ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಸಿನೊಂದಿಗೆ ಯೋಗ ಮಾಡ್ರಿ

Last Updated 20 ಜನವರಿ 2019, 19:31 IST
ಅಕ್ಷರ ಗಾತ್ರ

ಸದೃಢ ಆರೋಗ್ಯಕ್ಕೆ ವ್ಯಾಯಾಮ, ಯೋಗ ಮಾಡುವುದು ಒಳ್ಳೆಯದು. ಪುಟ್ಟ ಪಾಪು ಜೊತೆ ಯೋಗ, ವ್ಯಾಯಾಮ ಮಾಡುವುದು ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಸಹಕಾರಿ. ಕೂಸುಗಳೊಂದಿಗೆ ವ್ಯಾಯಾಮ ಮಾಡುವುದಾದರೂ ಹೇಗೆ ಎಂದರೆ ಅಂತರ್ಜಾಲದಲ್ಲಿ ಸಾಕಷ್ಟು ವಿಡಿಯೊಗಳು ಲಭ್ಯ. ಇದು ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಊಟ: ಊಟಕ್ಕೆ ಒಂದು ಗಂಟೆ ಮೊದಲು ವ್ಯಾಯಾಮ ಮಾಡಿದರೆ ಸಾಕು, ಮಕ್ಕಳು ಹಟ ಮಾಡದೇ ಉಣ್ಣುತ್ತಾರೆ. ತುತ್ತಿಗೊಂದು ಕಥೆಯನ್ನೂ ಹೇಳಬೇಕಾಗಿಲ್ಲ. ಊಟ ಮುಗಿಸಿಯೇ ಕಥೆ ಆರಂಭಿಸಬಹುದು. ಮಕ್ಕಳಲ್ಲಿನ ಅಜೀರ್ಣವೂ ದೂರವಾಗುತ್ತದೆ.

ಹಾಲುಣ್ಣುವ ಮಗುವಿಗೆ ಹಗುರಾಗಿ ಕೈಕಾಲಾಡಿಸುವ ಒಂದು ಸಣ್ಣ ವ್ಯಾಯಾಮ ಬೇಕು. ಒಂದೇ ಉಸಿರಿಗೆ ಮಕ್ಕಳು ಹಾಲು ಕುಡಿಯುವಾಗ ಮಧ್ಯೆ ಸ್ವಲ್ಪ ಗಾಳಿಯನ್ನೂ ನುಂಗಿರುತ್ತವೆ. ಹಾಲು ಕುಡಿದ ತಕ್ಷಣ ಬೆನ್ನು ಸವರಿ ತೇಗು ಬರಿಸಿದರಷ್ಟೇ ಅವಕ್ಕೆ ಸಮಾಧಾನ. ಇಷ್ಟಕ್ಕೂ ಹಾಲುಣಿಸಿದ ಮೇಲಾಗಲೀ, ಉಂಡ ಕೂಡಲೇ ಆಗಲೀ ಯಾರೂ ವ್ಯಾಯಾಮ ಮಾಡಕೂಡದು.

ತಾಯಿಗೂ ಒಂದೇ ಕಡೆ ಕೂತು ಹಾಲುಣಿಸಿ ಪಕ್ಕೆ, ಕೈಗಳು ನೋವು ಬಂದಿರುತ್ತದೆ. ವ್ಯಾಯಾಮದಿಂದ ಅಮ್ಮ ಪಾಪು ಇಬ್ಬರಿಗೂ ಆರಾಮ.

ಸಂಗೀತ: ದೈಹಿಕ ಕಸರತ್ತು ಎಷ್ಟು ಮುಖ್ಯವೋ ಮನಸಿಗೂ ಕಸರತ್ತು ಅಷ್ಟೇ ಮುಖ್ಯ. ಮನಸನ್ನು ಹದಗೊಳಿಸುವ, ಒಂದಿಷ್ಟು ಚುಟುವಟಿಕೆಯನ್ನು ವಾರದೊಲ್ಲೊಮ್ಮೆಯಾದರೂ ಮಾಡಿದರೆ ಒಳ್ಳೆಯದು. ಸಂಗೀತ ಕೇಳುವಿಕೆ, ಸಂಗೀತಕ್ಕೆ ಕುಣಿಯುವುದು ಒಂದೊಳ್ಳೆ ವ್ಯಾಯಾಮ.

ನಿದ್ದೆ: ರಾತ್ರಿ ಗಂಟೆಗೊಂದು ಬಾರಿ ಎದ್ದು ಅಳುತ್ತಾ ತುಂಟತನ ಮಾಡಿ ಅಮ್ಮಂದಿರ ನಿದ್ದೆಗೆಡಿಸುವ ಕೂಸುಗಳಿಗೂ ಯೋಗ, ವ್ಯಾಯಾಮ ಮಾಡಿಸಿದರೆ ಹೆಚ್ಚು ಹೊತ್ತು ಮಲಗುತ್ತವೆ. ಕಡಿಮೆ ಸಮಯ ಮಲಗುವುದು, ಹೆಚ್ಚು ಅಳುವುದು, ನಿದ್ದೆ ಮಧ್ಯೆ ಎಚ್ಚರವಾಗುವುದು ಇದರಿಂದ ಕಡಿಮೆಯಾಗುತ್ತದೆ. ಅಮ್ಮಂದಿರೂ ಮಗುವಿನೊಂದಿಗೆ ನೆಮ್ಮದಿಯಿಂದ ನಿದ್ದೆ ಮಾಡಬಹುದು.

ಬೆಳವಣಿಗೆ: ಸ್ಟ್ರೆಚ್‌ ಮಾಡುವುದು, ಭಾರ ಎತ್ತಿ ವ್ಯಾಯಾಮ ಮಾಡುವುದು ದೇಹ ಬೆಳವಣಿಗೆಗೆ ಪೂರಕವಾದ ವ್ಯಾಯಾಮ, ಇದನ್ನು ಕೂಸುಗಳಿಂದಲ್ಲೂ ಮಾಡಿಸಬಹುದು. ಆದರೆ ಹೇಗೆಂದರೆ ಹಾಗೆ ಮಾಡುವುದು ಸಮಂಜಸವಲ್ಲ. ಸರಿಯಾದ ಆಕಾರದಲ್ಲಿ ನಿಂತು ಅಥವಾ ಕೂತು ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಮೂಳೆ ಹಾಗೂ ನರಗಳಿಗೆ ಸಮಸ್ಯೆಯಾಗುತ್ತದೆ. ತರಬೇತುದಾರರ ಸಹಕಾರ ಅತ್ಯಗತ್ಯ.

1. ಬಾಲಾಸನ:ಮಂಡಿ ಊರಿ ಕುಳಿತು, ಮಗುವನ್ನು ಮುಂದೆ ಕೂರಿಸಿಕೊಳ್ಳಿ, ಪೂರ್ಣ ಬಾಗಿ ಕೈಗಳನ್ನು ಸ್ಟ್ರೆಚ್‌ ಮಾಡಿ. ಒಮ್ಮೆ ಮಗುವನ್ನು ನಯವಾಗಿ ಬಗ್ಗಿಸಿ ಕೈಗಳನ್ನು ನೇರವಾಗಿಡಿ. ಬೆನ್ನು, ತೊಡೆ ನೋವಿಗೆ ಆರಾಮ ನೀಡುವ ವಿಧಾನ.

2. ಸೇತು ಬಂಧ ಸರ್ವಾಂಗಾಸನ:ಅಂಗಾತ ಮಲಗಿ ಹೊಟ್ಟೆ ಮೇಲೆ ಮಗುವನ್ನು ಕೂರಿಸಿಕೊಳ್ಳಿ. ನಂತರ ಪಾದ ಹಾಗೂ ಭುಜದ ಮೇಲೆ ಬಲ ಹಾಕಿ ಹೊಟ್ಟೆಯನ್ನು ಮೇಲ್ಮುಖಕ್ಕೆ ಎತ್ತಿ, ನಿಧಾನವಾಗಿ ಇಳಿಸಿ. ಈ ಆಸನ ಉತ್ತಮ ಉಸಿರಾಟಕ್ಕೆ ಸಹಕಾರಿ

