ಸೋಮವಾರ, ಮಾರ್ಚ್ 1, 2021
29 °C

ಕಾರ್ಯಕ್ರಮದಲ್ಲಿ ಮಕ್ಕಳ ಮರೆತ ಶಿಕ್ಷಕ, ಬಸ್‌ಚಾರ್ಜ್‌ ಇಲ್ಲದೆ 8 ಕಿ.ಮೀ. ನಡೆದರು

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

ಮುಂಡಗೋಡ (ಉತ್ತರ ಕನ್ನಡ): ತಾಲ್ಲೂಕು ಮಟ್ಟದ ಸೇವಾದಳದ ಕಾರ್ಯಕ್ರಮಕ್ಕೆ ಕರೆದುಕೊಂಡಿದ್ದ ಹೋಗಿದ್ದ ದೈಹಿಕ ಶಿಕ್ಷಣ ಶಿಕ್ಷಕ, ವಿದ್ಯಾರ್ಥಿಗಳಿಗೆ ಊಟ ಕೊಡಿಸದೆ, ಮರಳಿ ಹೋಗಲು ಬಸ್ಸಿಗೆ ಹಣವನ್ನೂ ನೀಡದ ಕಾರಣ 8-10 ಕಿ.ಮೀ.ವರೆಗೆ ಮಕ್ಕಳು ನಡೆದುಬಂದು ಮನೆ ಸೇರಿದ್ದಾರೆ.

ತಾಲ್ಲೂಕಿನ ಕಾತೂರ ಗ್ರಾಮದಲ್ಲಿ ಶುಕ್ರವಾರ ತಾಲ್ಲೂಕು ಮಟ್ಟದ ಭಾರತ ಸೇವಾದಳದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ 8 ಹಾಗೂ 9ನೇ ತರಗತಿಯ ಒಟ್ಟು 14 ವಿದ್ಯಾರ್ಥಿಗಳನ್ನು ದೈಹಿಕ ಶಿಕ್ಷಣ ಶಿಕ್ಷಕ ದೀಪಕ್ ಲೋಕಣ್ಣವರ್ ಕರೆದುಕೊಂಡು ಹೋಗಿದ್ದರು.

ಮಧ್ಯಾಹ್ನದ ವೇಳೆಗೆ ದೀಪಕ್ ಲೋಕಣ್ಣವರ್ ಮಕ್ಕಳ ಊಟದ ಚೀಟಿಗಳನ್ನು ತಮ್ಮ ಹತ್ತಿರ ಇಟ್ಟುಕೊಂಡು ಮಕ್ಕಳಿಗೂ ಹೇಳದೇ ಮುಂಡಗೋಡಕ್ಕೆ ಬಂದಿದ್ದರು. ಅತ್ತ ಮಕ್ಕಳು ಊಟಕ್ಕೆ ಚೀಟಿ ಇಲ್ಲದೆ ಉಪವಾಸ ಕುಳಿತರು. ಊಟ ಮಾಡಲು ಸಾಲಿನಲ್ಲಿ ಹೋದರು. ಆದರೆ, ಚೀಟಿ ಇಲ್ಲದ ಕಾರಣ ಅಲ್ಲಿದ್ದ ಶಿಕ್ಷಕರು ತಮ್ಮನ್ನು ಸಾಲಿನಿಂದ ಹೊರ ಹೋಗುವಂತೆ ತಿಳಿಸಿ, ಊಟ ನೀಡಿಲ್ಲ ಎಂದು ಮಕ್ಕಳು ದೂರಿದರು.

ಸಂಜೆ ನಾಲ್ಕು ಗಂಟೆಯಾದರೂ ಶಿಕ್ಷಕ ಬಾರದ ಕಾರಣ ಮಕ್ಕಳು ಆತಂಕಗೊಂಡರು. ಬಸ್ಸಿನಲ್ಲಿ ಹೋಗಲು ಹಣ ಇಲ್ಲದ ಕಾರಣ ಕಾತೂರಿನಿಂದ ನಡೆದುಕೊಂಡು ಮುಂಡಗೋಡದತ್ತ ಹೊರಟರು. 7- 8 ಕಿ.ಮೀ ಕ್ರಮಿಸಿದ ನಂತರ ಗ್ರಾಮಸ್ಥರೊಬ್ಬರು ಹಣ ನೀಡಿ ಬಸ್ಸಿಗೆ ಹತ್ತಿಸಿ ತಮ್ಮನ್ನು ಕಳುಹಿಸಿದ್ದಾಗಿ ಮಕ್ಕಳು ಅಳುತ್ತ ಹೇಳಿದರು.

ಪಾಲಕರಿಗೆ ಈ ವಿಷಯ ಗೊತ್ತಾಗಿ, ಶನಿವಾರ ಜೂನಿಯರ್ ಕಾಲೇಜಿಗೆ ಭೇಟಿ ನೀಡಿ ಶಿಕ್ಷಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಒಟ್ಟು 14 ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಊಟವನ್ನೂ ಮಾಡಿಸದೇ ಬಸ್ಸಿಗೆ ಬರಲು ಹಣವನ್ನು ನೀಡದೇ ಶಿಕ್ಷಕ ತೊಂದರೆ ನೀಡಿದ್ದಾರೆ. ಕೆಲವು ಮಕ್ಕಳು ದಾರಿ ಮಧ್ಯೆ ಆಯಾಸದಿಂದ ಬಳಲಿ ತೊಂದರೆ ಅನುಭವಿಸಿದ್ದಾರೆ. ದೈಹಿಕ ಶಿಕ್ಷಣದ ಶಿಕ್ಷಕ ದೀಪಕ್ ಲೋಕಣ್ಣವರ್ ಸೇವಾದಳದ ಬಗ್ಗೆ ಏನೂ ಕಲಿಸದೇ ಹಾಗೆ ಕರೆದುಕೊಂಡು ಹೋಗಿ ಉಪವಾಸದಿಂದ ಬರುವಂತೆ ಮಾಡಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪೋಷಕರ ಆಕ್ರೋಶಕ್ಕೆ ಮಣಿದ ಶಿಕ್ಷಕ ದೀಪಕ್ ಲೋಕಣ್ಣವರ್ ಮಕ್ಕಳನ್ನು ನೋಡುತ್ತ, ‘ನನ್ನಿಂದ ತಪ್ಪಾಗಿದೆ. ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ’ ಎಂದು  ಕ್ಷಮೆ ಕೇಳಿದರು.

ಇದರಿಂದ ಸಮಾಧಾನಗೊಳ್ಳದ ಪೋಷಕರು, ‘ಮಕ್ಕಳಿಗೆ ದಾರಿಯಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಯಾರು ಜವಾಬ್ದಾರಿ ಹೊರುತ್ತಿದ್ದರು? ಮುಖ್ಯ ಶಿಕ್ಷಕರೇ ಮಕ್ಕಳನ್ನು ಕರೆದುಕೊಂಡು ಹೋಗಿ ಆರಾಮಾಗಿ ಮನೆಗೆ ಮುಟ್ಟಿಸಬೇಕಾಗುತ್ತದೆ. ನಿಮ್ಮ ಮಕ್ಕಳಾದರೆ ಹೀಗೆ ಮಾಡುತ್ತಿದ್ದಿರಾ? ಕೇವಲ ತಪ್ಪಾಗಿದೆ ಎಂದರೆ ಹೇಗೆ? ಮಕ್ಕಳು ಸುರಕ್ಷಿತವಾಗಿ ಬಂದಿದ್ದಾರೆ, ಪುಣ್ಯ. ಆದರೆ, ಏನಾದರೂ ತೊಂದರೆ ಆಗಿದ್ದರೆ ಯಾರೂ ಹೊಣೆ ಹೊರುತ್ತಿರಲಿಲ್ಲ. ಮಕ್ಕಳದೇ ತಪ್ಪು ಎಂದು ಹೇಳುತ್ತಿದ್ದರು’ ಎಂದು ಪಾಲಕರಾದ ಮರ್ದಾನಸಾಬ್, ಪುಟ್ಟವ್ವ , ಮಂಜುಳಾ ಆಚಾರಿ ಆಕ್ರೋಶದಿಂದ ಹೇಳಿದರು.

ವಿಷಯ ತಿಳಿದು ಶಾಲೆಗೆ ಬಂದ ದೈಹಿಕ ಶಿಕ್ಷಣ ಪರಿವೀಕ್ಷಕ ಎನ್.ಆರ್.ತಳ್ಳೀಮನಿ ಮಾತನಾಡಿ, ‘ಶಿಕ್ಷಕ ಮಾಡಿದ್ದು ತಪ್ಪೆಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ವಿಚಾರವನ್ನು ಕ್ಷೇತ್ರ ಶಿಕ‌್ಷಣಾಧಿಕಾರಿ ಗಮನಕ್ಕೆ ತರಲಾಗುವುದು. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.