ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಮೊದಲ ಬಾರಿಗೆ ಮತ ಚಲಾಯಿಸಬೇಕಾದ ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಉತ್ಸಾಹ ತೋರುತ್ತಿಲ್ಲ.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಲ್ಲಿ ಈ ಅಂಶ ಕಂಡು ಬಂದಿದೆ. ರಾಜ್ಯದಲ್ಲಿ 2001 ಇಸವಿ ಬಳಿಕ ಜನಿಸಿದವರ ಸಂಖ್ಯೆ 15 ಲಕ್ಷಕ್ಕೂ ಅಧಿಕವಿದೆ. ಈವರೆಗೆ 7.12 ಲಕ್ಷ ಜನ ಮಾತ್ರ ತಮ್ಮ ಹೆಸರು ನೋಂದಾಯಿಸಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.
2001 ಜನವರಿ 1ರ ಬಳಿಕ ಜನಿಸಿರುವ 18 ವರ್ಷ ತುಂಬಿರುವ ಯುವಕ– ಯುವತಿಯರು ಕೂಡಲೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಆನ್ಲೈನ್ ಮೂಲಕವೂ ಹೆಸರು ನೋಂದಾಯಿಸಲು ಅವಕಾಶವಿದೆ. ಆದರೆ, ಆನ್ಲೈನ್ ಮೂಲಕ ಹೆಸರು ನೋಂದಾಯಿಸುತ್ತಿರುವವರ ಸಂಖ್ಯೆ ತೀರಾ ಕಡಿಮೆ ಸಂಖ್ಯೆ ಇದೆ ಎಂದು ಹೇಳಿದರು.
ವಿಶೇಷ ಪರಿಷ್ಕರಣೆ ಸಂದರ್ಭದಲ್ಲಿ 17.45 ಲಕ್ಷ ಅರ್ಜಿಗಳು ಬಂದಿದ್ದವು. ಇದರಲ್ಲಿ 7,21,653 ಹೆಸರುಗಳನ್ನು ಪಟ್ಟಿಗೆ ಸೇರಿಸಲಾಗಿದೆ. 7,52,901 ಹೆಸರುಗಳನ್ನು ಕೈ ಬಿಡಲಾಗಿದೆ(ಬೇರೆ ಊರಿಗೆ ಹೋದವರು, ಮೃತಪಟ್ಟವರು ಮತ್ತು ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಹೆಸರು ಹೊಂದಿದವರು), 2,25,306 ಹೆಸರುಗಳ ತಿದ್ದುಪಡಿ ಮಾಡಲಾಗಿದೆ ಎಂದು ಸಂಜೀವ್ ಕುಮಾರ್ ತಿಳಿಸಿದರು.
ವಲಸೆ ಹೋದವರ ಸಂಖ್ಯೆ 40 ಸಾವಿರ: ರಾಜ್ಯದ ವಿವಿಧ ಭಾಗಗಳಿಂದ 40 ಸಾವಿರ ಜನ ವಿವಿಧ ಕಾರಣಗಳಿಗೆ ವಲಸೆ ಹೋಗಿದ್ದಾರೆ. ಇವರ ಹೆಸರು ಮತಪಟ್ಟಿಯಲ್ಲಿ ಇದ್ದು, ಆದರೆ ಮತದಾರರ ಗುರುತಿನ ಚೀಟಿ (ಎಪಿಕ್ಕಾರ್ಡ್) ಪಡೆದುಕೊಂಡಿಲ್ಲ. ಇವರೆಲ್ಲ ಅರ್ಹ ಮತದಾರರೇ ಆಗಿದ್ದಾರೆ. ಇದಲ್ಲದೆ, 34,361 ಮತದಾರರು ಎಪಿಕ್ ಕಾರ್ಡ್ ಪಡೆದುಕೊಂಡಿಲ್ಲ. ಇವರು ತಕ್ಷಣವೇ ಪಡೆದುಕೊಳ್ಳಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.