3. ನವಾಸನ:ಅಂಗಾತ ಮಲಗಿ ತೊಡೆ ಮೇಲೆ ಮಗುವನ್ನು ಕೂರಿಸಿಕೊಳ್ಳಿ. ಎದೆಯನ್ನು ಮೇಲೆತ್ತಿ ಜೊತೆಗೆ ಕಾಲುಗಳನ್ನು ನೇರವಾಗಿ ಎತ್ತಿ. ಕೈಯಲ್ಲಿ ತೊಡೆಯನ್ನು ಹಿಡಿದು ಸ್ವಲ್ಪಸಮಯದ ನಂತರ ನಿಧಾನವಾಗಿ ಬಿಡಿ. ಹೊಟ್ಟೆ, ತೊಡೆ ಶಕ್ತಿಯುತವಾಗುತ್ತದೆ. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

4. ವ್ಯಾಘ್ರಾಸನ:ಮಂಡಿಯೂರಿ, ಕೈಗಳನ್ನು ನೆಲದಮೇಲಿಡಿ. ಮಗುವನ್ನು ಎದುರು ಅಂಬೆಗಾಲು ಹಾಕುವ ರೀತಿ ನಿಲ್ಲಿಸಿಕೊಳ್ಳಿ. ಮಗುವಿನ ಕಾಲುಗಳನ್ನು ಒಂದರ ನಂತರ ಒಂದನ್ನು ಮೇಲೆತ್ತಿ. ಈ ಆಸನ ದೇಹದ ಕೆಳಭಾಗ, ತೋಳಿಗೆ ಶಕ್ತಿ ತುಂಬುತ್ತದೆ. ನಂತರ ನೀವು ಮಾಡಿ.

5. ಶವಾಸನ:ಇದು ಎಲ್ಲಾ ಆಸನಗಳನ್ನು ಮಾಡಿದ ನಂತರ ಕೊನೆಯಲ್ಲಿ ಮಾಡಬೇಕಾದ ಆಸನ, ನಿರಾಳವಾಗಿ ಅಂಗಾತವಾಗಿ ಮಲಗಿ ಕೈ–ಕಾಲುಗಳನ್ನು ಸಡಿಲವಾಗಿ ಚಾಚಿಕೊಂಡು ಮಲಗಿ ಧೀರ್ಘವಾಗಿ ಉಸಿರಾಡಿ. ಮಗುವನ್ನು ಆರಾಮವಾಗಿ ಎದೆ ಮೇಲೆ ಮಲಗಿಸಿಕೊಳ್ಳಿ. ರಕ್ತದೊತ್ತಡವನ್ನು ನಿವಾರಿಸುತ್ತವೆ.

ಯೋಗದ ಅಗತ್ಯವಿದೆ
ವರ್ಷದೊಳಗಿನ ಮಕ್ಕಳಿಗೂ ಯೋಗ, ವ್ಯಾಯಾಮದ ಅವಶ್ಯಕತೆ ಇದೆ. ಆದರೆ ಸೂಕ್ತ ತರಬೇತಿಯೊಂದಿಗೆ ಮಾಡಿಸಬೇಕು. ಈ ಹಿಂದೆ ಮಗುವಿಗೆ ಎಣ್ಣೆಹಚ್ಚಿ ಕೈಕಾಲು ನೀವಿ ಎಳೆಬಿಸಿಲಿನಲ್ಲಿ ಸ್ವಲ್ಪ ಹೊತ್ತು ಮಲಗಿಸುತ್ತಿದ್ದರು. ತಾಯಿಯೂ ನೀರು ಸೇದುವುದು, ಮನೆಗೆಲಸ ಮಾಡುವುದರಲ್ಲೇ ದೇಹ ದಂಡಿಸುತ್ತಿದ್ದರು. ಈಗ ಕಚೇರಿ ಕೆಲಸ ನಿರತರಾದ ಮಹಿಳೆ ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಕುಳಿತಿರಬೇಕು ಇದು ಸೊಂಟ ನೋವಿಗೂ ಕಾರಣವಾಗುತ್ತದೆ. ಇಂದಿನ ಅಧುನಿಕ ವೃತ್ತಿಪರ ಮಹಿಳೆಯರಿಗೆ ಯೋಗ ವ್ಯಾಯಾಮದ ಅವಶ್ಯಕತೆ ಇದೆ.
– ಡಾ.ಜಿ.ಕಸ್ತೂರಿ, ಪ್ರಸೂತಿ ತಜ್ಞೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT