ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುದ್ಯೋಗಿಗಳಿಗೆ ನ್ಯಾಯ ದೊರಕಿಸಲು ಯುವಕ ಆತ್ಮಹತ್ಯೆ

Last Updated 4 ಜುಲೈ 2018, 11:38 IST
ಅಕ್ಷರ ಗಾತ್ರ

ಬಸವಾಪಟ್ಟಣ: ಬದುಕಿನ ಆಸರೆಗಾಗಿ ಒಂದು ನೌಕರಿ ಸಂಪಾದಿಸಿ, ತಾಯಿ, ಸೋದರರೊಂದಿಗೆ ಸಂತಸದಿಂದ ಬಾಳಬೇಕೆಂಬ ಸುಂದರ ಕನಸುಗಳನ್ನು ಕಾಣುತ್ತಿದ್ದ ಸಮೀಪದ ಹೊಸಗರದ ಯುವಕ ಬಿ.ಅನಿಲ್‌ (24) ಉನ್ನತ ಶಿಕ್ಷಣ ಮತ್ತು ನೌಕರಿ ಸಂಪಾದನೆಯಲ್ಲಿ ವಿಫಲನಾಗಿ ಮಂಗಳವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

‘ರಾಜ್ಯದಲ್ಲಿ ಶಿಕ್ಷಣ ಪಡೆದ ಲಕ್ಷಾಂತರ ಯುವಕರು ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ. ಅವರನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಡೆಗಣಿಸಿವೆ. ನನ್ನ ಸಾವಿನ ನಂತರವಾದರೂ ರಾಜ್ಯದಲ್ಲಿ ವಿದ್ಯಾವಂತರಿಗೆ ಉದ್ಯೋಗ ಕಲ್ಪಿಸಬೇಕು’ ಎಂದು ಮರಣ ಪತ್ರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬರೆದು ಜೀವತೊರೆದಿದ್ದಾನೆ.

‘ಕಡು ಬಡತನ ಅನುಭವಿಸುತ್ತಿದ್ದ ನನ್ನ ಸೋದರಿಯ ಪತಿ ಬಾಬುನಾಯ್ಕ ವಾಸಿಯಾಗದ ಕಾಯಿಲೆಯಿಂದ ಐದು ವರ್ಷಗಳ ಹಿಂದೆ ಮೃತ ಪಟ್ಟಿದ್ದರು. ಅಳಿಯಂದಿರ ಶಿಕ್ಷಣಕ್ಕೆ ನನ್ನ ಕೈಲಾದ ಸಹಾಯ ಮಾಡುತ್ತಿದ್ದೆ. ಬಿ.ಎ. ಪದವಿ ಪಡೆದಿದ್ದ ಅನಿಲ್‌ ಮುಂದೆ ಕೆಎಎಸ್‌ ಅಥವಾ ಐಎಎಸ್‌ ಮಾಡುವ ಮಹದಾಸೆ ಹೊಂದಿದ್ದ. ಇದಕ್ಕಾಗಿ ತರಬೇತಿ ಪಡೆಯಲು ಧಾರವಾಡ ಅಥವಾ ಹುಬ್ಬಳ್ಳಿಗೆ ಹೋಗಲು ತವಕಿಸಿದ್ದ. ಸ್ವಾಭಿಮಾನಿಯಾದ ಆತನಿಗೆ ಆರ್ಥಿಕ ಬಿಕ್ಕಟ್ಟು ಅವನ ಈ ಆಸೆಗೆ ತಣ್ಣೀರೆಚಿದೆ. ಯಾರಿಗೂ ಮುಂಚಿತವಾಗಿ ತಿಳಿಸದೆ ಕೆಟ್ಟ ನಿರ್ಧಾರ ಕೈಗೊಂಡಿರುವುದು ನಮ್ಮನ್ನು ದಿಗ್ಭ್ರಾಂತರನ್ನಾಗಿ ಮಾಡಿದೆ’ ಎಂದು ಆತನ ಸೋದರಮಾವ ಗಂಟ್ಯಾಪುದ ಮಾರುತಿನಾಯ್ಕ ನೊಂದು ನುಡಿದರು.

‘ನನ್ನ ತಂದೆಯ ಚಿಕಿತ್ಸೆಗೆ ಮಾಡಿದ್ದ ಸುಮಾರು ₹ 3 ಲಕ್ಷ ಸಾಲ ನಮ್ಮ ಮೇಲಿದೆ. ನನ್ನ ಅಣ್ಣ ಚಕ್ರವರ್ತಿ ರಾಥೋಡ್‌ ದಾವಣಗೆರೆಯಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದು ನೌಕರಿಯ ಪ್ರಯತ್ನದಲ್ಲಿದ್ದಾನೆ. ಅವನೂ ನಿರುದ್ಯೋಗಿ. ತಂದೆಯ ಕಾಲದಿಂದ ಎರಡು ಎಕರೆ ಬಗರ್‌ಹುಕುಂ ಜಮೀನನ್ನು ಸಾಗುವಳಿ ಮಾಡುತ್ತಿದ್ದೇವೆ. ಈವರೆಗೆ ಅದಕ್ಕೆ ಸಾಗುವಳಿ ಪತ್ರ ದೊರೆತಿಲ್ಲ. ಬ್ಯಾಂಕ್‌ ಮತ್ತು ಸಹಕಾರ ಸಂಘಗಳಲ್ಲಿ ಸಾಲ ಸಿಗುತ್ತಿಲ್ಲ. ಮೆಕ್ಕೆಜೋಳ ಬಿತ್ತಿದ್ದೇವೆ. ತಾಯಿ ಮತ್ತು ನಾನು ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದೇವೆ. ಅನಿಲ್‌ ಆದರೂ ಉನ್ನತ ಶಿಕ್ಷಣ ಪಡೆಯಲಿ ಎಂಬ ಆಸೆ ಇತ್ತು. ಅದು ಸಾಧ್ಯವಾಗಲಿಲ್ಲ’ ಎನ್ನುತ್ತಾರೆ ಮೃತನ ಸಹೋದರ ರಾಜಕುಮಾರ್‌.

‘ನನ್ನ ತಮ್ಮನಿಗೆ ಉನ್ನತ ವ್ಯಾಸಂಗಮಾಡಿ ಸರ್ಕಾರಿ ನೌಕರಿ ಮಾಡುವ ಹಂಬಲವಿತ್ತು. ಬಡತನ ಇದಕ್ಕೆ ಅಡ್ಡಿಯಾಯಿತು. ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಪಡೆಯಲು ನಮಗೆ ಸ್ವಂತ ಆಸ್ತಿ ಇಲ್ಲದೇ ನಿರಾಶೆ ಕಾದಿತ್ತು. ರಾಜಕೀಯ ಪಕ್ಷಗಳು ಚುನಾವಣೆಗೆ ಮುನ್ನ ಪ್ರಕಟಿಸುವ ಪ್ರಣಾಳಿಕೆಯಲ್ಲಿ ನಿರುದ್ಯೋಗ ನಿವಾರಿಸುವ ಭರವಸೆ ನೀಡಿ ನಂತರ ಮರೆಯುತ್ತವೆ. ಎಲ್ಲಾ ಸಮಸ್ಯೆಗಳಿಗೆ ಸಾವು ಪರಿಹಾರವಲ್ಲ. ಆದರೆ ನನ್ನ ತಮ್ಮನ ಸಾವಿನಿಂದ ರಾಜ್ಯದ ನಿರುದ್ಯೋಗಿಗಳಿಗೆ ನ್ಯಾಯ ದೊರೆತರೆ ಅವನ ಆತ್ಮಕ್ಕೆ ಶಾಂತಿ ಸಿಗಲಿದೆ’ ಮೃತನ ಹಿರಿಯ ಸಹೋದರ ಚಕ್ರವರ್ತಿ ರಾಥೋಡ್‌ ನೋವು ತೋಡಿಕೊಂಡರು.

ಅನಿಲ್‌ಗೆ ಮುಂದೆ ಉತ್ತಮ ಅವಕಾಶವಿತ್ತು. ಆದರೆ ಆತ ದುಡುಕಿನ ನಿರ್ಧಾರ ಕೈಗೊಂಡು ಜೀವ ಕಳೆದುಕೊಂಡ. ಯಾರ ಬಳಿಯೂ ಈ ಬಗ್ಗೆ ಚರ್ಚಿಸದೆ ಇಡೀ ಕುಟುಂಬವನ್ನು ದುಗುಡಕ್ಕೀಡುಮಾಡಿದ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಫಕೀರಪ್ಪ ಹೇಳಿದರು.

ಅವನ ತಾಯಿ ಗೀತಾಬಾಯಿ ಮಂಗಳವಾರದಿಂದ ಬಾಯಿಗೆ ನೀರು ಹಾಕದೇ ಮಗನನ್ನು ನೆನೆದು ಆಕ್ರಂದನ ಮಾಡುತ್ತಿದ್ದ ದೃಶ್ಯ ಕರುಳು ಕಿವಿಚುವಂತಿತ್ತು. ಅವರೊಂದಿಗೆ ಅವರ ಬಂಧು ಮಿತ್ರರು, ಗ್ರಾಮಸ್ಥರೂ ಕಣ್ಣೀರು ಹಾಕುತ್ತಿದ್ದರು. ‘ನಮ್ಮ ಗ್ರಾಮದ ಹೆಮ್ಮೆಯ ಯುವಕನ ಈ ಜೀವದಾನದಿಂದ ರಾಜ್ಯದ ನಿರುದ್ಯೋಗಿಗಳಿಗೆ ಸರ್ಕಾರ ಪರಿಹಾರ ಒದಗಿಸಿದರೆ ಅವನ ಮನದಿಚ್ಛೆ ಪೂರ್ಣಗೊಳ್ಳಲಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಮಂಜು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT