ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹18 ಸಾವಿರ ಕೋಟಿ ಮನ್ನಾ

ವಾಣಿಜ್ಯ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಸಂಪೂರ್ಣ ಚುಕ್ತಾ
Last Updated 12 ಜೂನ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ಸಾಲ ಮನ್ನಾದ ಒಟ್ಟು ಮೊತ್ತದ ಬಗ್ಗೆ ಇದ್ದ ಗೊಂದಲ ಪರಿಹಾರವಾಗಿದ್ದು, ಸಾಲ ಮನ್ನಾದ ಒಟ್ಟು ಮೊತ್ತಈ ಹಿಂದೆ ಹೇಳಿದಂತೆ ₹ 46 ಸಾವಿರ ಕೋಟಿ ಅಲ್ಲ, ₹18 ಸಾವಿರ ಕೋಟಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ವಾಣಿಜ್ಯ ಬ್ಯಾಂಕುಗಳು ರೈತರ ಬೆಳೆ ಸಾಲ ಅಲ್ಲದೆ, ರೈತರು ಮಾಡಿದ್ದ ಇತರ ಸಾಲಗಳ ಮೊತ್ತವನ್ನೂ ಸಾಲ ಮನ್ನಾ ಬಾಬ್ತಿಗೆ ಸೇರಿಸಿದ ಕಾರಣ ಸಾಲ ಮನ್ನಾ ಮೊತ್ತ ₹46 ಸಾವಿರ ಕೋಟಿ ಎಂದು ಬಿಂಬಿಸಲಾಯಿತು. ಎಲ್ಲ ಜಿಲ್ಲೆಗಳಲ್ಲಿ ಅಧಿಕಾರಿಗಳು ಫಲಾನುಭವಿಗಳ ಮತ್ತು ಅವರ ಬೆಳೆ ಸಾಲದ ಮೊತ್ತದ ಕುರಿತು ಮಾಹಿತಿ ಸಂಗ್ರಹಿಸಿದಾಗ, ರಾಷ್ಟ್ರೀಕೃತ ಬ್ಯಾಂಕ್‌ಗಳು ತಪ್ಪು ಮಾಹಿತಿ ನೀಡಿದ್ದು ಬೆಳಕಿಗೆ ಬಂದಿತು ಎಂದು ಮೂಲಗಳು ಹೇಳಿವೆ.

ಸರ್ಕಾರ ಬೆಳೆ ಸಾಲ ಮನ್ನಾ ಪ್ರತಿ ರೈತನಿಗೆಗರಿಷ್ಠ ಮೊತ್ತ ₹ 2 ಲಕ್ಷ ಎಂದು ನಿಗದಿ ಮಾಡಲಾಗಿತ್ತು. ಒಂದು ವೇಳೆ ರೈತ ₹5 ಲಕ್ಷ ಸಾಲ ಮನ್ನಾ ಮಾಡಿದ್ದರೂ, ಸಾಲ ಮನ್ನಾ ಯೋಜನೆಯಡಿ ಕೇವಲ ₹ 2 ಲಕ್ಷಕ್ಕೆ ಅರ್ಹನಾಗುತ್ತಾನೆ. ಒಂದು ವೇಳೆ ಸಾಲ ಮನ್ನಾ ಅಡಿ ಹೆಚ್ಚಿಗೆ ಪಾವತಿ ಆಗಿದ್ದರೆ, ಹೆಚ್ಚುವರಿ ಮೊತ್ತ ವಾಪಸ್‌ ಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ವಾಣಿಜ್ಯ ಬ್ಯಾಂಕ್‌ ಸಾಲ ಚುಕ್ತಾ: ಇದೀಗ ರಾಜ್ಯ ಸರ್ಕಾರ ವಾಣಿಜ್ಯ ಬ್ಯಾಂಕುಗಳಿಗೆ ಪಾವತಿಸಬೇಕಾಗಿದ್ದ ₹ 6,589 ಕೋಟಿಯನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲ ಮನ್ನಾ ಯೋಜನೆಗೆ ಅರ್ಹತೆ ಹೊಂದಿರುವ ರಿಸ್ಟ್ರಕ್ಚರ್ಡ್‌ ಸಾಲದ ಮೊತ್ತ ₹2,812 ಕೋಟಿ, ಓವರ್‌ ಡ್ಯೂ ₹3057 ಕೋಟಿ ಮತ್ತು ಪ್ರೋತ್ಸಾಹ ಧನಕ್ಕೆ ಅರ್ಹತೆ ಪಡೆದಿರುವ ಸಾಲ ₹720 ಕೋಟಿಗಳ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಇದರಲ್ಲಿ ಈಗಾಗಲೇ ಬಿಡುಗಡೆಗೊಳಿಸಲಾಗಿರುವ ಮೊತ್ತವನ್ನು ಕಡಿತಗೊಳಿಸಿ, ಉಳಿದ ಮೊತ್ತವನ್ನು ಒಂದೇ ಕಂತಿನಲ್ಲಿ ರೈತರ ಸಾಲದ ಖಾತೆಗೆ ಪಾವತಿಸಲಾಗುವುದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಪಿಎ ಸಾಲಗಳು:ಎನ್‌ಪಿಎ ಸಾಲಗಳು ಮತ್ತು 2018 ರ ಜನವರಿ 1 ರಿಂದ ಬಡ್ಡಿ ಮೊತ್ತ ಪಾವತಿಸುವ ಬಗ್ಗೆ ಪ್ರತ್ಯೇಕವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆದೇಶ ತಿಳಿಸಿದೆ.

ರೈತರ ಖಾತೆಗೆ ಸಾಲ ಮನ್ನಾ ಹಣ ಪಾವತಿ ಮಾಡಲು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆ
ಗಳ ಇಲಾಖೆ ಖಾತೆಯಲ್ಲಿರುವ ಮೊತ್ತವನ್ನು ಬಳಸಲಾಗುವುದು. ಒಂದು ವೇಳೆ ಹಣದ ಕೊರತೆ ಉಂಟಾದರೆ ಆರ್ಥಿಕ ಇಲಾಖೆ ಭರಿಸಲಿದೆ.

ಸಹಕಾರಿ ಬ್ಯಾಂಕ್‌ಗಳ ಬೆಳೆ ಸಾಲ ಮನ್ನಾ ಸ್ವಲ್ಪ ಬಾಕಿ ಉಳಿದಿದ್ದು ಸಾಲ ಪಾವತಿ ನಿಗದಿತ ದಿನದಂದು ಒಂದೇ ಕಂತಿನಲ್ಲಿ ಪಾವತಿಸಲಾಗುವುದು. ಶುಕ್ರವಾರ ಬ್ಯಾಂಕರ್‌ಗಳ ಸಭೆಯನ್ನು ಕರೆದಿದ್ದು, ಸಣ್ಣ ಪುಟ್ಟ ಸಂದೇಹಗಳ ಮತ್ತು ಸಮಸ್ಯೆಗಳು ಇದ್ದರೆ ಬಗೆಹರಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT