ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ದಿನಾಚರಣೆ; ರಾಧಾಕೃಷ್ಣನ್‌ರ ಸ್ಮರಣೆ

Last Updated 5 ಸೆಪ್ಟೆಂಬರ್ 2019, 15:26 IST
ಅಕ್ಷರ ಗಾತ್ರ

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ನಗರ/ಪಟ್ಟಣ/ಗ್ರಾಮೀಣ ಪ್ರದೇಶದ ಶಾಲಾ–ಕಾಲೇಜುಗಳಲ್ಲಿ, ಕೆಲವು ಸಂಘ–ಸಂಸ್ಥೆಗಳ ಕಚೇರಿಗಳಲ್ಲಿ ಗುರುವಾರ ಎಸ್.ರಾಧಾಕೃಷ್ಣನ್‌ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಯಿತು.

ಇದೇ ಸಂದರ್ಭ ತಮಗೆ ವಿದ್ಯೆ ಕಲಿಸಿದ, ಬದುಕಿಗೆ ಮಾರ್ಗದರ್ಶನ ನೀಡಿದ ಗುರುಗಳ ಸ್ಮರಣೆಯನ್ನು ಹಲವರು ತಮ್ಮದೇ ಭಾವನೆಗಳಲ್ಲಿ ವ್ಯಕ್ತಪಡಿಸಿ, ನಮನ ಸಲ್ಲಿಸಿದ್ದು ವಿಶೇಷವಾಗಿತ್ತು.

ಶಾಲಾ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಶುಭಾಶಯ ಕೋರಿದರು. ಹಳೆಯ ವಿದ್ಯಾರ್ಥಿಗಳು ತಮ್ಮ ಗುರುವನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ. ಹಲವರು ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ತಮ್ಮ ನೆಚ್ಚಿನ ಗುರುವಿನ ಭಾವಚಿತ್ರ ಅಪ್‌ಲೋಡ್‌ ಮಾಡುವ ಮೂಲಕ ವಿಶೇಷ ಗೌರವ ಸಲ್ಲಿಸಿದ್ದಾರೆ.

ಶಿಕ್ಷಕಿಗೆ ಸನ್ಮಾನ: ನಟರಾಜ ಪ್ರತಿಷ್ಠಾನದಿಂದ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಮಕ್ಕಳ ಸಾಹಿತಿ ಅಪ್ಪಾಸ್ವಾಮಿ ಮಾತನಾಡಿ, ‘ಯಾವುದೇ ನಿರೀಕ್ಷೆಯಿಲ್ಲದೆ ಶಿಕ್ಷಕರು ತಮ್ಮ ಕರ್ತವ್ಯ ನಿರ್ವಹಿಸಿದರೆ ಪ್ರಶಸ್ತಿಗಳು ಅವರನ್ನೇ ಹುಡುಕಿಕೊಂಡು ಬರುತ್ತವೆ. ಶಿಕ್ಷಕರು ನಿರಂತರವಾಗಿ ವಿದ್ಯಾರ್ಥಿಯಾಗಿ ಕಲಿಯಬೇಕು’ ಎಂದು ಹೇಳಿದರು.

ಗೌರಿಶಂಕರ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಸಣ್ಣದೇವಮ್ಮ ಅವರನ್ನು ಸನ್ಮಾನಿಸಲಾಯಿತು. ಪ್ರೊ.ಕೆ.ಸತ್ಯನಾರಾಯಣ, ಉಪನ್ಯಾಸಕಿ ಡಿ.ಸುನೀತಾರಾಣಿ, ಎಂ.ಎಸ್.ಸಂಧ್ಯಾರಾಣಿ, ಶಿಕ್ಷಕಿ ಲೀಲಾವತಿ ಇದ್ದರು.

ಮಹಾರಾಜ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎನ್.ಪ್ರಹ್ಲಾದ ಶಿಕ್ಷಕರ ಮಹತ್ವದ ಬಗ್ಗೆ ಮಾತನಾಡಿದರು. ಪ್ರಾಂಶುಪಾಲರಾದ ಪ್ರೊ.ಸಿ.ಪಿ.ಸುನೀತಾ, ಆಡಳಿತಾಧಿಕಾರಿ ಅನಿತಾ ವಿಲಿಯಂ ಬ್ರಾಕ್ಸ್ ಪಾಲ್ಗೊಂಡಿದ್ದರು.

ಡಾ.ಸರ್ವಪಲ್ಲಿ ರಾಧಾಕೃಷ್ಣ ಕಾಲೇಜಿನಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ದಿನಗಳು, ರಾಷ್ಟ್ರಪತಿಗಳಾಗಿ ನೇಮಕವಾದ ಸಂದರ್ಭ ಸಾರೋಟಿನಲ್ಲಿ ರೈಲು ನಿಲ್ದಾಣದವರೆಗೆ ಬೀಳ್ಕೊಡುಗೆ ಕೊಟ್ಟಿದ್ದ ಕ್ಷಣಗಳನ್ನು ಇದೇ ಸಂದರ್ಭ ಸ್ಮರಿಸಲಾಯಿತು.

ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲೂ ಶಿಕ್ಷಕರ ದಿನಾಚರಣೆ ನಡೆಯಿತು. ವಿಮರ್ಶಕ ಪ್ರೊ.ಸಿ.ನಾಗಣ್ಣ ಶಿಕ್ಷಕರ ದಿನದ ಮಹತ್ವ ತಿಳಿಸಿದರು. ಪ್ರಾಂಶುಪಾಲ ಡಾ.ಬಿ.ಟಿ.ವಿಜಯ್ ಅಧ್ಯಕ್ಷತೆ ವಹಿಸಿದ್ದರು.

ಚಿನ್ಮಯಿ ವಿದ್ಯಾಲಯದಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಸಂಸ್ಥೆ ಅಧ್ಯಕ್ಷ ಎಚ್.ಎನ್.ರಾಮತೀರ್ಥ, ಪ್ರಾಧ್ಯಾಪಕ ಡಾ.ಜಿ.ಎಸ್.ಸುರೇಶ್ ಪಾಲ್ಗೊಂಡಿದ್ದರು. ರಾಷ್ಟ್ರೀಯ ಸಾಕ್ಷರತಾ ಸಮಿತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಕ್ಯುಡಿಪಿ ಟೆಕ್ನಾಲಜೀಸ್‍ನಲ್ಲಿ ನರ್ಸರಿ ಟೀಚರ್ ಟ್ರೈನಿಂಗ್ ಕೋರ್ಸ್ ಆರಂಭಿಸಲಾಯಿತು.

ಜೆಎಸ್‍ಎಸ್ ಪ್ರೌಢಶಾಲೆ, ಬಿಜಿಎಸ್ ಬಿ.ಇಡಿ ಕಾಲೇಜು ಸಹಯೋಗದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು. ರಾಮಕೃಷ್ಣ ಆಶ್ರಮದ ಸ್ವಾಮಿ ಶಾಂತಿವ್ರತಾನಂದಜಿ ಸಾನ್ನಿಧ್ಯ ವಹಿಸಿದ್ದರು. ಅರ್ಪಿತಾ ಪ್ರತಾಪ್‍ಸಿಂಹ, ಪ್ರಾಂಶುಪಾಲ ಡಾ.ನಾಗರಾಜು ಇದ್ದರು.

ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ನಡೆಯಿತು. ನಿವೃತ್ತ ಪ್ರಾಂಶುಪಾಲ ಎಚ್.ಎಸ್.ಮಲ್ಲಿಕಾರ್ಜುನ ಶಾಸ್ತ್ರಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಟಿ.ರಂಗಪ್ಪ, ಸಂಯೋಜನಾಧಿಕಾರಿ ಕಾಂತಿನಾಯಕ್, ಮುಖ್ಯ ಶಿಕ್ಷಕಿ ಝರೀನಾ ಬಾಬುಲ್ ಹಾಜರಿದ್ದರು.

ವಿಜಯ ವಿಠಲ ಕಾಲೇಜಿನಲ್ಲಿ ಶಿಕ್ಷಕ ದಿನಾಚರಣೆ ಅಂಗವಾಗಿ ಕೌಟಿಲ್ಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಾಗೂ ಪ್ರಾಚಾರ್ಯರಾದ ಡಾ.ಎಲ್.ಸವಿತಾ ಅವರನ್ನು ಸನ್ಮಾನಿಸಲಾಯಿತು.

ವಿಜಯ ವಿಠಲ ವಿದ್ಯಾಸಂಸ್ಥೆಗಳ ಕೋಶಾಧ್ಯಕ್ಷ ರವಿಕುಮಾರ್ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಚಾರ್ಯರಾದ ಸತ್ಯಪ್ರಸಾದ್, ಪ್ರಾಂಶುಪಾಲರಾದ ಎಸ್.ಪಿ ಆಶಾ ಉಪಸ್ಥಿತರಿದ್ದರು.

ಅನಘ ಪುರೋಹಿತ್ ಪ್ರಾರ್ಥಿಸಿ, ತನ್ಮಯಿ ನಿರೂಪಿಸಿದರೆ, ಉನ್ನತಿ ಅತಿಥಿಗಳನ್ನು ಸ್ವಾಗತಿಸಿದರು. ವಿಖ್ಯಾತ್ ವಂದಿಸಿದರು. ಅನಿರುದ್ಧ್ ಜೋಶಿ ಶಿಕ್ಷಕರ ದಿನಾಚರಣೆಯ ಮಹತ್ವ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT