ಭಾನುವಾರ, ಆಗಸ್ಟ್ 1, 2021
26 °C

Covid-19 World Update: ಬ್ರಿಟನ್ ಶಾಲೆಗಳು ಸೆಪ್ಟೆಂಬರ್‌ನಿಂದ ಆರಂಭ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ವಿಶ್ವದ ವಿವಿಧೆಡೆ ಕೊರೊನಾ ವೈರಸ್ ಸೋಂಕಿತರ ಒಟ್ಟು ಸಂಖ್ಯೆ 1.08 ಕೋಟಿ ದಾಟಿದೆ. ಈವರೆಗೆ 5.20 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಸೋಂಕು ದೃಢಪಟ್ಟು ಚೇತರಿಸಿಕೊಂಡವರ ಸಂಖ್ಯೆ 60 ಲಕ್ಷ ದಾಟಿದೆ.

ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಪರಿಸ್ಥಿತಿ ಸದ್ಯಕ್ಕೆ ಸುಧಾರಿಸುವ ಲಕ್ಷಣ ಕಾಣಿಸುತ್ತಿಲ್ಲ. ಜಾಗತಿಕ ಪ್ರವಾಸೋದ್ಯಮ ಆದಾಯ 3.3 ಲಕ್ಷ ಕೋಟಿಗೆ ಇಳಿಯುವ ಅಪಾಯವಿದೆ. ಈ ನಷ್ಟದ ಸಿಂಹಪಾಲು ಅಮೆರಿಕಕ್ಕೆ ಸೇರುತ್ತದೆ ಎಂದು ವಿಶ್ವಸಂಸ್ಥೆಯ ಅಧ್ಯಯನವೊಂದು ಬಹಿರಂಗಪಡಿಸಿದೆ.

ಅಮೆರಿಕದಲ್ಲಿ ಈವರೆಗೆ 1.30 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಒಟ್ಟು ಸಂಖ್ಯೆ 27.83 ಲಕ್ಷಕ್ಕೆ ಏರಿದೆ. ಅಮೆರಿಕ ನಂತರದ ಸ್ಥಾನದಲ್ಲಿ ಬ್ರೆಜಿಲ್ ಇದೆ. ಬ್ರೆಜಿಲ್‌ನಲ್ಲಿ ಒಟ್ಟು 14.56 ಲಕ್ಷ ಮಂದಿ ಸೋಂಕಿತರಿದ್ದಾರೆ. 60,813 ಮಂದಿ ಮೃತಪಟ್ಟಿದ್ದಾರೆ. ಜಾಗತಿಕ ಕೊರೊನಾ ವೈರಸ್‌ ಪಟ್ಟಿಯಲ್ಲಿ ರಷ್ಯಾ 3ನೇ ಸ್ಥಾನದಲ್ಲಿದ್ದರೆ (6.61 ಲಕ್ಷ ಸೋಂಕಿತರು, 9,683 ಸಾವು), ಭಾರತ 4ನೇ ಸ್ಥಾನದಲ್ಲಿದೆ (6.12 ಲಕ್ಷ ಸೋಂಕಿತರು, 17,996 ಸಾವು).

ಈ ಹಿಂದೆ ಕೊರೊನಾ ಸೋಂಕಿನಿಂದ ಹೈರಾಣಾಗಿದ್ದ ಬ್ರಿಟನ್, ಸ್ಪೇನ್‌, ಪೆರು, ಚಿಲಿ ಮತ್ತು ಇಟಲಿಗಳಲ್ಲಿ ಪರಿಸ್ಥಿತಿ ಕ್ರಮೇಣ ಸುಧಾರಿಸುತ್ತಿದೆ. ಪಾಕಿಸ್ತಾನದಲ್ಲಿ ಈವರೆಗೆ 2.17 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 4,473 ಮಂದಿ ಮೃತಪಟ್ಟಿದ್ದಾರೆ.


ಜುಲೈ 2ರಂದು ರಾತ್ರಿ 9.30ರ ಅಂಕಿಅಂಶ. ಮಾಹಿತಿ: worldometers.info

ಸೆಪ್ಟೆಂಬರ್‌ನಿಂದ ಬ್ರಿಟನ್‌ನಲ್ಲಿ ಶಾಲೆ ಆರಂಭ

ಇಂಗ್ಲೆಂಡ್‌ನ ಎಲ್ಲ ಶಾಲೆಗಳನ್ನು ಸೆಪ್ಟೆಂಬರ್‌ ತಿಂಗಳಲ್ಲಿ ಕಡ್ಡಾಯವಾಗಿ ಆರಂಭಿಸುವುದಾಗಿ ಸರ್ಕಾರ ಘೋಷಿಸಿದೆ. ಶಾಲೆಗಳಲ್ಲಿ ಅಂತರ ಕಾಪಾಡಿಕೊಳ್ಳುವುದು, ಸ್ವಚ್ಛತೆ ನಿರ್ವಹಿಸುವುದು ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಂಡಿದೆ. 

'ಕಳೆದ 3 ತಿಂಗಳು ನಮ್ಮ ಶಿಕ್ಷಣ ವ್ಯವಸ್ಥೆ ಅತ್ಯಂತ ಕಷ್ಟದ ದಿನಗಳನ್ನು ಕಂಡಿದೆ. ಕ್ಲಾಸ್‌ರೂಂಗಳ ಸ್ಥಾನವನ್ನು ಬೇರೆ ಯಾವುದೂ ತುಂಬಲು ಸಾಧ್ಯವಿಲ್ಲ. ಈಗಾಗಲೇ 15 ಲಕ್ಷ ಮಕ್ಕಳು ಶಿಕ್ಷಣ ಸಂಸ್ಥೆಗಳಿಗೆ ಬರುತ್ತಿದ್ದಾರೆ. ಉಳಿದ ಮಕ್ಕಳೂ ಸೆಪ್ಟೆಂಬರ್‌ನಿಂದ ಶಾಲೆಗಳಿಗೆ ಬರುವಂತಾಗಬೇಕು' ಎಂದು ಬ್ರಿಟನ್‌ನ ಶಿಕ್ಷಣ ಕಾರ್ಯದರ್ಶಿ ಗಾವಿನ್ ವಿಲಿಯಮ್‌ಸನ್ ಹೇಳಿದ್ದಾರೆ.

ಅಮೆರಿಕ: ಒಂದು ದಿನದ ಅತ್ಯಧಿಕ ಹೆಚ್ಚಳ

ಅಮೆರಿಕದಲ್ಲಿ ಒಂದೇ ದಿನ 50,700 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ದೇಶದ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಆರ್ಥಿಕ ಕುಸಿತ ತಡೆಗಟ್ಟಲೆಂದು ಲಾಕ್‌ಡೌನ್ ನಿರ್ಬಂಧ ಸಡಿಲಿಸಿದ ನಂತರ ಸೋಂಕಿನ ಪ್ರಮಾಣ ಹಿಡಿತ ಹೆಚ್ಚಾಗುತ್ತಿದೆ.

ಸೋಂಕು ವ್ಯಾಪಿಸುವುದನ್ನು ತಡೆಯಲೆಂದು ಕ್ಯಾಲಿಫೋರ್ನಿಯಾ ರಾಜ್ಯವು ಬಾರ್‌, ಥಿಯೇಟರ್‌ ಮತ್ತು ಹೊಟೆಲ್‌ಗಳಲ್ಲಿ ಊಟ ಮಾಡುವುದನ್ನು ನಿಷೇಧಿಸಿದೆ. ಅಮೆರಿಕ ಪ್ರಜೆಗಳು ಪರಸ್ಪರ ಅಂತರ ಕಾಪಾಡಿಕೊಳ್ಳಲು ವಿಫಲರಾಗಿದ್ದು ಮತ್ತು ಮಾಸ್ಕ್ ಬಳಸಲು ನಿರ್ಲಕ್ಷ್ಯ ತೋರಿದ್ದು ಸೋಂಕು ಹೆಚ್ಚಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು