ಶುಕ್ರವಾರ, ಜುಲೈ 30, 2021
23 °C

ಹಾಂಗ್‌ಕಾಂಗ್‌ ತೊರೆಯುತ್ತಿರುರುವ ಪ್ರಜೆಗಳು? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಂಗ್‌ಕಾಂಗ್ (ರಾಯಿಟರ್ಸ್‌/ಪಿಟಿಐ)‌: ಚೀನಾದ ಅರೆಸ್ವಾಯತ್ತ ಪ್ರದೇಶವಾದ ಹಾಂಗ್‌ಕಾಂಗ್‌ ನಗರದ ಮೇಲೆ, ಚೀನಾಗೆ ಹೆಚ್ಚಿನ ಹಿಡಿತ ಸಾಧಿಸಲು ಅನುವು ಮಾಡಿಕೊಡುವ ನೂತನ ಭದ್ರತಾ ಕಾನೂನು ನಗರವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಹಲವರು ಹಾಂಗ್‌ಕಾಂಗ್‌ ತೊರೆಯಲು ಮುಂದಾಗಿದ್ದಾರೆ. ಇಲ್ಲಿನ ಜನರಿಗೆ ಆಶ್ರಯ ಮತ್ತು ಪೌರತ್ವ ನೀಡಲು ಹಲವು ದೇಶಗಳು ಮುಂದೆ ಬಂದಿವೆ. ಇದು ಚೀನಾದ ಆಕ್ರೋಶಕ್ಕೆ ಕಾರಣವಾಗಿದೆ.

ಹಾಂಗ್‌ಕಾಂಗ್‌ನ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯಿಂದಾಗಿಯೇ ಈ ನಗರ ವ್ಯಾಪಾರ ಕೇಂದ್ರವಾಗಿ ರೂಪುಗೊಳ್ಳಲು ಸಾಧ್ಯವಾಗಿದೆ ಎಂಬ ವಾದ ಇದೆ. ಆದರೆ, ಚೀನಾದ ನೂತನ ಕಾನೂನು, ಈ ವ್ಯವಸ್ಥೆಯನ್ನು ಬದಿಗೆ ಸರಿಸುತ್ತದೆ ಮತ್ತು ಚೀನಾದ ಪೊಲೀಸರು ಹಾಂಗ್‌ಕಾಂಗ್‌ನಲ್ಲಿಮುಕ್ತವಾಗಿ ಅಧಿಕಾರ ಚಲಾಯಿಸಲು ಅವಕಾಶ ಮಾಡಿಕೊಡುತ್ತದೆ. ಇದು ಇಲ್ಲಿನ ನಿವಾಸಿಗಳ ಆತಂಕಕ್ಕೆ ಕಾರಣ
ವಾಗಿದೆ. ಪ್ರಜಾಪ್ರಭುತ್ವದ ಪರವಾಗಿ ಹಾಂಗ್‌ಕಾಂಗ್‌ನಲ್ಲಿ ಒಂದು ವರ್ಷದಿಂದ ನಡೆಯುತ್ತಿರುವ ಭಾರಿ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದಲೇ ಚೀನಾ ಈ ಕಾನೂನು ಜಾರಿಗೆ ತಂದಿದೆ ಎಂದು ವಿಶ್ಲೇಷಿಸಲಾಗಿದೆ.

‘ಈ ನೂತನ ಕಾನೂನನ್ನು ಸರ್ವಾಧಿಕಾರದಂತೆ ಹೇರಲಾಗುತ್ತಿದೆ. ಇದು ಜನರ ಮೂಲಭೂತ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರತಿಭಟಿಸುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಿದೆ. ಈ ಕಾನೂನಿನ ವಿರುದ್ಧ ಪ್ರತಿಭಟಿಸಿದ ನಾಲ್ವರನ್ನು ಈಗಾಗಲೇ ಬಂಧಿಸಲಾಗಿದೆ’ ಎಂದು ಹಾಂಗ್‌ಕಾಂಗ್‌ ವಕೀಲರ ಸಂಘವು ಕಳವಳ ವ್ಯಕ್ತಪಡಿಸಿದೆ.

‘ಹಾಂಗ್‌ಕಾಂಗ್‌ನಲ್ಲಿ ಬಂಧಿಸಲಾದವರನ್ನು ಚೀನಾಗೆ ಕರೆದೊಯ್ಯಲು ಅಲ್ಲಿನ ಪೊಲೀಸರಿಗೆ ಈ ಕಾನೂನು ಅವಕಾಶ ಮಾಡಿಕೊಡುತ್ತದೆ. ಇಲ್ಲಿನ ನ್ಯಾಯಾಂಗವೂ ಇದನ್ನು ತಡೆಯಲು ಸಾಧ್ಯವಿಲ್ಲ. ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದ್ದವರು, ಇನ್ನು ಮುಂದೆ ಚೀನಾದ ಕಮ್ಯುನಿಸ್ಟ್ ಸರ್ಕಾರದ ಅಧೀನದಲ್ಲಿ ಇರುವ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಚಾರಣೆ ಎದುರಿಸ ಬೇಕಾಗುತ್ತದೆ. ಇಲ್ಲಿನ ನಿವಾಸಿಗಳ ಆತಂಕಕ್ಕೆ ಇದೇ ಕಾರಣ’ ಎಂದು ವಕೀಲರ ಸಂಘವು ಹೇಳಿದೆ.

ಕಾನೂನು ಜಾರಿಯಾದ ಬೆನ್ನಲ್ಲೇ ಹಾಂಗ್‌ಕಾಂಗ್‌ ನಿವಾಸಿಗಳಲ್ಲಿ ಹಲವರು ನಗರವನ್ನು ತೊರೆಯಲು ಮುಂದಾಗಿದ್ದಾರೆ. ಹಾಂಗ್‌ಕಾಂಗ್‌‌ ಉದ್ಯಮಿಗಳು ಬೇರೆ ದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಹಾಂಗ್‌ಕಾಂಗ್‌ ತೊರೆಯಲು ಬಯಸುವವರಿಗೆ ತಮ್ಮಲ್ಲಿ ಆಶ್ರಯ ನೀಡುತ್ತೇವೆ ಮತ್ತು ಪೌರತ್ವ ನೀಡುತ್ತೇವೆ ಎಂದು ಬ್ರಿಟನ್, ಆಸ್ಟ್ರೇಲಿಯ ಹಾಗೂ ತೈವಾನ್‌ ಹೇಳಿವೆ. ಇದಕ್ಕೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು