೇಕ ಕ್ಷೇತ್ರಗಳಲ್ಲಿ ಹಿಂದೆ ಸ್ಪರ್ಧಿಸಿ ಗೆದ್ದವರು ಈಗ ಅನಾಥರಾಗಲಿದ್ದೇವೆ. ಅನರ್ಹರು ಗೆದ್ದರೆ ಈ ಕ್ಷೇತ್ರ ಕಾಯಂ ಆಗಿ ತಮ್ಮ ಕೈತಪ್ಪಲಿದೆ ಎಂಬ ಅಭಿಪ್ರಾಯವೂ ಕೆಲವು ಮಾಜಿ ಶಾಸಕರಲ್ಲಿದೆ. ಅವರು ಕೂಡ ಮನಃ
ಪೂರ್ವಕವಾಗಿ ಕೆಲಸ ಮಾಡುತ್ತಿಲ್ಲ. ಜಿಲ್ಲಾಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿಯಿಂದ ಗೆದ್ದಿರುವವರು ಆತಂಕದಲ್ಲಿದ್ದು, ಅವರು ಸಹಕರಿಸುತ್ತಿಲ್ಲ ಎಂಬ ಚರ್ಚೆಯೂ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT