ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಲಿಂಗಾಯತ ಮತ ಸೆಳೆಯಲು ಯತ್ನ; ರಾಜಕೀಯ ಮೇಲಾಟ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌–ಬಿಜೆಪಿ ಆರೋಪ, ಪತ್ಯಾರೋಪ
Last Updated 30 ಏಪ್ರಿಲ್ 2019, 16:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ, ಲಿಂಗಾಯತ ಸಮಾಜದ ಹೆಸರಿನಲ್ಲಿ ಮತಯಾಚಿಸುತ್ತಿರುವುದು ಕ್ಷೇತ್ರದಲ್ಲಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ನವರು ಲಿಂಗಾಯತ ಮತ ಬುಟ್ಟಿಗೆ ಕೈಹಾಕಿರುವುದು, ಇದನ್ನೇ ಬಹುವಾಗಿ ನೆಚ್ಚಿಕೊಂಡಿರುವ ಬಿಜೆಪಿಯನ್ನು ತಬ್ಬಿಬ್ಬುಗೊಳಿಸಿದೆ. ಈ ಸಂಬಂಧ ಆರೋಪ, ಪ್ರತ್ಯಾರೋಪಗಳು ಚುನಾವಣಾ ಕಣದಲ್ಲಿ ತಾರಕಕ್ಕೇರಿವೆ.

‘ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಜಿಲ್ಲೆಯಲ್ಲಿ ಲಿಂಗಾಯತ ಸಮಾಜದ ಬೆಳವಣಿಗೆಗೆ ಕಂಠಕವಾಗಿದ್ದು, ಅವರ ವಿರುದ್ಧ ಸಮಾಜ ಒಂದಾಗಬೇಕು’ ಎಂದು ವಿನಯ ಕುಲಕರ್ಣಿ ಹೇಳಿಕೆ ನೀಡುವ ಮೂಲಕ ಮತ ಧ್ರುವೀಕರಣಕ್ಕೆ ಮುಂದಾಗಿರುವುದು ಬಿಜೆಪಿಯಲ್ಲಿರುವ ಲಿಂಗಾಯತ ಶಾಸಕರು, ಮುಖಂಡರನ್ನು ಕೆರಳಿಸಿದೆ.

‘ಲಿಂಗಾಯತ ಸಮಾಜವನ್ನು ಒಡೆಯಲು ಯತ್ನಿಸಿದ್ದ ಕುಲಕರ್ಣಿ ರಾಜಕೀಯ ಲಾಭಕ್ಕಾಗಿ ಇದೀಗ ಸಮಾಜದ ಹೆಸರಲ್ಲಿ ಮತಯಾಚಿಸುತ್ತಿರುವುದು ಖಂಡನೀಯ’ ಎಂದು ಬಿಜೆಪಿ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ಶಂಕರ ಪಾಟೀಲ ಮುನೇನಕೊಪ್ಪ, ಪ್ರದೀಪ ಶೆಟ್ಟರ್‌, ಮಾಜಿ ಶಾಸಕರಾದ ಎಸ್‌.ಐ.ಚಿಕ್ಕನಗೌಡ್ರ, ಮೋಹನ ಲಿಂಬಿಕಾಯಿ, ಮಾಜಿ ಸಂಸದ ಮಂಜುನಾಥ ಕನ್ನೂರ ಸೇರಿದಂತೆ ಪಕ್ಷದ ಪ್ರಮುಖರು ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

‘ಬಿಜೆಪಿ ಮೊದಲಿನಿಂದಲೂ ಲಿಂಗಾಯತರಿಗೆ ರಾಜಕೀಯ ಅವಕಾಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿ ಸಮಾಜವನ್ನು ಬೆಳೆಸಿದೆ. ಆದರೆ, ಕಾಂಗ್ರೆಸ್‌ ಸಮಾಜದ ಮುಖಂಡರನ್ನು ತುಳಿಯುತ್ತಾ ಬಂದಿದೆ. ಸಮಾಜದ ಮತದಾರರು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರನ್ನು ಬೆಂಬಲಿಸಬೇಕು’ ಎಂದು ಅವರು ಮನವಿ ಮಾಡಿದರು.

ಮಠಾಧೀಶರ ಬೆಂಬಲ

ಜಿಲ್ಲೆಯ ಕೆಲವು ಮಠಾಧೀಶರು ಶನಿವಾರ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್‌ ಅಭ್ಯರ್ಥಿಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ.

‘ಜಿಲ್ಲೆಯ 15 ಅದ್ವೈತ ಮಠಾಧೀಶರು ಚರ್ಚಿಸಿ, ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವ ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ಹುಬ್ಬಳ್ಳಿ ರಾಜವಿದ್ಯಾಶ್ರಮದ ಷಡಕ್ಷರಿ ಸ್ವಾಮೀಜಿ, ಕಲಘಟಗಿ ಸಿದ್ಧಾರೂಢ ಮಠದ ಶಿವಲಿಂಗ ಸ್ವಾಮೀಜಿ, ಶ್ರೀನಗರದ ಶರೀಫ ಶಿವಯೋಗಿ ಶಾಸ್ತ್ರಿ, ತಾರಿಹಾಳ ಕಲ್ಮೇಶ್ವರ ಮಠದ ಕಲ್ಮೇಶ್ವರ ಸ್ವಾಮೀಜಿ, ಬಸವೇಶ್ವರ ಮಠದ ಸಿದ್ಧಾರ್ಥ ಸ್ವಾಮೀಜಿ, ನೇಕಾರನಗದ ರುದ್ರಯ್ಯ ಸ್ವಾಮೀಜಿ ಹೇಳಿದರು.

ಹೊರಟ್ಟಿ–ಸ್ವಾಮೀಜಿ ಭೇಟಿ

ಇಲ್ಲಿನ ಮೂರುಸಾವಿರ ಮಠದೊಂದಿಗೆ ಅಂತರ ಕಾಯ್ದುಕೊಂಡಿದ್ದ ಜೆಡಿಎಸ್‌ನ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಶನಿವಾರ ದಿಢೀರನೇ ಮಠಕ್ಕೆ ಭೇಟಿ ನೀಡಿ, ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಿದರು. ಚುನಾವಣೆ ಹೊಸ್ತಿಲಿನಲ್ಲಿ ಅವರ ಈ ನಡೆ ತೀವ್ರ ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT