ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಳ: ಮಿಯಾರ್‌ನಲ್ಲೇ ದಾಖಲೆಯಾಗಿತ್ತಾ?

ವೇಗದ ಓಟದ ದಾಖಲೆ ಕುರಿತು ಹೆಚ್ಚುತ್ತಿರುವ ಚರ್ಚೆಗಳು
Last Updated 19 ಫೆಬ್ರುವರಿ 2020, 1:57 IST
ಅಕ್ಷರ ಗಾತ್ರ

ಮಂಗಳೂರು: ಕಂಬಳದ ಅತಿವೇಗದ ಓಟದ ದಾಖಲೆಯು 2013ರ ಜನವರಿಯಲ್ಲಿ ಕಾರ್ಕಳದ ಮಿಯಾರ್‌ನಲ್ಲಿ ನಡೆದಿದ್ದ ಲವ–ಕುಶ ಕಂಬಳದಲ್ಲೇ ಸೃಷ್ಟಿಯಾಗಿತ್ತು ಎಂಬ ಮಾತುಗಳು ಕೇಳಿಬಂದಿವೆ.

ಮೂಡುಬಿದಿರೆ ಸಮೀಪದ ಅಶ್ವತ್ಥಪುರದ ಶ್ರೀನಿವಾಸ್‌ ಗೌಡ 142.50 ಮೀಟರ್ ಕರೆ (ಕಂಬಳ ಕೋಣಗಳ ಟ್ರ್ಯಾಕ್)ಯನ್ನು 13.46 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದು, ಕಂಬಳದ ಅತಿವೇಗದ ಓಟ ಎಂದೇ ಪರಿಗಣಿಸಲಾಗಿದೆ. ಆ ಬಳಿಕ ‘ಕಂಬಳದ ವೇಗದ ಓಟ’ದ ಕುರಿತು ಚರ್ಚೆಗೆಳು ಮುನ್ನಲೆಗೆ ಬಂದಿವೆ. ಆದರೆ, 2013 ಜನವರಿಯಲ್ಲಿ ಅದಕ್ಕಿಂತಲೂ ಕಡಿಮೆ ವೇಗದಲ್ಲಿ ಎರಡೂ ಕರೆಗಳಲ್ಲಿ (ಟ್ರ್ಯಾಕ್‌) ಕೋಣಗಳು ಗುರಿ ತಲುಪಿವೆ ಎಂಬುದು ಈಗ ಚರ್ಚೆಯ ವಸ್ತುವಾಗಿದೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಪ್ರಮುಖರೊಬ್ಬರು, ‘ಕಾರ್ಕಳದ ಮಿಯಾರ್‌ನಲ್ಲಿ 2013ರ ಜನವರಿಯಲ್ಲಿ ನಡೆದ ಲವಕುಶ ಕಂಬಳದಲ್ಲಿ ವರ್ಕಾಡಿಗೋಳಿ ಹಕ್ಕೇರಿಯ ಸುರೇಶ ಶೆಟ್ಟಿ ಮತ್ತು ಕೊಳಕೆ ಇರ್ವತ್ತೂರು ಆನಂದ ಅವರು ಪ್ರತ್ಯೇಕ ಕರೆಗಳಲ್ಲಿ ಓಡಿಸಿದ ಕೋಣಗಳು ಜೊತೆಯಾಗಿಯೇ ಗುರಿ ಮುಟ್ಟಿದ್ದು, ಸಮಬಲ ಸಾಧಿಸಿದ್ದವು. ಒಟ್ಟು 146 ಮೀಟರ್ ಉದ್ದದ ಕರೆಯನ್ನು ಅವರು ಕೇವಲ 13.60 ಸೆಕೆಂಡ್‌ಗಳಲ್ಲಿ ತಲುಪಿದ್ದರು’ ಎಂದು ವಿವರ ನೀಡಿದರು.

ಮೂಡುಬಿದಿರೆ ಸಮೀಪದ ಅಶ್ವತ್ಥಪುರದ ಶ್ರೀನಿವಾಸ್‌ ಗೌಡ ಐಕಳದಲ್ಲಿ ಫೆಬ್ರುವರಿ 1ರಂದು ನಡೆದ ಕಂಬಳದಲ್ಲಿ 142.50 ಮೀಟರ್ ಕರೆ (ಕಂಬಳ ಕೋಣಗಳ ಟ್ರ್ಯಾಕ್)ಯಲ್ಲಿ 13.46 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು. ಇದು ನೇಗಿಲು ಹಿರಿಯ ವಿಭಾಗವಾಗಿತ್ತು. ಆದರೆ, ಅವರು ನೇಗಿಲು ಕಿರಿಯ ವಿಭಾಗವನ್ನು 13.61 ಸೆಕೆಂಡ್‌ಗಳಲ್ಲಿ ತಲುಪಿದ್ದು, ಇದೇ ಅಧಿಕೃತ ದಾಖಲೆ ಎಂದು ಬಿಂಬಿತವಾಗಿತ್ತು. ಅವರ ನೇಗಿಲು ಹಿರಿಯ ವಿಭಾಗದ ದಾಖಲೆಯನ್ನು ಪರಿಗಣನೆಗೆ ತೆಗೆದುಕೊಂಡರೂ, ಕಾರ್ಕಳದ ಮಿಯಾರ್‌ನಲ್ಲಿ ಸುರೇಶ್ ಶೆಟ್ಟಿ ಮತ್ತು ಆನಂದ ಅವರು ತಲುಪಿದ ಗುರಿಯೇ ಅತಿವೇಗದ ಓಟ ಎನ್ನಲಾಗಿದೆ.

ವೇಣೂರಿನಲ್ಲಿ ನಡೆದ ಕಂಬಳದಲ್ಲಿ ಬಜಗೋಳಿ ಜೋಗಿಬೆಟ್ಟು ನಿಶಾಂತ್‌ ಶೆಟ್ಟಿ ಅವರು 143 ಮೀಟರ್ ಕರೆಯ ಗುರಿಯನ್ನು 13.61 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದರು. ಇದನ್ನು ದಾಖಲೆ ಎಂದೂ ಕೆಲವೆಡೆ ಬಿಂಬಿಸಲಾಗಿತ್ತು. ಹೀಗಾಗಿ, ಶ್ರೀನಿವಾಸ ಗೌಡ ಹಾಗೂ ನಿಶಾಂತ್ ಶೆಟ್ಟಿ ಅವರಿಗಿಂತಲೂ ಹಿಂದೆಯೇ ಕಂಬಳದಲ್ಲಿ ‘ವೇಗದ ಓಟ’ದ ದಾಖಲೆಯಾಗಿತ್ತು ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಕಂಬಳ ಸಮಿತಿಯೇ ವಿವರಗಳನ್ನು ಸ್ಪಷ್ಟಪಡಿಸಬೇಕಾಗಿದೆ.

‘ಕಂಬಳದಲ್ಲಿ ಕೋಣಗಳ ಓಟದ ವೇಗವನ್ನು ಲೇಸರ್ ತಂತ್ರಜ್ಞಾನದ ಮೂಲಕ ಅಧಿಕೃತವಾಗಿ ದಾಖಲಿಸಲಾಗುತ್ತದೆ. ಅದರ ಆಧಾರದಲ್ಲಿ ಕೋಣವನ್ನು ಓಡಿಸಿದವರ ವೇಗವನ್ನು ನೀಡುತ್ತಾರೆ. ಕಳೆದೊಂದು ದಶಕದಿಂದ ಕಂಬಳ ಅಕಾಡೆಮಿ, ಸಮಿತಿಗಳ ಪ್ರಯತ್ನದ ಫಲವಾಗಿ ತಂತ್ರಜ್ಞಾನ, ಮಾಪನಗಳನ್ನು ಅಳವಡಿಸಲಾಗುತ್ತಿದ್ದು, ಅದಕ್ಕಿಂತ ಪೂರ್ವದಲ್ಲಿ ವೇಗದಲ್ಲಿ ಕೋಣಗಳು ಓಡಿದ್ದರೂ, ದಾಖಲೆಗಳಿಲ್ಲ’ ಎನ್ನುತ್ತಾರೆ ಕಂಬಳದ ಹಿರಿಯ ತಜ್ಞರು.

ದಾಖಲೆ ಯಾರದ್ದೇ ಆಗಲಿ? ಆ ಮೂಲಕ ಕಂಬಳ ಓಟಗಾರರಿಗೆ ಮಾನ್ಯತೆ ಸಿಗುತ್ತಿರುವುದು, ಕಂಬಳ ಪ್ರಚಲಿತಗೊಳ್ಳುತ್ತಿರುವುದು ಸಂತಸ. ಕಂಬಳ ಅಕಾಡೆಮಿ, ಸಮಿತಿ ಹಾಗೂ ಹಿಂದಿನ ಶ್ರಮಜೀವಿಗಳನ್ನು ಅಭಿನಂದಿಸಬೇಕು ಎಂದು ಅಭಿಮಾನಿಗಳು ಸಂತೃಪ್ತಿ ವ್ಯಕ್ತಪಡಿಸಿದ್ದಾರೆ.

ಶೀಘ್ರ ಸ್ಪಷ್ಟನೆ–ಕಡಂಬ
ವೇಣೂರಿನಲ್ಲಿ ಫೆ.16ರಂದು ನಡೆದ ಕಂಬಳದಲ್ಲಿ ಬಜಗೋಳಿ ಜೋಗಿಬೆಟ್ಟು ನಿಶಾಂತ್‌ ಶೆಟ್ಟಿ 143 ಮೀಟರ್ಸ್ ಕರೆಯ ಗುರಿಯನ್ನು 13.61 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದರು. ಇದನ್ನು ದಾಖಲೆ ಎಂದೂ ಕೆಲವೆಡೆ ಬಿಂಬಿಸಲಾಗಿತ್ತು. ಆದರೆ, ಇದು 100 ಮೀಟರ್ಸ್‌ಗೆ 9.51 ಸೆಕೆಂಡ್‌ಗಳಾಗುತ್ತವೆ. ಇದಕ್ಕಿಂತ ಶ್ರೀನಿವಾಸ ಗೌಡರ ಸಾಧನೆ (9.44 ಸೆಕೆಂಡ್‌) ಉತ್ತಮವಾಗಿದೆ.

ಕಂಬಳ ಸಮಿತಿ ಹಾಗೂ ಅಕಾಡೆಮಿ ಸದಸ್ಯ ಗುಣಪಾಲ ಕಡಂಬ ಮಾತನಾಡಿ, ‘ನಿಶಾಂತ್ ಶೆಟ್ಟಿ ಅವರಿಗಿಂತ ಶ್ರೀನಿವಾಸ ಗೌಡ ಅವರ ಅವಧಿ ಉತ್ತಮವಾಗಿದೆ. ಕಂಬಳದ ಒಟ್ಟಾರೆ ದಾಖಲೆ ಬಗ್ಗೆ ಸಮಿತಿ ಶೀಘ್ರವೇ ಸ್ಪಷ್ಟಪಡಿಸಲಿದೆ’ ಎಂದು ಪ್ರತಿಕ್ರಿಯಿಸಿದರು.

‘ನನ್ನ ಅವಧಿಗಿಂತ ಕಡಿಮೆ’
‘ಐಕಳದಲ್ಲಿ ನಡೆದ ಕಂಬಳದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ 13.46 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರೂ, ನೇಗಿಲು ಕಿರಿಯ ವಿಭಾಗದ 13.62 ಸೆಕೆಂಡ್‌ ಸಮಯವು ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಹೀಗಾಗಿ, ವೇಣೂರಿನಲ್ಲಿ ನಿಶಾಂತ್ ಶೆಟ್ಟಿ ಅವರು ಗುರಿ ತಲುಪಿದ ಅವಧಿಯನ್ನು ‘ರೆಕಾರ್ಡ್‌ ಬ್ರೇಕ್’ ಎಂದು ಬಿಂಬಿಸಿರಬಹುದು. ಆದರೆ, ಅದು ನನ್ನ ಅತ್ಯುತ್ತಮ ಅವಧಿಗಿಂತ (13.46 ಸೆಕೆಂಡ್‌)ಗಿಂತ ಕಡಿಮೆ ಇದೆ’ ಎಂದು ಕಂಬಳ ಓಟಗಾರ ಶ್ರೀನಿವಾಸ ಗೌಡ ಸ್ಪಷ್ಟಪಡಿಸಿದರು.

ಕಂಬಳ ಮತ್ತು ಓಟಗಾರರು– ಕರೆ (ಟ್ರ್ಯಾಕ್ ಉದ್ದ ಮೀಟರ್)– ಕ್ರಮಿಸಿದ ಸಮಯ ಸೆಕೆಂಡ್– 100 ಮೀಟರ್‌ಗೆ ತಗುಲಿದ ಸಮಯ

ಕಾರ್ಕಳದದಲ್ಲಿ ಸುರೇಶ್ ಶೆಟ್ಟಿ ಮತ್ತು ಆನಂದ– 146– 13.60 –9.31

ಐಕಳದಲ್ಲಿ ಶ್ರೀನಿವಾಸಗೌಡ–142.5– 13.46 –9.44

ವೇಣೂರಿನಲ್ಲಿ ನಿಶಾಂತ್ ಶೆಟ್ಟಿ– 143–13.61– 9.51

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT