ಭಾರತದ ಸುಂಕ ನೀತಿಗೆ ಟ್ರಂಪ್‌ ಟೀಕೆ

7

ಭಾರತದ ಸುಂಕ ನೀತಿಗೆ ಟ್ರಂಪ್‌ ಟೀಕೆ

Published:
Updated:

ವಾಷಿಂಗ್ಟನ್‌ (ಪಿಟಿಐ): ‘ಭಾರತವು ಅಮೆರಿಕದ ಸರಕುಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸುತ್ತಿದೆ’ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿದ್ದಾರೆ.

ವಿದೇಶಿ ಉತ್ಪನ್ನಗಳ ಆಮದಿನ ಮೇಲೆ ಸುಂಕ ಹೆಚ್ಚಿಸಿರುವುದಕ್ಕೆ ಸಂಬಂಧಿಸಿದ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಭಾರತ, ಚೀನಾ ಮತ್ತು ಯುರೋಪ್‌ ಒಕ್ಕೂಟದ ಜತೆಗಿನ ಅಮೆರಿಕದ ವ್ಯಾಪಾರ ಅಸಮತೋಲನದ ಪ್ರತೀಕಾರಾರ್ಥ ತಾವು ಈ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ.

‘ಅಮೆರಿಕದ ಸರಕುಗಳಿಗೆ ಅನೇಕ ದೇಶಗಳು ಗರಿಷ್ಠ ಪ್ರಮಾಣದಲ್ಲಿ ಸುಂಕ ವಿಧಿಸುತ್ತಿವೆ. ಉದಾಹರಣೆಗೆ ಹೇಳುವುದಾದರೆ ಭಾರತವು ಶೇ 100ರಷ್ಟು ಸುಂಕ ವಿಧಿಸುತ್ತದೆ. ಸುಂಕಗಳನ್ನು ರದ್ದುಪಡಿಸಬೇಕು ಎನ್ನುವುದು ಅಮೆರಿಕದ ನಿಲುವಾಗಿದೆ’ ಎಂದು ಹೇಳಿದ್ದಾರೆ.

‘ಇತ್ತೀಚೆಗೆ ಕೆನಡಾದಲ್ಲಿ ನಡೆದ ‘ಜಿ–7’ ಸಮಾವೇಶದ ಸಂದರ್ಭದಲ್ಲಿ ಆಮದು ಮತ್ತು ರಫ್ತು ವಹಿವಾಟಿಗೆ ಸಂಬಂಧಿಸಿದಂತೆ ಎಲ್ಲ ಸುಂಕ ಮತ್ತು ಅಡೆತಡೆಗಳನ್ನು ಕೈಬಿಡಬೇಕೆಂಬ ನನ್ನ ಸಲಹೆಗೆ ಇದುವರೆಗೆ ಯಾರೊಬ್ಬರೂ ಸಮ್ಮತಿಸಿಲ್ಲ. ಅಮೆರಿಕದಿಂದ ಹಣ ಲೂಟಿ ಮಾಡಲು ಪ್ರತಿಯೊಂದು ದೇಶ ಹವಣಿಸುತ್ತಿದೆ. ಅಮೆರಿಕ ಮತ್ತು ಯುರೋಪ್‌ ಒಕ್ಕೂಟದ ಜತೆಗಿನ ವಿದೇಶ ವ್ಯಾಪಾರದಲ್ಲಿ ಅಮೆರಿಕವು ಅಪಾರ ನಷ್ಟಕ್ಕೆ ಗುರಿಯಾಗಿದೆ. ನಮ್ಮ ಕೃಷಿ ಉತ್ಪನ್ನಗಳಿಗೆ ಐರೋಪ್ಯ ಒಕ್ಕೂಟದ ದೇಶಗಳು ಅಡೆತಡೆ ಒಡ್ಡಿವೆ’ ಎಂದು ಟ್ರಂಪ್‌ ಸುದ್ದಿಗಾರರಿಗೆ ಹೇಳಿದ್ದಾರೆ.

 ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್‌ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಅಮೆರಿಕೆಗೆ ಭೇಟಿ ನೀಡಲಿದ್ದಾರೆ. ಇವರಿಬ್ಬರೂ  ಅಮೆರಿಕದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಮೈಕ್‌ ಪೊಂಪೆವೊ ಮತ್ತು ರಕ್ಷಣಾ ಕಾರ್ಯದರ್ಶಿ ಜೇಮ್ಸ್‌ ಮ್ಯಾಟಿಸ್‌ ಜತೆ ಮಾತುಕತೆ ನಡೆಸಲು ಉದ್ದೇಶಿಸಲಾಗಿತ್ತು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !