ಭಾನುವಾರ, ಆಗಸ್ಟ್ 18, 2019
26 °C
ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆ

ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಮಗನ ಶವ ಹೊರತೆಗೆದ ತಂದೆ

Published:
Updated:

ಬೈಲಹೊಂಗಲ: ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಮಗನ ಶವವನ್ನು ತಂದೆಯೇ ಕೆಸರಿನಿಂದ ಹೊರತೆಗೆದು, ಅಪ್ಪಿಕೊಂಡು ರೋದಿಸಿದ ಘಟನೆ ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಹಳ್ಳದ ಬಳಿಯ ಜಮೀನಿನಲ್ಲಿ ಸೋಮವಾರ ನಡೆದಿದೆ.

ಸಂಗಮೇಶ ಬಸಪ್ಪ ಹುಂಬಿ (22) ಮೃತರು.

ಗ್ರಾಮ ಸಮೀಪದ ಸಂಗೊಳ್ಳಿ–ಜಿಡ್ಡಿ ಹಳ್ಳದ ಬಳಿಯ ತಮ್ಮ ಹೊಲಕ್ಕೆ ಮೇವು ತರಲು ಶನಿವಾರ ಹೋಗಿದ್ದರು. ಸಂಜೆಯಾದರೂ ವಾಪಸಾಗಿರಲಿಲ್ಲ. ನಾಪತ್ತೆಯಾದ ಬಗ್ಗೆ ಪೋಷಕರು ದೊಡವಾಡ ಠಾಣೆಗೆ ದೂರು ನೀಡಿದ್ದರು. ಸೋಮವಾರ ಬೆಳಿಗ್ಗೆ ಯುವಕನ ಚಿಕ್ಕಪ್ಪ ಹಳ್ಳದಲ್ಲಿ ಗಿಡದಲ್ಲಿ ಶವವೊಂದು ಸಿಕ್ಕಿ ಹಾಕಿಕೊಂಡಿರುವುದನ್ನು ಗಮನಿಸಿ, ಮನೆಯವರಿಗೆ ಸುದ್ದಿ ತಿಳಿಸಿದ್ದಾರೆ. ದೌಡಾಯಿಸಿದ ತಂದೆ ಬಸಪ್ಪ ಅಳುತ್ತಲೇ ಶವವತ್ತು ಎತ್ತುಕೊಂಡು ಬಂದ ದೃಶ್ಯ, ಅಲ್ಲಿದ್ದವರ ಕಣ್ಣಾಲಿಗಳು ತುಂಬುವಂತೆ ಮಾಡಿದವು. ತಾಯಿ ಹಾಗೂ ಪೋಷಕರ ರೋದನೆ ಮುಗಿಲು ಮುಟ್ಟಿತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದೆ.

ತಹಶೀಲ್ದಾರ್ ಡಾ.ದೊಡ್ಡಪ್ಪ ಹೂಗಾರ, ಡಿವೈಎಸ್ಪಿ ಕರುಣಾಕರ ಶೆಟ್ಟಿ, ದೊಡವಾಡ ಪಿಎಸ್‍ಐ ಅನಿಲ ಅಮ್ಮಿನಭಾವಿ ಸ್ಥಳಕ್ಕೆ ಭೇಟಿ ನೀಡಿದ್ದರು. ಶಾಸಕ ಮಹಾಂತೇಶ ಕೌಜಲಗಿ ಕುಟುಂಬದವರಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ತಿಳಿಸಿದರು.

Post Comments (+)