ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ನರೇಂದ್ರ ಮೋದಿಯಿಂದ ಸಿಬಿಐ ಸಂಸ್ಥೆ ದುರ್ಬಳಕೆ: ಆರೋಪ

Last Updated 26 ಅಕ್ಟೋಬರ್ 2018, 19:00 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಅವರನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಗಂಗಾನಗರದ ಸಿಬಿಐ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ನೂರಾರು ಕಾರ್ಯಕರ್ತರು ಕಚೇರಿ ಆವರಣಕ್ಕೆ ನುಗ್ಗಲು ಯತ್ನಿಸಿದರು. ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಿದ್ದರಿಂದ ರಸ್ತೆಯಲ್ಲಿಯೇ ಪ್ರತಿಭಟನೆ ಮುಂದುವರಿಸಿದರು. ಪ್ರಧಾನಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ‘ಮೋದಿ ಭ್ರಷ್ಟ ಎಂಬುದು ಗೊತ್ತಾಗಿದೆ. ಫ್ರಾನ್ಸ್‌ನ ಡಸಾಲ್ಟ್‌ ಕಂಪನಿ ಜತೆಗೆ ರಫೇಲ್‌ ಯುದ್ಧ ವಿಮಾನ ಖರೀದಿಸಲು ಕೇಂದ್ರ ಸರ್ಕಾರ ಮಾಡಿಕೊಂಡ ಒಪ್ಪಂದದಲ್ಲಿ ದೊಡ್ಡ ಹಗರಣ ನಡೆದಿದೆ. ಈ ಸಂಬಂಧ ತನಿಖೆ ಮಾಡಲು ಹೊರಟಿದ್ದಕ್ಕೆ ರಾತ್ರೋರಾತ್ರಿ ಅಲೋಕ್ ವರ್ಮಾ ಅವರನ್ನು ‌‌ಕಾರ್ಯ ನಿರ್ವಹಿಸದಂತೆ ನೋಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ದೇಶದ ಚೌಕೀದಾರ್ ಈಗ ಕಳ್ಳ ಎಂಬುದು ದೇಶದ ಜನರಿಗೆ ತಿಳಿದಿದೆ. ಕೇಂದ್ರ ಸರ್ಕಾರ ಕೇವಲ ಬೂಟಾಟಿಕೆಯ ಸರ್ಕಾರ. ಅಲೋಕ್‌ ಅವರು ಕೇಂದ್ರ ಸರ್ಕಾರ ನಡೆಸಿದ ಭ್ರಷ್ಟಾಚಾರಗಳನ್ನು ಬಯಲಿಗೆಳೆಯಲು ಮುಂದಾಗಿದ್ದರು. ಇದರಿಂದ ತನ್ನ ಮುಖವಾಡ ಕಳಚಿ ಬೀಳಲಿದೆ ಎಂಬ ಭಯದಿಂದ ನರೇಂದ್ರ ಮೋದಿ ಈ ರೀತಿ ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆಯತ್ತ ಸುಳಿಯದ ಸಚಿವರು, ಶಾಸಕರು

ಪ್ರತಿಭಟನೆಯಲ್ಲಿ ಯಾವುದೇ ಸಚಿವರು, ಸಂಸದರು, ಶಾಸಕರು ಭಾಗವಹಿಸಲಿಲ್ಲ. ಇದು ಕಾಂಗ್ರೆಸ್ ಕಾರ್ಯಕರ್ತರ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಪಕ್ಷದ ಉಸ್ತುವಾರಿ ಸೂಚಿಸಿದ್ದರು. ಆದರೆ, ಆ ಮಾತಿಗೆ ಯಾರೂ ಕಿವಿಗೊಟ್ಟಿಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮುಖಂಡರು ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್, ಎ.ಬಿ.ಮಾಲಕರೆಡ್ಡಿ ಮಾತ್ರ ಭಾಗಿಯಾಗಿದ್ದರು. ಕೇವಲ ಹತ್ತು ನಿಮಿಷ ಭಾಷಣ ಮಾಡಿ ಅಲ್ಲಿಂದ‌ ದೆಹಲಿಗೆ ತೆರಳಬೇಕೆಂದು ಅವರೂ ನಿರ್ಗಮಿಸಿದರು.

ನ್ಯಾಯಾಲಯದ ಮೊರೆ: ವೇಣುಗೋಪಾಲ್

‘ರಾತ್ರೋರಾತ್ರಿಯೇ ಸಿಬಿಐ ಅಧಿಕಾರಿಗಳನ್ನು ನಿಷ್ಕ್ರಿಯಗೊಳಿಸಿರುವುದು ಇತಿಹಾಸದಲ್ಲೇ ಮೊದಲು. ಕೇಂದ್ರ ಸರ್ಕಾರದ ಈ ನೀತಿ ಸರಿಯಲ್ಲ.‌ ಈ ನಿರ್ಧಾರ ಕೈಗೊಂಡ ಕೇಂದ್ರದ ವಿರುದ್ಧ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೊರೆ ಹೋಗಲಿದೆ. ನ್ಯಾಯ ಸಿಗುವವರೆಗೂ ಕಾನೂನು ಹೋರಾಟ ನಡೆಸುತ್ತೇವೆ. ಸಿಬಿಐ ನಿರ್ದೇಶಕ ಮತ್ತು ವಿಶೇಷ ನಿರ್ದೇಶಕರನ್ನು ಮತ್ತೆ ನಿಯುಕ್ತಿಗೊಳಿಸಿಬೇಕು’ ಎಂದು ವೇಣುಗೋಪಾಲ್ ಆಗ್ರಹಿಸಿದರು.
**
ಸಂವಿಧಾನದ ಶ್ರೇಷ್ಠ ಅಂಗ ಸಿಬಿಐ ಸಂಸ್ಥೆ. ಕೇಂದ್ರ ಸರ್ಕಾರ ಅದಕ್ಕೆ ಧಕ್ಕೆ ತರುವಂತೆ ವರ್ತಿಸುತ್ತಿದೆ
–ಕೆ.ಸಿ. ವೇಣುಗೋಪಾಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT