ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಕ್ಯಾಂಟೀನ್ ಬಂದ್‌

ಆಹಾರಕ್ಕೆ ನೂಕುನುಗ್ಗಲು: ಸೋಂಕು ಹರಡುವ ಆತಂಕ
Last Updated 24 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಬಡಬಗ್ಗರಿಗೆ ಉಚಿತವಾಗಿ ಆಹಾರ ವಿತರಿಸುವುದನ್ನು ಬಿಬಿಎಂಪಿ ಒಂದೇ ದಿನದಲ್ಲಿ ಸ್ಥಗಿತಗೊಳಿಸಿದೆ. ಉಪಾಹಾರ ಸ್ವೀಕರಿಸಲು ನೂಕುನುಗ್ಗಲು ಉಂಟಾಗಿ, ಅದು ಸೋಂಕು ಹರಡಲು ಕಾರಣವಾಗುತ್ತದೆ ಎಂಬ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕ್ಯಾಂಟೀನ್‌ಗಳನ್ನು ಮುಚ್ಚುವಂತೆ ಸೂಚನೆ ನೀಡಿದ್ದರು.

ಲಾಕ್‌ಡೌನ್‌ ವೇಳೆ ಆಹಾರ ಸಿಗದವರಿಗೆ ನೆರವಾಗುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ ಆಹಾರ ಪೂರೈಸಲು ಬಿಬಿಎಂಪಿ ನಿರ್ಧರಿಸಿತ್ತು. ಮಂಗಳವಾರ ಬೆಳಿಗ್ಗೆ ನಗರದ ಬಹುತೇಕ ಇಂದಿರಾ ಕ್ಯಾಂಟೀನ್‌ಗಳ ಬಳಿ ಜನ ಸಾಲುಗಟ್ಟಿ ನಿಂತಿದ್ದರು. ಪರಸ್ಪರ 1 ಮೀ ಅಂತರ ಕಾಯ್ದುಕೊಳ್ಳಬೇಕು ಎಂಬ ಸೂಚನೆಯನ್ನು ಜನ ಕಡೆಗಣಿಸಿದ್ದರು. ಕೆಲವೆಡೆ ಆಹಾರ ಪಡೆಯಲು ನೂಕುನುಗ್ಗಲು ಕೂಡಾ ಉಂಟಾಗಿತ್ತು.

‘ಜನರು ನಮ್ಮ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಕ್ಯಾಂಟೀನ್‌ಗಳ ಬಳಿ ಜನಸಂದಣಿ ಸೇರಲು ಮತ್ತೆ ಅವಕಾಶ ಕಲ್ಪಿಸಿದರೆ ಕೊರೊನಾ ಸೋಂಕು ಹಬ್ಬದಂತೆ ತಡೆಯುವ ನಮ್ಮ ಪ್ರಯತ್ನಗಳು ಸಂಪೂರ್ಣ ವಿಫಲವಾಗುತ್ತವೆ. ಹಾಗಾಗಿ ಬುಧವಾರದಿಂದ ಇಂದಿರಾ ಕ್ಯಾಂಟೀನ್‌ಗಳನ್ನು ಅನಿರ್ದಿಷ್ಟಾವಧಿವರೆಗೆ ಮುಚ್ಚಲು ಆದೇಶ ಮಾಡಿದ್ದೇನೆ’ ಎಂದು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಮಾನ್ಯವಾಗಿ ಬೆಳಗಿನ ಅವಧಿಯಲ್ಲಿ 7ರಿಂದ ಬೆಳಿಗ್ಗೆ 9 ಗಂಟೆವರೆಗೆ ಇಂದಿರಾ ಕ್ಯಾಂಟೀನ್ ತೆರೆದಿರುತ್ತದೆ. ಸೋಮವಾರ ಬೆಳಿಗ್ಗೆ ಬಿಸಿಬೇಳೆ ಬಾತ್ ಹಾಗೂ ಇಡ್ಲಿಯನ್ನು ಉಚಿತವಾಗಿ ವಿತರಿಸಲಾಯಿತು. ಜನರು ಹಣ ಟೋಕನ್ ಪಡೆದು ಉಪಾಹಾರ ಸೇವಿಸಿದರು. ಬಹುತೇಕ ಕ್ಯಾಂಟೀನ್‌ಗಳಲ್ಲಿ ಬೆಳಿಗ್ಗೆ ಉಪಾಹಾರ 9 ಗಂಟೆಗೆ ಮುನ್ನವೇ ಖಾಲಿ ಆಯಿತು. ತಡವಾಗಿ ಬಂದವರು ಖಾಲಿ ಹೊಟ್ಟೆಯಲ್ಲಿ ಹಿಂತಿರುಗಬೇಕಾಯಿತು.

'ನಮ್ಮ ಕ್ಯಾಂಟೀನ್ ನಲ್ಲಿ ಬೆಳಿಗ್ಗೆ ಹೊತ್ತು ಸಾಮಾನ್ಯವಾಗಿ 150ರಿಂದ 200 ಮಂದಿ ಉಪಾಹಾರ ಖರೀದಿಸುತ್ತಾರೆ. ಆದರೆ ಇಂದು 275ಕ್ಕೂ ಹೆಚ್ಚು ಮಂದಿ ಉಪಾಹಾರ ಸೇವಿಸಿದ್ದಾರೆ. ಕ್ಯಾಂಟೀನ್ ಗೆ ಪೂರೈಕೆ ಆಗಿದ್ದ ಇಡ್ಲಿ ಮತ್ತು ಬಿಸಿಬೇಳೆಬಾತ್ ಬೆಳಿಗ್ಗೆ 8.15ಕ್ಕೆ ಖಾಲಿ ಆಗಿದೆ'ಎಂದು ರಾಜಾಜಿನಗರದ ಮಹಾಕವಿ ಕುವೆಂಪು ಮೆಟ್ರೊ ನಿಲ್ದಾಣದ ಬಳಿಯ ಇಂದಿರಾ ಕ್ಯಾಂಟೀನ್ ಸಿಬ್ಬಂದಿಯೊಬ್ಬರು 'ಪ್ರಜಾವಾಣಿ’ಗೆ ತಿಳಿಸಿದರು.

ಇವತ್ತು ಉಚಿತವಾಗಿ ಆಹಾರ ನೀಡಿದ್ದರಿಂದ ಹಾಗೂ ಬೇರೆ ಕಡೆ ಹೋಟೆಲ್‌ಗಳು ಮುಚ್ಚಿದ್ದರಿಂದ ಜನ ಹೆಚ್ಚಿನ ಸಂಖ್ಯೆಯಲ್ಲಿ ಇಂದಿರಾ ಕ್ಯಾಂಟೀನ್‌ಗೆ ಬಂದಿದ್ದಾರೆ' ಎಂದು ಅವರು ತಿಳಿಸಿದರು.'ನಾನು ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ನಿತ್ಯವೂ ಹೋಟೆಲ್‌ನಲ್ಲಿ ಊಟ ಮಾಡುತ್ತೇನೆ. ಕರ್ಫ್ಯೂ ಇದ್ದರೂ ಇಂದಿರಾ ಕ್ಯಾಂಟೀನ್ ತೆರೆದಿರುತ್ತದೆ ಎಂದು ಹೇಳಿದ್ದರು. ಇಲ್ಲಿ ಬಂದು ನೋಡಿದರೆ ಆಗಲೇ ತಿಂಡಿ ಖಾಲಿ. ಇನ್ನೆಲ್ಲಾದರೂ ಹೋಟೆಲ್ ತೆರೆದಿದೆಯೇ ನೋಡಬೇಕು' ಎಂದು ಸುಬ್ರಹ್ಮಣ್ಯನಗರದ ರಾಘವೇಂದ್ರ ತಿಳಿಸಿದರು.

ಮಧ್ಯಾಹ್ನ ಕೆಲವು ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಲಾಯಿತು. ರಾತ್ರಿ ಊಟ ಪೂರೈಕೆಯನ್ನು ಸ್ಥಗಿತಗೊಳಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT