ಯಡಿಯೂರಪ್ಪ ವಿರುದ್ಧ ‘ಆಡಿಯೊ’ ಸದ್ದು

7
ಜೆಡಿಎಸ್‌ ಕುತಂತ್ರ–ಬಿಜೆಪಿ; ಕೀಳುಮಟ್ಟದ ರಾಜಕೀಯ– ಕಾಂಗ್ರೆಸ್‌

ಯಡಿಯೂರಪ್ಪ ವಿರುದ್ಧ ‘ಆಡಿಯೊ’ ಸದ್ದು

Published:
Updated:

ಬೆಂಗಳೂರು: ಜೆಡಿಎಸ್‌ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಅವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಮಿಷ ಒಡ್ಡಿದ್ದರೆನ್ನಲಾದ ಸಂಭಾಷಣೆಯ ಆಡಿಯೊ ಭಾನುವಾರ ಕೂಡಾ ರಾಜಕೀಯ ವಲಯದಲ್ಲಿ ಸದ್ದು ಮಾಡಿತು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಜಲ ಸಂಪನ್ಮೂಲ ಡಿ.ಕೆ. ಶಿವಕುಮಾರ್, ‘ಮುಖ್ಯಮಂತ್ರಿ ಅವರು ಆಡಿಯೊ ಬಿಡುಗಡೆ ಮಾಡಿದ್ದರಿಂದ ಬಿಜೆಪಿಯವರು ಹತಾಶರಾಗಿದ್ದಾರೆ. ಅವರು ಅದನ್ನು ಬೋಗಸ್ ಎಂದಾದರೂ ಹೇಳಲಿ, ಫಿಲ್ಮ್ ಅಂತಾದರೂ ಹೇಳಲಿ. ಯಾರು ಏನು ಬೇಕಾದರೂ ವಾದ ಮಾಡಲಿ, ಸತ್ಯ ಮುಚ್ಚಿಡುವುದಕ್ಕೆ ಆಗುವುದಿಲ್ಲ’ ಎಂದರು.

‘ಬಿಜೆಪಿಯವರು ಹೇಳುತ್ತಿರುವ ವಿಡಿಯೊ ವಿಚಾರ ಬಹಳ ಹಿಂದೆ ಜೆಡಿಎಸ್‌ ಪಕ್ಷದೊಳಗೇ ಚರ್ಚೆ ಆಗಿದೆ. ಕುಮಾರಸ್ವಾಮಿ ಅವರು ಅಧಿವೇಶನದಲ್ಲೇ ಪ್ರಸ್ತಾಪ ಮಾಡಿದ್ದಾರೆ. ಅದರಲ್ಲಿ ಹೊಸದೇನೂ ಇಲ್ಲ’ ಎಂದರು.

‘ವಿದ್ಯಾವಂತರು, ಬುದ್ಧಿವಂತರು ಇದ್ದರಷ್ಟೇ ಸಾಲದು, ಪ್ರಜ್ಞಾವಂತಿಕೆಯೂ ಇರಬೇಕು. ನನ್ನ ಧ್ವನಿ, ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಧ್ವನಿಯನ್ನು ಯಾರಾದರೂ ಬದಲಾವಣೆ ಮಾಡುವುದಕ್ಕೆ ಆಗುತ್ತದೆಯೇ. ಯಾರೂ ಮಿಮಿಕ್ರಿ ಮಾಡಲು ಆಗುವುದಿಲ್ಲ. ವಾಸ್ತವಾಂಶ ಒಪ್ಪಿಕೊಳ್ಳಲೇಬೇಕು’ ಎಂದರು.

ತುಮಕೂರಿನಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ‘ಆಡಿಯೊದಲ್ಲಿರುವುದು ತಮ್ಮದೇ ಧ್ವನಿ ಎಂದು ಯಡಿಯೂರಪ್ಪ ಒಪ್ಪಿಕೊಂಡಿದ್ದರೆ ಅದಕ್ಕಿಂತ ಕೀಳುಮಟ್ಟದ ರಾಜಕೀಯ ಮತ್ತೊಂದಿಲ್ಲ’ ಎಂದು ಹೇಳಿದರು.

‘ಸಂಭಾಷಣೆಯಲ್ಲಿರುವ ಧ್ವನಿ ತಮ್ಮದೇ ಎಂಬುದು ಸಾಬೀತಾದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಯಡಿಯೂರಪ್ಪ ಹೇಳಿದ್ದರು. ಅವರೇ ಒಪ್ಪಿಕೊಂಡಿದ್ದರೆ ರಾಜಕೀಯ ನಿವೃತ್ತಿಯಾಗಬೇಕಾಗುತ್ತದೆ’ ಎಂದು ಹೇಳಿದರು.

ಜೆಡಿಎಸ್‌ ಕುತಂತ್ರ: ‘ಜೆಡಿಎಸ್‌ ನಾಯಕರು ಕುತಂತ್ರಗಳಿಗೆ ಹೆಸರುವಾಸಿ. ಇದೀಗ ಬಿಜೆಪಿ ನಾಯಕರ ಮೇಲೆ ಸಲ್ಲದ ಆರೋಪ ಹೊರಿಸಿ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ಪಾರಾಗಲು ಇದೀಗ ಕುತಂತ್ರ ನಡೆಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಆರೋಪಿಸಿದ್ದಾರೆ.

‘ಶರಣಗೌಡ ಅವರನ್ನು ಭೇಟಿಯಾಗಿದ್ದೇನೆ ಎಂದಷ್ಟೆ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಯಡಿಯೂರಪ್ಪ ಬಳಿ ಶರಣಗೌಡ ಅವರನ್ನು ಕಳುಹಿಸಿದ್ದೇ ಎಚ್‌.ಡಿ. ಕುಮಾರಸ್ವಾಮಿ. ಆದರೆ, ಇದೀಗ ತಾನೊಬ್ಬ ಸಾಚಾ ಎಂಬಂತೆ ವರ್ತಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ನಮ್ಮ ಬಳಿ ಹಣ ಇಲ್ಲ: ‘ಶಾಸಕರ ಖರೀದಿ ಮಾಡುವಷ್ಟು ಹಣ ನಮ್ಮ ಬಳಿ (ಜೆಡಿಎಸ್‌) ಇಲ್ಲ. ಬಿಜೆಪಿ ನಾಯಕರ ಬಳಿ ಹಣ ಇರಬಹುದು’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.

‘ಸುಭಾಷ್‌ ಗುತ್ತೇದಾರ್ ಈ ಹಿಂದೆ ಜೆಡಿಎಸ್‌ನಲ್ಲಿದ್ದರು. ನಂತರ ಬಿಜೆಪಿಗೆ ಹೋದರು. ಜೆಡಿಎಸ್‌ನಲ್ಲೇ ಉಳಿದಿದ್ದರೆ ಅವರನ್ನು ಸಚಿವರನ್ನಾಗಿ ಮಾಡುತ್ತಿದ್ದೆ’ ಎಂದು ಅವರು ಹೇಳಿದರು.

‘ಆಡಿಯೊ ವಿಷಯದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆಡಿಯೊ ಮಾಡಿರುವವರು ಯಾರು? ಅದು ತಮಗೆ ಸಂಬಂಧಿಸಿದ ವಿಚಾರವಲ್ಲ. ಹೀಗಾಗಿ, ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಪ್ರತಿಕ್ರಿಯಿಸಿದರು.

ದೂರು–ಪ್ರತಿದೂರು

ಬೆಂಗಳೂರು: ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ ಆಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಯಲ್ಲಿ ದೂರು– ಪ್ರತಿದೂರು ದಾಖಲಾಗಿದೆ.

‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನಕಲಿ ಆಡಿಯೊ ಸೃಷ್ಟಿಸಿದ್ದಾರೆ’ ಎಂದು ಆರೋಪಿಸಿ ಪತ್ರಕರ್ತ ಎಂ.ಬಿ. ಮರಂಕಲ್ ವಿಧಾನಸೌಧ ಠಾಣೆಗೆ ಭಾನುವಾರ ದೂರು ನೀಡಿದ್ದಾರೆ.

‘ಕುಮಾರಸ್ವಾಮಿ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು‌ ಬಿಜೆಪಿಯ ಘನತೆಗೆ ಧಕ್ಕೆ ತರಲು ಯತ್ನಿಸಿದ್ದಾರೆ. ಅದಕ್ಕಾಗಿ ಎಲೆಕ್ಟ್ರಾನಿಕ್ ದಾಖಲೆಗಳನ್ನು ತಿದ್ದಿ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಐಪಿಸಿ ಸೆಕ್ಷನ್ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಕುಮಾರಸ್ವಾಮಿಯವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಬೇಕು’ ಎಂದು ದೂರಿನಲ್ಲಿ ಅವರು ಆಗ್ರಹಿಸಿದ್ದಾರೆ.

ವಿಧಾನಸೌಧ ಪೊಲೀಸರು, ‘ದೂರು ಸ್ವೀಕರಿಸಲಾಗಿದೆ. ಎಫ್‌ಐಆರ್‌ ದಾಖಲಿಸಿಕೊಳ್ಳುವ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತಿದ್ದೇವೆ’ ಎಂದರು.

ಯಡಿಯೂರಪ್ಪ ವಿರುದ್ಧ ದೂರು: ‘ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿಪಕ್ಷಗಳ ಶಾಸಕರಿಗೆ ಹಣದ ಆಮಿಷವೊಡ್ಡಿದ್ದಾರೆ’ ಎಂದು ಆರೋಪಿಸಿ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಆಶಿಕ್ ಗೌಡ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ.

ಅತೃಪ್ತರ ಅನರ್ಹತೆ: ದೂರು ಇಂದು

ನಾಲ್ವರು ಅತೃಪ್ತ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ಸಿದ್ದರಾಮಯ್ಯ ಅವರು ವಿಧಾನಸಭಾಧ್ಯಕ್ಷ ಕೆ.ಆರ್‌. ರಮೇಶ್‌ ಕುಮಾರ್‌ ಅವರಿಗೆ ಸೋಮವಾರ ಮನವಿ ಮಾಡುವ ಸಾಧ್ಯತೆ ಇದೆ.

ಪಕ್ಷದಲ್ಲಿ ಮುನಿಸಿಕೊಂಡು ದೂರ ಸರಿದಿರುವ ಶಾಸಕರಾದ ರಮೇಶ ಜಾರಕಿಹೊಳಿ, ಮಹೇಶ ಕುಮಠಳ್ಳಿ, ಬಿ. ನಾಗೇಂದ್ರ ಮತ್ತು ಉಮೇಶ ಜಾಧವ್‌ ಅವರು ನೋಟಿಸ್ ನೀಡಿದರೂ ಸಿಎಲ್‌ಪಿ ಸಭೆಗಳಿಗೆ ಹಾಜರಾಗಲಿಲ್ಲ. ಜ. 18ರಂದು ನಡೆದ ವಿಶೇಷ ಸಭೆಗೆ ಗೈರಾದ ಈ ನಾಲ್ವರಿಗೂ ಪಕ್ಷದಿಂದ ಷೋಕಾಸ್‌ ನೀಡಲಾಗಿತ್ತು. ‘ಪಕ್ಷ ತ್ಯಜಿಸುವುದಿಲ್ಲ’ ಎಂದು ಈ ನಾಲ್ವರೂ ಉತ್ತರ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದರು.

ಆದರೆ, ಖುದ್ದು ಹಾಜರಾಗಿ ಸ್ಪಷ್ಟೀಕರಣ ನೀಡುವಂತೆ ನೀಡಿದ ನೋಟಿಸ್‌ಗೆ ನಾಲ್ವರೂ ಸ್ಪಂದಿಸಿಲ್ಲ. ಫೆ. 8ರಂದು ನಡೆದ ಸಿಎಲ್‌ಪಿ ಸಭೆಗೂ ಗೈರಾಗಿದ್ದರು. ಈ ಸಭೆಯ ಒಮ್ಮತದ ತೀರ್ಮಾನದಂತೆ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.

* ಯಡಿಯೂರಪ್ಪ ಅವರ ಶಾಸಕತ್ವ ರದ್ದು ಮಾಡಬೇಕು ಎಂದು ಸಭಾಧ್ಯಕ್ಷರಿಗೆ ಒತ್ತಾಯಿಸುತ್ತೇವೆ. ಸಭಾಧ್ಯಕ್ಷರು ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳುತ್ತಾರೊ ಕೈಗೊಳ್ಳಲಿ

- ಜಿ. ಪರಮೇಶ್ವರ, ಉಪ ಮುಖ್ಯಮಂತ್ರಿ

* ಯಡಿಯೂರಪ್ಪ ಆತ್ಮಸಾಕ್ಷಿಗೆ ಅನುಗುಣವಾಗಿ ತಪ್ಪು ಒಪ್ಪಿಕೊಂಡಿದ್ದಾರೆ. ಕೆಮ್ಮು, ಸುಕ್ಕು, ಕಳ್ಳತನ ಮತ್ತಿತರ ವಿಚಾರಗಳನ್ನು ಮುಚ್ಚಿಡಲು ಆಗುವುದಿಲ್ಲ.

- ಡಿ.ಕೆ ಶಿವಕುಮಾರ್‌, ಜಲಸಂಪನ್ಮೂಲ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !