ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷೀಯ ಚುನಾವಣೆ: ಮುಸ್ಲಿಂ ಮತದಾರರ ಬೆಂಬಲ ಕೋರಿದ ಬಿಡೆನ್‍

Last Updated 21 ಜುಲೈ 2020, 6:40 IST
ಅಕ್ಷರ ಗಾತ್ರ

ವಾಷಿಂಗ್ಟನ್‍: ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜೋ ಬಿಡೆನ್‍ ಅವರು, ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ ಅವರನ್ನು ಸೋಲಿಸಲು ತಮಗೆ ಬೆಂಬಲ ನೀಡಬೇಕು ಎಂದು ದೇಶದ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

ಮುಸಲ್ಮಾನರ ಮತಗಳ ಕ್ರೋಡೀಕರಣ ಸಂಬಂಧ ಆಯೋಜಿಸಲಾಗಿದ್ದಆನ್‍ಲೈನ್‍ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೇವಲ ಟ್ರಂಪ್‍ ಸೋಲಿಸಲಷ್ಟೇ ನನಗೆ ನಿಮ್ಮ ಮತ ಬೇಕಿಲ್ಲ. ನಾನು ನಿಮ್ಮ ಜೊತೆಗೂಡಿ ಕೆಲಸ ಮಾಡಬೇಕಿದೆ. ನೀತಿ, ತೀರ್ಮಾನಗಳಲ್ಲಿ ನಿಮ್ಮ ಧ್ವನಿಯೂ ಸೇರಬೇಕು ಎಂದು ನಾನು ಬಯಸುತ್ತೇನೆ’ ಎಂದಿದ್ದಾರೆ.

ಮುಸ್ಲಿಂ ಪ್ರಾಬಲ್ಯದ ದೇಶಗಳಿಂದ ಪ್ರಯಾಣಿಕರು ಬರುವುದರ ಮೇಲೆ ಟ್ರಂಪ್‍ ಆಡಳಿತವು ಈಗ ವಿಧಿಸಿರುವ ನಿರ್ಬಂಧವನ್ನು ತೆಗೆದುಹಾಕುವುದಾಗಿ ಬಿಡೆನ್ ಭರವಸೆ ನೀಡಿದರು.

ಕಾರ್ಯಕ್ರಮ ಆಯೋಜಿಸಿದ್ದ ಎಂಗೇಜ್‍ ಆ್ಯಕ್ಷನ್‍ ಸಂಘಟನೆಯ ಸಿಇಒ ವ್ಯಾಲ್ ಅಲ್‍ಜಯಾತ್ ಅವರು, ಕಾರ್ಯಕ್ರಮ ಬೆಂಬಲಿಸಿ ಹೆಚ್ಚಿನ ಸಂಖ‍್ಯೆಯಲ್ಲಿ ಮುಸಲ್ಮಾನರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

2016ರ ಚುನಾವಣೆಯಲ್ಲಿ ಟ್ರಂಪ್ ಪರವಾಗಿ ಅತ್ಯಧಿಕ ಮತ ಚಲಾವಣೆಯಾಗಿದ್ದ ಮಿಷಿಗನ್‍ನಲ್ಲಿಯೇ ಸುಮಾರು ಒಂದೂವರೆ ಲಕ್ಷ ಮುಸ್ಲಿಮರು ನೋಂದಣಿ ಮಾಡಿಕೊಂಡಿದ್ದಾರೆ. ಹಲವು ಚುನಾಯಿತ ಮುಸ್ಲಿಂ ಜನಪ್ರತಿನಿಧಿಗಳು ಬಿಡೆನ್‍ ಅವರನ್ನು ಬೆಂಬಲಿಸಿದ್ದಾರೆ ಎಂದೂ ಅವರು ಹೇಳಿದರು.

ಹಸ್ತಕ್ಷೇಪ ವಿರುದ್ಧ ಎಚ್ಚರಿಕೆ:ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ, ಚೀನಾ, ಇರಾನ್‍ ಸೇರಿದಂತೆ ಇತರೆ ವಿದೇಶಿ ಶಕ್ತಿಗಳು ಯಾವುದೇ ರೀತಿಯ ಹಸ್ತಕ್ಷೇಪ ಮಾಡಬಾರದು ಎಂದು ಬಿಡೆನ್‍ ಎಚ್ಚರಿಸಿದ್ದಾರೆ. ಹಸ್ತಕ್ಷೇಪ ತಡೆಯುವ ಮಾರ್ಗವೆಂದರೆ ಅಂಥ ಯತ್ನಗಳನ್ನು ಬಹಿರಂಗಪಡಿಸುವುದೇ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಸೋಮವಾರ ಕಾರ್ಯಕ್ರಮವೊಂದರಲ್ಲಿ ಈ ಎಚ್ಚರಿಕೆ ನೀಡಿದ 77 ವರ್ಷದ ಬಿಡೆನ್, ತಾವು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ. ತಮಗೂ ಗುಪ್ತದಳದ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.

‘2016, 2018ರಲ್ಲಿ ಗಮನಿಸಿದ್ದೆವು. ಈಗ ನೋಡುತ್ತಿದ್ದೇವೆ. ರಷ್ಯಾ, ಚೀನಾ, ಇರಾನ್ ಮತ್ತು ಇತರೆ ವಿದೇಶಿ ಶಕ್ತಿಗಳು ಹಸ್ತಕ್ಷೇಪ ಮಾಡುವ ಯತ್ನ ಮುಂದುವರಿಸುತ್ತಿವೆ. ನಾವು ಇದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT