ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.29ರ ನಂತರವೂ ಟಿವಿಯಲ್ಲಿ ಚಾನೆಲ್‌ಗಳು ಬರಬೇಕೆ? ಮುಂಚಿತವಾಗಿಯೇ ಹಣ ಕಟ್ಟಿ!

Last Updated 20 ಡಿಸೆಂಬರ್ 2018, 12:00 IST
ಅಕ್ಷರ ಗಾತ್ರ

ಮನೆಯಲ್ಲಿರುವ ಟಿವಿಗೆ ಕೇಬಲ್‌ ಸಂಪರ್ಕ ಇದೆಯೋ ಅಥವಾ ಡಿಟಿಎಚ್‌ ಡಿಷ್‌ ಹಾಕಿಸಿಕೊಂಡಿದ್ದೀರೋ? ಯಾವುದೇ ಸಂಪರ್ಕ ಇದ್ದರೂ ಡಿಸೆಂಬರ್‌ 29ರಿಂದ ದೂರದರ್ಶನ, ಉಚಿತ ಚಾನೆಲ್‌ಗಳು ಸೇರಿದಂತೆ ಯಾವುದೇ ಚಾನೆಲ್‌ಗಳು ನಿಮ್ಮ ಟಿವಿಗಳಲ್ಲಿ ಕಾಣುವುದಿಲ್ಲ! ನೆಚ್ಚಿನ ಧಾರಾವಾಹಿ, ಸಿನಿಮಾ, ರಿಯಾಲಿಟಿ ಶೋಗಳನ್ನು ನೋಡಬೇಕಾದರೆ ಇಷ್ಟದ ಚಾನೆಲ್‌ಗೆ ನಿಗದಿಪಡಿಸಿರುಷ್ಟು ಶುಲ್ಕ ನೀಡಬೇಕು. ಅದೂ ತಿಂಗಳಿಗೂ ಮೊದಲೇ.

ಪ್ರಸ್ತುತ ಸ್ಥಳೀಯ ಕೇಬಲ್‌ ಆಪರೇಟರ್‌ಗಳು ಮಲ್ಟಿಪಲ್‌ ಸಿಸ್ಟಮ್‌ ಆಪರೇಟರ್‌(ಎಂ.ಎಸ್‌.ಒ)ಗಳ ಮೂಲಕ ತಿಂಗಳಿಗೆ ₹180–₹350ರವರೆಗೂ ಪಡೆದು ಬೇಕಿರುವ ಚಾನೆಲ್‌ಗಳನ್ನು ನೀಡುತ್ತಿದ್ದಾರೆ.ಡಿಟಿಎಚ್‌ನಲ್ಲಿ ಬೇಕಾದ ಪ್ಯಾಕೇಜ್‌ ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಇದೆ. ಆದರೆ, ಟ್ರಾಯ್‌ ಹೊರಡಿಸಿರುವ ನಿಯಮಗಳ ಅನುಸಾರ ಒಂದೊಂದು ಚಾನೆಲ್‌ಗೂ ಪ್ರತ್ಯೇಕ ದರವಿದೆ.ಟ್ರಾಯ್‌ ತನ್ನ ವೆಬ್‌ಸೈಟ್‌ನಲ್ಲಿ ಶುಲ್ಕ ನೀಡಬೇಕಾದ ಚಾನೆಲ್‌ಗಳ ಪಟ್ಟಿ ಪ್ರಕಟಿಸಿದ್ದು, 42 ಬ್ರಾಡ್‌ಕಾಸ್ಟಿಂಗ್‌ ಸಂಸ್ಥೆಗಳ 332 ಚಾನೆಲ್‌ಗಳಿವೆ. ಇವುಗಳಲ್ಲಿ ನಿಮಗೆ ಯಾವೆಲ್ಲ ಚಾನೆಲ್‌ಗಳು ಬೇಕು? ಈಗಲೇ ಪಟ್ಟಿ ಮಾಡಿಕೊಳ್ಳಿ. ಮೊಬೈಲ್‌ ಫೋನ್‌ಗಳಲ್ಲಿ ಮಾತನಾಡುವುಕ್ಕೂ ಮುಂಚೆ ಕರೆನ್ಸಿ ಪ್ಯಾಕ್‌ ರೀಚಾರ್ಜ್‌ ಮಾಡಿಸುವಂತೆ, ಬೇಕಾದ ಚಾನೆಲ್‌ಗಳಿಗೆ ಮುಂಚಿತವಾಗಿಯೇ ಹಣ ನೀಡಬೇಕು. ಹೀಗಾಗಿ, ಟಿವಿ ಚಾನೆಲ್‌ಗಳ ವೀಕ್ಷಣೆಯೂ ಇನ್ನು ಮುಂದೆ ಪ್ರೀಪೇಯ್ಡ್‌ ಆಗಲಿದೆ.

ಚಾನೆಲ್‌ಗಳ ಆಯ್ಕೆ ಹೇಗೆ?

ಪ್ರಾದೇಶಿಕವಾರು, ಭಾಷಾವಾರು ಹಲವು ರೀತಿಗಳಲ್ಲಿ ಚಾನಲ್‌ಗಳನ್ನು ಒಂದು ಗುಚ್ಚವಾಗಿ ನೀಡುವುದು ಪ್ರಾರಂಭವಾಗಿದೆ. ಎಂಎಸ್‌ಒಗಳು ಪಟ್ಟಿ ಸಿದ್ಧಪಡಿಸಿ ಸ್ಥಳೀಯ ಆಪರೇಟರ್‌ಗಳಿಗೆ ತಲುಪಿಸಲಿವೆ. ಡಿ.29ಕ್ಕೂ ಮುನ್ನವೇ ಅದನ್ನು ಗ್ರಾಹಕರಿಗೆ ನೀಡಿ, ಅಗತ್ಯವಿರುವ ಚಾನೆಲ್‌ಗಳಿಗೆ ಬೇಡಿಕೆ ಪಡೆದು ಪೂರೈಸಲಿವೆ. ಕೆಲವು ಎಂಎಸ್‌ಒಗಳು ಈಗಾಗಲೇ ವೆಬ್‌ಸೈಟ್‌ ಸಿದ್ಧಪಡಿಸುವ ಕಾರ್ಯದಲ್ಲಿದ್ದು, ಶೀಘ್ರದಲ್ಲಿಯೇ ಗ್ರಾಹಕರು ವೆಬ್‌ಸೈಟ್‌ಗಳ ಮೂಲಕವೇ ಚಾನೆಲ್‌ಗಳ ಆಯ್ಕೆ ಮಾಡಿ, ಹಣ ಪಾವತಿಸುವ ವ್ಯವಸ್ಥೆಯೂ ಬರಲಿದೆ ಎನ್ನುತ್ತಾರೆರಾಜ್ಯ ಡಿಜಿಟಲ್ ಕೇಬಲ್ ಆಪರೇಟರ್ಸ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಕೆ.ಮಲ್ಲರಾಜೇ ಅರಸು.

ಹೊಸ ದರ ವ್ಯವಸ್ಥೆ ಪ್ರಕಾರ ಗ್ರಾಹಕರು 100 ಚಾನೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ದೂರದರ್ಶನದ 26 ಚಾನೆಲ್‌ಗಳು ಕಡ್ಡಾಯವಾಗಿರುತ್ತದೆ. ತಿಂಗಳಿಗೆ ₹130 ಮತ್ತು ಶೇ 18 ಜಿಎಸ್‌ಟಿ ಒಳಗೊಂಡಿರುತ್ತದೆ. ಅಲ್ಲದೆ, ಗ್ರಾಹಕರಿಗೆ ಹೆಚ್ಚುವರಿಯಾಗಿ 25 ಉಚಿತವಾಗಿ ಪ್ರಸಾರ ಮಾಡುವ (ಫ್ರೀ ಟು ಏರ್‌) ಚಾನೆಲ್‌ಗಳನ್ನು ನೀಡಲಾಗುತ್ತದೆ. ಇದಕ್ಕೆ ₹20 ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ. ಈ ರೀತಿ ಒಟ್ಟು 125 ಚಾನೆಲ್‌ಗಳಿಗೆ ಗ್ರಾಹಕರು ₹178 ನೀಡಬೇಕಾಗುತ್ತದೆ. 25ಫ್ರೀ ಟು ಏರ್‌ ಚಾನೆಲ್‌ಗಳು ಬೇಡವಾದರೆ ₹154 ಕೊಡಬೇಕಾಗುತ್ತದೆ. ಉಳಿದಂತೆ ಗ್ರಾಹಕರು ಬೇಕಾದ ತಮ್ಮ ನೆಚ್ಚಿನ ಚಾನೆಲ್‌ಗಳನ್ನು ₹154ರ ಜತೆಗೆ ಹೆಚ್ಚುವರಿ ಶುಲ್ಕ ನೀಡಿ ಪ್ರಸಾರ ಸೌಲಭ್ಯ ಪಡೆಯಬಹುದು.

ಹಿಂದೆ ಗ್ರಾಹಕರಿಂದ ತಿಂಗಳ 10–15ನೇ ತಾರೀಕು ಶುಲ್ಕ ತೆಗೆದುಕೊಳ್ಳುತ್ತಿದ್ದೆವು. ಗ್ರಾಮಾಂತರ ಭಾಗಗಳಲ್ಲಿ ₹150–200 ಅಷ್ಟೇ ತೆಗೆದುಕೊಂಡು, ಬಹುತೇಕ ಎಲ್ಲ ಚಾನೆಲ್‌ಗಳನ್ನು ನೀಡುತ್ತಿದ್ದಾರೆ. ಆದರೆ, ಇನ್ನು ಮುಂದೆ ಮುಂಚಿತವಾಗಿಯೇ ಹಣ ಪಾವತಿ ಮಾಡಬೇಕಾದುದು ಗ್ರಾಹಕರಿಗೂ ಹೊರೆಯಾಗಲಿದೆ. ಟ್ರಾಯ್‌ ನಿಗದಿ ಪಡಿಸಿರುವ ದರದಿಂದ ಬ್ರಾಡ್‌ಕಾಸ್ಟ್‌ನವರು ಎಂ.ಎಸ್.ಒ ಅವರಿಗೆ ಕ್ಯಾರಿಯೇಜ್‌ ಫೀಸ್‌ ಕೊಡುತ್ತಾರೆ. ಎಂಎಸ್‌ಒಗೆ ಕ್ಯಾರಿಯೇಕ್‌ ಫೀಸ್‌ ಜೊತೆಗೆ ಸ್ಥಳೀಯ ಕೇಬಲ್‌ ಆಪರೇಟರ್‌ಗಳಿಂದಲೂ ಲಾಭ ವಿರುತ್ತದೆ ಎನ್ನುತ್ತಾರೆ ಸ್ಥಳೀಯ ಆಪರೇಟರ್‌ಗಳು.

ಚಾನೆಲ್‌ಗಳಿಗೆಟ್ರಾಯ್‌ ನಿಗದಿ ಪಡಿಸಿರುವ ಶುಲ್ಕ ಪಟ್ಟಿ

ನಿಮಗೆ ಎಷ್ಟು ಚಾನೆಲ್‌ ಬೇಕು?

ಪ್ರಸ್ತುತ ಯಾವುದೇ ಎಂಎಸ್ಒ ಕೇಬಲ್‌ ಸಂಪರ್ಕದಲ್ಲಿ 200–350 ಚಾನೆಲ್‌ಗಳನ್ನು ನೋಡಬಹುದು. ಆದರೆ, ಎಲ್ಲರೂ ಎಲ್ಲ ಚಾನೆಲ್‌ಗಳನ್ನು ನಿತ್ಯವೂ ನೋಡುವರೇ? ಪ್ರೈಮ್‌ ಟೈಮ್‌ ಅಂದರೆ, ಸಂಜೆ 6ರಿಂದ ರಾತ್ರಿ 10ರ ವರೆಗೂ ಮನರಂಜನಾ ವಾಹಿನಿಗಳ ಸೀರಿಯಲ್‌, ರಿಯಾಲಿಟಿ ಶೋಗಳ ಜತೆಗೆ ನ್ಯೂಸ್‌ ಚಾನೆಲ್‌ಗಳ ಕಾರ್ಯಕ್ರಮಗಳು, ಸುದ್ದಿ ಚರ್ಚೆಗಳು ಪೈಪೋಟಿಗೆ ಇಳಿದಿರುತ್ತವೆ. ಜಾಹೀರಾತು ಬಂದಾಗ ಮತ್ತೊಂದು ಚಾನೆಲ್‌ಗೆ ವಲಸೆ ಹೋಗುವ ವೀಕ್ಷಕ ಹೆಚ್ಚೆಂದರೆ ಆರರಿಂದ ಹತ್ತು ಚಾನೆಲ್‌ಗಳನ್ನು ನೋಡಬಹುದು. ಈ ಮಧ್ಯೆ ಕ್ರೀಡಾ ಪ್ರೇಮಿಗಳು ನಿಗದಿತ ಮೂರು ನಾಲ್ಕು ಚಾನೆಲ್‌ಗಳಿಗೆ ಸೀಮಿತಗೊಳ್ಳುತ್ತಾರೆ. ಮನೆಯಲ್ಲಿ ಮಕ್ಕಳಿದ್ದರೆ, ಒಂದೆರಡು ಕಾರ್ಟೂನ್‌ ಚಾನೆಲ್‌, ಸಂಗೀತ ಪ್ರಿಯರಿಗೆ ಮ್ಯೂಸಿಕ್ ಚಾನೆಲ್‌, ಧಾರ್ಮಿಕ ವಿಷಯ ಭಕ್ತಿ ಚಾನೆಲ್‌ಗಳು, ಸಿನಿಮಾ ಪ್ರಿಯರಿಗೆ ಮೂವಿ ಚಾನೆಲ್‌,...ಎಷ್ಟೇ ಪಟ್ಟಿ ಮಾಡಿದರು ಒಂದು ಇಡೀ ಕುಟುಂಬಕ್ಕೆ ಬೇಕಾದ ಅಷ್ಟೂ ಚಾನೆಲ್‌ಗಳ ಸಂಖ್ಯೆ 200 ದಾಟುವುದಿಲ್ಲ.

ಕೇಬಲ್‌ ಆಪರೇಟರ್‌ಗಳ ಪ್ರಕಾರ, ಈಗ ಪ್ರಸಾರಗೊಳ್ಳುತ್ತಿರುವ 300–400 ಚಾನೆಲ್‌ಗಳಿಗೆ ₹500 ರಿಂದ ₹1500 ರವರೆಗೂ ದರ ಏರಿಕೆ ಆಗಬಹುದು. ಇದರಿಂದಾಗಿ ಗ್ರಾಹಕರಿಂದ ಭಾರಿ ವಿರೋಧ ಎದುರಿಸಬೇಕಾಗುತ್ತದೆ ಎಂಬುದು ಸ್ಥಳೀಯ ಕೇಬಲ್‌ ಆಪರೇಟರ್‌ಗಳ ಅಳಲು.ಗ್ರಾಹಕ ಒಂದೆರಡು ತಿಂಗಳು ಕೇಬಲ್‌ ಮಾಸಿಕ ಶುಲ್ಕ ಕಟ್ಟದಿದ್ದರೂ ಆಪರೇಟರ್‌ಗಳು ಸುಧಾರಿಸಿಕೊಂಡು ಹೋಗುತ್ತಾರೆ. ’ಗ್ರಾಹಕರೊಂದಿಗೆ ಆಪರೇಟರ್‌ಗಳು ಉತ್ತಮ ಸ್ನೇಹ ಹೊಂದಿದ್ದು, ಕಷ್ಟದ ಕಾಲದಲ್ಲಿ ಹಣ ಕಟ್ಟದಿದ್ದರೂ ಸಂಪರ್ಕ ಮುಂದುವರಿಸುತ್ತಾರೆ. ಈಗ ದರ ನಿಗದಿಯಿಂದ ಎಲ್ಲವೂ ಪೂರ್ಣ ವ್ಯಾವಹಾರಿಕವಾಗಲಿದ್ದು, ಸಣ್ಣ ಗಳಿಕೆಯವರು ತಮ್ಮ ಇಷ್ಟದ ಚಾನೆಲ್‌ಗಳ ವೀಕ್ಷಣೆಗೆ ಹೆಚ್ಚಿನ ದರ ನೀಡಬೇಕಾಗುತ್ತದೆ’ ಎಂಬುದು ಕೇಬಲ್‌ ಆಪರೇಟರ್‌ಗಳ ವಾದ.

* ಗ್ರಾಹಕ ಎಷ್ಟೇ ಚಾನೆಲ್‌ ಆಯ್ಕೆ ಮಾಡಿದರು ಅಥವಾ ಕೇವಲ್‌ ಫ್ರೀ ಟು ಏರ್‌ ಚಾನೆಲ್‌ಗಳನ್ನಷ್ಟೇ ತೆಗೆದುಕೊಂಡರು ನಾವು ಒಂದೇ ರೀತಿಯ ಸೇವೆ ನೀಡಬೇಕು. ನಿರ್ವಹಣೆ ಸೇರಿದಂತೆ ಖರ್ಚು ಅಷ್ಟೇ ಇರುತ್ತದೆ, ಆದರೆ ಶುಲ್ಕ ಸಂಗ್ರಹದಲ್ಲಿ ಕಡಿಮೆಯಾದರೆ ಆದಾಯಕ್ಕೆ ಹೊಡೆತ ಬೀಳುತ್ತದೆ. ಗ್ರಾಹಕರಿಗೂ ಇದರಿಂದ ಗೊಂದಲ ಉಂಟಾಗಬಹುದು. ಇದೇ21ರಂದು ನಗರದ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಮುಖ್ಯಮಂತ್ರಿಗಳಿಗೆ ಹಾಗೂ ಟ್ರಾಯ್‌ ಪ್ರಾಧಿಕಾರಕ್ಕೆ ಹೊಸ ನಿಯಮದ ವಿರುದ್ಧ ನಮ್ಮ ಮನವಿ ಸಲ್ಲಿಸಲಿದ್ದೇವೆ.

–ಎಂ.ಕೆ.ಮಲ್ಲರಾಜೇ ಅರಸು, ರಾಜ್ಯ ಡಿಜಿಟಲ್ ಕೇಬಲ್ ಆಪರೇಟರ್ಸ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

* ಯಾವತ್ತಿಗೂ ನೋಡದ ಎಷ್ಟೋ ಚಾನೆಲ್‌ಗಳಿಗಿಂತ ನಮಗೆ ಬೇಕಾದಷ್ಟೇ ಚಾನೆಲ್‌ಗಳ ಆಯ್ಕೆ ಮಾಡಿಕೊಳ್ಳುವ ವಿಧಾನ ಉತ್ತಮವೇ. ಅಗತ್ಯ ಇರುವಷ್ಟೇ ಚಾನೆಲ್‌ ಪಡೆದರೆ ನೀಡುವ ಮಾಸಿನ ಶುಲ್ಕದಲ್ಲಿಯೂ ಕಡಿಮೆ ಆಗಬಹುದು.

– ಸತೀಶ್‌, ಗ್ರಾಹಕ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT