ಗುರುವಾರ , ಆಗಸ್ಟ್ 6, 2020
24 °C

Covid-19 World Update| ಅಮೆರಿಕದಲ್ಲಿ ಒಂದೇ ದಿನ 52,000 ಮಂದಿಗೆ ಸೋಂಕು ದೃಢ 

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಕೊರೊನಾ ವೈರಸ್‌ನ ದಾಳಿಗೆ ತತ್ತರಿಸಿರುವ ಅಮೆರಿಕದಲ್ಲಿ ಬುಧವಾರ ರಾತ್ರಿಗೆ ಅಂತ್ಯಗೊಂಡಂತೆ 24 ಗಂಟೆಗಳಲ್ಲಿ 52 ಸಾವಿರ ಮಂದಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಈ ಮೂಲಕ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 26,83,894ಕ್ಕೆ ಏರಿಕೆಯಾಗಿದೆ. 

ಈ ಹಿಂದೆ ಬ್ರೆಜಿಲ್‌ ಮೊದಲ ಬಾರಿಗೆ 24 ಗಂಟೆಗಳಲ್ಲಿ 50 ಸಾವಿರ ಸೋಂಕು ಪ್ರಕರಣಗಳನ್ನು ಕಂಡಿತ್ತು. ಅದಾದ ನಂತರ ಈಗ ಅಮೆರಿಕ ಕೂಡ ಇಂಥದ್ದೇ ದಾಖಲೆ ಬರೆದಿದೆ. ಇನ್ನೊಂದೆಡೆ ದೇಶದಲ್ಲಿ ಒಂದೇ ದಿನದಲ್ಲಿ 706 ಮರಣ ಸಂಭವಿಸಿದೆ. ಹೀಗಾಗಿ ಸಾವಿನ ಸಂಖ್ಯೆ 1,28,028ಕ್ಕೆ ಏರಿಕೆಯಾಗಿದೆ. 

ಅಮೆರಿಕದ ಹ್ಯೂಸ್ಟನ್‌, ಟೆಕ್ಸಾಸ್‌, ಫೋನಿಕ್ಸ್‌, ಹರಿಜೋನಾದಲ್ಲಿ ಆಸ್ಪತ್ರೆಗೆ ಸೇರುವವರ ಸಂಖ್ಯೆಯೂ ತೀವ್ರಗತಿಯಲ್ಲಿ ಏರುತ್ತಿದೆ.

ಬ್ರೆಜಿಲ್‌ನಲ್ಲಿ ಸೋಂಕು ಏರುತ್ತಿದ್ದರೂ ಬಾರ್‌ ಜಿಮ್‌ಗಳಿಲ್ಲ ನಿರ್ಬಂಧ 

ಲ್ಯಾಟಿನ್‌ ಅಮೆರಿಕ ರಾಷ್ಟ್ರ ಬ್ರೆಜಿಲ್‌ನಲ್ಲಿ ಕೊರೊನಾ ವೈರಸ್‌ ಅಮೆರಿಕದ ರೀತಿಯಲ್ಲೇ ಉಲ್ಬಣಗೊಂಡಿದೆ. 14,48,753 ಸೋಂಕು ಪ್ರಕರಣಗಳಲ್ಲಿ 60,632 ಮಂದಿ ಮೃತಪಟ್ಟಿದ್ದಾರೆ. ಇದರ ನಡುವೆಯೇ, ಬ್ರೆಜಿಲ್‌ ಒಂದೇ ದಿನದಲ್ಲಿ 50 ಸಾವಿರ ಸೋಂಕು ಪ್ರಕರಣಗಳನ್ನು ಕಂಡ ಮೊದಲ ರಾಷ್ಟ್ರ ಎಂಬ ಕುಖ್ಯಾತಿಗೂ ಪಾತ್ರವಾಗಿತ್ತು.  ಹೀಗಿದ್ದರೂ, ಬ್ರೆಜಿಲ್‌ನಲ್ಲಿ ಜನರ ಓಡಾಟ, ಒಡನಾಟಕ್ಕೇನೂ ತೊಂದರೆಯಾಗಿಲ್ಲ. ದೇಶದಲ್ಲಿ ಲಾಕ್‌ಡೌನ್‌ ಕ್ರಮಗಳನ್ನು ಸೂಕ್ತ ರೀತಿಯಲ್ಲಿ ಪಾಲಿಸುತ್ತಿಲ್ಲ ಎಂದು ಜನರೇ ಸರ್ಕಾರವನ್ನು ದೂಷಿಸುತ್ತಿರುವ ನಡುವೆಯೇ ಸರ್ಕಾರ ಬಾರ್‌, ಜಿಮ್‌, ರೆಸ್ಟೋರೆಂಟ್‌ಗಳನ್ನು ತೆರೆಯಲು ಬುಧವಾರ ಅನುವು ಮಾಡಿಕೊಟ್ಟಿದೆ. 

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಕೋವಿಡ್‌ ಉಲ್ಬಣ 

ನೆರೆಯ ಪಾಕಿಸ್ತಾನದಲ್ಲೂ ಕೊರೊನಾ ವೈರಸ್‌ ದಿನೇ ದಿನೇ ಹೆಚ್ಚುತ್ತಿದೆ. ಸದ್ಯ ಅಲ್ಲಿ 2,16,097 ಮಂದಿಗೆ ಸೋಂಕು ತಗುಲಿದೆ. 4,446 ಮಂದಿ ಸಾವಿಗೀಡಾಗಿದ್ದಾರೆ.  ಪಾಕಿಸ್ತಾನದ ಸಿಂದ್‌ ಪ್ರಾಂತ್ಯವು ವೈರಸ್‌ನಿಂದ ಅತಿ ಹೆಚ್ಚು ಭಾದಿತಗೊಂಡಿದ್ದು, ಈ ವರೆಗೆ 86,795 ಪ‍್ರಕರಣಗಳು ಆ ಪ್ರದೇಶವೊಂದರಿಂದಲೇ ವರದಿಯಾಗಿದೆ. ಹೀಗಾಗಿ ಅಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಜುಲೈ–16ರ ವರೆಗೆ ಅಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಿಸಲಾಗಿದೆ. 

ರಷ್ಯಾವನ್ನು ಮೀರಿಸಲಿದೆಯೇ ಭಾರತ? 

ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕಿಂತಲೂ ಮುಂದಿರುವ (ಮೂರನೇ ಸ್ಥಾನ) ರಷ್ಯಾದಲ್ಲಿ ಕಳೆದ 24 ಗಂಟೆಗಳಲ್ಲಿ 6,556 ಸೋಂಕು ಪ್ರಕರಣಗಳು  ಮತ್ತು 216 ಸಾವಿನ ಪ್ರಕರಣಗಳು ವರದಿಯಾಗಿವೆ. 

ರಷ್ಯಾಕ್ಕಿಂತಲೂ ಒಂದು ಸ್ಥಾನ ಹಿಂದಿರುವ ಭಾರತದಲ್ಲಿ ಒಂದೇ ದಿನ 19,428 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಭಾರತದಲ್ಲಿ ರಷ್ಯಾಕ್ಕಿಂತಲೂ ವೇಗವಾಗಿ ಸೋಂಕು ಹರಡುತ್ತಿದೆ. 

ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 6,53,479 ಆಗಿದ್ದರೆ, ಭಾರತದಲ್ಲಿ 5,85,493 ಮಂದಿಗೆ ಸೋಂಕು ತಗುಲಿದೆ. ಭಾರತಕ್ಕೆ ಹೋಲಿಸಿಕೊಂಡರೆ ರಷ್ಯಾದ ಸಾವಿನ ಸಂಖ್ಯೆಯೂ ಕಡಿಮೆ ಇದೆ. 6.5 ಲಕ್ಷ ಮಂದಿ ಸೋಂಕಿತರ ಪೈಕಿ ರಷ್ಯಾದಲ್ಲಿ ಮರಣ ಹೊಂದಿರುವವರು 9,521 ಮಂದಿ. 5.8 ಲಕ್ಷ ಸೋಂಕಿತರ ಪೈಕಿ ಭಾರತದಲ್ಲಿ ಮರಣ ಹೊಂದಿರುವವರು 17,400 ಮಂದಿ. 

ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ವಿಶ್ವದ ಐದು ರಾಷ್ಟ್ರಗಳು 

  1. ಅಮೆರಿಕ–26,83,894 
  2. ಬ್ರೆಜಿಲ್‌–14,48,753 
  3. ರಷ್ಯಾ–6,53,479 
  4. ಭಾರತ–5,85,493 
  5. ಬ್ರಿಟನ್‌–3,14,992 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು