ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2 ಲಕ್ಷದವರೆಗಿನ ಬೆಳೆ ಸಾಲ ಮನ್ನಾ

Last Updated 5 ಜುಲೈ 2018, 19:07 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೈತ್ರಿ ಸರ್ಕಾರ ರೈತರ ₹2 ಲಕ್ಷವರೆಗಿನ ಬೆಳೆಸಾಲ ಮನ್ನಾ ಮಾಡುವ ಮಹತ್ವದ ಘೋಷಣೆ ಮಾಡಿದೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಗುರುವಾರ ಮಂಡಿಸಿದ ಬಜೆಟ್‌ನಲ್ಲಿ ಈ ತೀರ್ಮಾನ ಪ್ರಕಟಿಸಲಾಗಿದೆ. ಇದರ ಬೆನ್ನಲ್ಲೇ ಸಾಲ ಮನ್ನಾ ಯೋಜನೆ ಯಾವ್ಯಾವ ಸಾಲಕ್ಕೆ ಅನ್ವಯವಾಗಲಿದೆ ಹಾಗೂ ಯಾವುದಕ್ಕೆ ಅನ್ವಯವಾಗುವುದಿಲ್ಲ ಎಂಬ ಬಗ್ಗೆ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಲಾಗಿದೆ.

ರೈತರ ಎಲ್ಲ ವಿಧದ ಸಾಲಗಳನ್ನು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಮನ್ನಾ ಮಾಡುವುದಾಗಿ ಜೆಡಿಎಸ್‌ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಆದರೆ, ಈಗ ₹2 ಲಕ್ಷವರೆಗಿನ ಬೆಳೆ ಸಾಲ ಮಾತ್ರ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಪ್ರಕಟಿಸಿದ್ದಾರೆ. ಇದ
ರಿಂದ ಬೆಳೆ ಸಾಲ ಬಿಟ್ಟು ಬೇರೆ ರೀತಿ ಸಾಲ ಪಡೆದಿರುವ ರೈತರಿಗೆ ನಿರಾಸೆಯಾಗಿದೆ.

4 ವರ್ಷಗಳಲ್ಲಿ ಪಾವತಿ: ರಾಜ್ಯ ಸರ್ಕಾರ ಮನ್ನಾ ಮಾಡಿರುವ ಬೆಳೆ ಸಾಲದ ಹಣವನ್ನು ನಾಲ್ಕು ವರ್ಷಗಳಲ್ಲಿ ವಾರ್ಷಿಕ, ಅರೆ ವಾರ್ಷಿಕ ಕಂತುಗಳಲ್ಲಿ ಬ್ಯಾಂಕುಗಳಿಗೆ ಮರುಪಾವತಿಸುವುದಾಗಿ ಹೇಳಿದೆ.

**

ಯಾರಿಗಿಲ್ಲ?

* ಸಹಕಾರಿ ಸಂಘಗಳ ಸಾಲ ಮನ್ನಾ ಯೋಜನೆಯಡಿ ಈಗಾಗಲೇ ಪ್ರಯೋಜನ ಪಡೆದಿರುವ ಕೃಷಿಕರಿಗೆ ಯೋಜನೆ ಲಾಭ ದೊರೆಯುವುದಿಲ್ಲ.

* ರೈತರು ಪಡೆದ ಆಭರಣ ಸಾಲಗಳು

* ಟ್ರಸ್ಟ್‌ಗಳು,‍ಪಾಲುದಾರಿಕೆ ಸಂಸ್ಥೆಗಳು, ಸಣ್ಣಪುಟ್ಟ ಹಣಕಾಸು ಸಂಸ್ಥೆಗಳು, ನಗರ ಸಹಕಾರ ಬ್ಯಾಂಕುಗಳಿಂದ ಪಡೆದ ಸಾಲಗಳು

* ₹ 4 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ ಆದಾಯ ತೆರಿಗೆ ಪಾವತಿದಾರರು ಪಡೆದ ಬೆಳೆ ಸಾಲಗಳು

* ವಾಹನಗಳ ಖರೀದಿ ಮತ್ತಿತರ ಆದ್ಯತೆಯಿಲ್ಲದ ಸಾಲಗಳು

* ಕೇಂದ್ರ, ರಾಜ್ಯ ಸರ್ಕಾರ, ಅದರ ಅಂಗ ಸಂಸ್ಥೆಗಳು, ಅರೆ ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ವಲಯದ ಉದ್ದಿಮೆಗಳು, ಬ್ಯಾಂಕ್‌ ಹಾಗೂ ಶೈಕ್ಷಣಿಕ ವಲಯದ ಸಿಬ್ಬಂದಿಗಳಿಗೆ ಕೊಟ್ಟಿರುವ ಬೆಳೆ ಸಾಲಗಳು

* ಸಂಚಿತ ನಿಧಿಯಿಂದ ತಿಂಗಳಿಗೆ ₹ 15,000ಕ್ಕಿಂತ ಹೆಚ್ಚು ಪಿಂಚಣಿ ಪಡೆಯುವ ನಿವೃತ್ತಿ ವೇತನದಾರರು (ಮಾಜಿ ಸೈನಿಕರನ್ನು ಬಿಟ್ಟು) ಪಡೆದಿರುವ ಬೆಳೆ ಸಾಲಗಳು.

* ಸ್ವಸಹಾಯ ಗುಂ‍‍ಪುಗಳು ಹಾಗೂ ಜಂಟಿ ಹೊಣೆಗಾರಿಕೆ ಗುಂಪುಗಳು ಪಡೆದ ಸಾಲಗಳು

* ಗುತ್ತಿಗೆ ಬೇಸಾಯಕ್ಕಾಗಿ (ಕಾಂಟ್ರ್ಯಾಕ್ಟ್‌ ಫಾರ್ಮಿಂಗ್‌) ಪಡೆದ ಸಾಲಗಳು

* ರೈತರ ಸಾಲ ವಿತರಣೆಗಾಗಿ ಸಕ್ಕರೆ ಕಾರ್ಖಾನೆಗಳಿಗೆ ನೀಡಲಾಗಿರುವ ಸಾಲಗಳು

* ಮೀನುಗಾರಿಕೆ, ಹೈನುಗಾರಿಕೆ,ಕೃಷಿ ಸಂಬಂಧಿತ ಇತರ ಸಾಲಗಳು

* ದುರ್ಬಳಕೆ ಮಾಡಿದ ಸಾಲಗಳು ಅಥವಾ ಠೇವಣಿ ಇಡಲಾಗಿರುವ ಸಾಲಗಳು

**

ಯಾರಿಗುಂಟು?

* ರೈತ, ಆತನ ಪತ್ನಿ ಹಾಗೂ ಅವಲಂಬಿತ ಮಕ್ಕಳು 2009ರ ಏಪ್ರಿಲ್‌ ಒಂದನೇ ತಾರೀಕಿನ ಬಳಿಕ ಸಾಲ ಪಡೆದು 2017ರ ಡಿಸೆಂಬರ್‌ 31ರವರೆಗೆ ಮರುಪಾವತಿಸದೆ ಉಳಿಸಿಕೊಂಡಿರುವ ಅವಧಿ ಮೀರಿದಬೆಳೆ ಸಾಲ, ಮರುವರ್ಗೀಕರಣ ಮಾಡಿದ ಬೆಳೆ ಸಾಲ, ವಸೂಲಾಗದ ಸಾಲಗಳು (ಎನ್‌‍ಪಿಎ)

* ಬೆಳೆ ಬೆಳೆಯಲು ಪಡೆದ ಸಾಲ, ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸಾಲ ಮತ್ತುಗರಿಷ್ಠ 12ರಿಂದ 18 ತಿಂಗಳಲ್ಲಿ ಮರುಪಾವತಿಸುವ ಸಾಲವನ್ನು ಬೆಳೆಸಾಲ ಎಂದು ಅರ್ಥೈಸಲಾಗಿದೆ. ಇದು‍ಪ್ಲಾಂಟೇಷನ್‌ ಮತ್ತುತೋಟಗಾರಿಕೆ ಬೆಳೆಗಳಿಗೆ ನೀಡಿರುವ ಬೆಳೆ ಸಾಲಗಳನ್ನೂ
ಒಳಗೊಂಡಿರುತ್ತದೆ.

* ರಾಷ್ಟ್ರೀಕೃತ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು, ಪ್ರಾಥಮಿಕ ಸಹಕಾರ ಪತ್ತಿನ ಸಂಘಗಳು, ಕೃಷಿ ಸೇವಾ ಸಹಕಾರ ಸಂಘಗಳ ಬೆಳೆ ಸಾಲ ಮತ್ತು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸಾಲಗಳು ಯೋಜನೆ ವ್ಯಾಪ್ತಿಯೊಳಗೆ ಬರಲಿದೆ.

* ಈ ಎಲ್ಲಾ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಒಟ್ಟು ಬೆಳೆ ಸಾಲದ ಮೊತ್ತ₹55,328 ಕೋಟಿ ಎಂದು ಅಂದಾಜಿಸಲಾಗಿದೆ.

* ಸಾಲ ಮನ್ನಾ ಯೋಜನೆಯಡಿ ಸುಸ್ತಿ ಆಗಿರುವ ರೈತರ ಒಟ್ಟು ಸಾಲಗಳ ಸಂಖ್ಯೆ 17.32 ಲಕ್ಷ. ಇವುಗಳ ಒಟ್ಟು ಸಾಲದ ಮೊತ್ತ ₹ 30,266 ಕೋಟಿ.

* ಹಿಂದಿನ ಸಾಲಿನ ಕೃಷಿ ಸಾಲ, ಕಿಸಾನ್‌ ಕ್ರೆಡಿಟ್ ಕಾರ್ಡ್ ಸಾಲಗಳನ್ನು ಸಕಾಲಕ್ಕೆ ಮರುಪಾವತಿಸಿದ ರೈತರಿಗೆ ₹ 25,000 ಅಥವಾ ಮರುಪಾವತಿಸಿದ ಸಾಲಕ್ಕೆ ಸಮನಾದ ಮೊತ್ತ, ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನು ಪ್ರೋತ್ಸಾಹ ಧನವಾಗಿ ಪಾವತಿ.

* ಚಾಲ್ತಿ ಸಾಲ ಹೊಂದಿರುವ 27.67 ಲಕ್ಷ ರೈತರು ಮತ್ತು ಹಿಂದಿನ ಬೆಳೆ ಸಾಲಗಳನ್ನು ಸಕಾಲಕ್ಕೆ ಮರುಪಾವತಿಸಿದ ರೈತರಿಗೆ ₹6,893 ಕೋಟಿವರೆಗೆ ಪ್ರೋತ್ಸಾಹ ಧನ ವಿತರಣೆ.

* ಒಟ್ಟು 44.89 ಲಕ್ಷ ರೈತರ ಕೃಷಿ ಸಾಲ ಖಾತೆಗಳಿಗೆ ಸಂಚಿತವಾಗಿ ₹37,159 ಕೋಟಿಗಳಷ್ಟು ಲಾಭವಾಗುವ ಅಂದಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT