ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ವಿಚಾರಗಳಿಗೆ ನಿಷೇಧ: ಫೇಸ್‌ಬುಕ್‌

Last Updated 27 ಜೂನ್ 2020, 9:57 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ತಮ್ಮ ಮಾಧ್ಯಮದಲ್ಲಿ ‘ದ್ವೇಷ ವಿಷಯ’ಗಳ ಪ್ರಸರಣವನ್ನು ನಿಷೇಧಿಸುವುದಾಗಿ ಸಾಮಾಜಿಕ ಮಾಧ್ಯಮ ಸಂಸ್ಥೆ ‘ಫೇಸ್‌ಬುಕ್‌’ನ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್‌ ಜುಕರ್‌ಬರ್ಗ್‌ ಹೇಳಿದ್ದಾರೆ. ದ್ವೇಷ ಬಿತ್ತುವ ವಿಚಾರಗಳ ಪ್ರಸಾರವನ್ನು ನಿಗ್ರಹಿಸುವಂತೆ ಹೆಚ್ಚುತ್ತಿರುವ ಒತ್ತಡಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

‘ವೇದಿಕೆಯ ನಿಯಮಗಳನ್ನು ಉಲ್ಲಂಘಿಸುವ ಆದರೆ, ‘ಸುದ್ದಿಯಾಗಬಲ್ಲಂಥ’ ಪೋಸ್ಟ್‌ಗಳಿಗೆ ಟ್ವಿಟರ್‌ ಮಾದರಿಯಲ್ಲಿ ಫೇಸ್‌ಬುಕ್‌ನಲ್ಲೂ ಟ್ಯಾಗ್‌ ನೀಡಲಾಗುವುದು’ ಎಂದು ಅವರು ತಿಳಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕೆಲವು ಟ್ವೀಟ್‌ಗಳಿಗೆ ಟ್ವಿಟರ್‌ ಸಂಸ್ಥೆಯು ಇತ್ತೀಚೆಗೆ ಇಂಥ ಟ್ಯಾಗ್‌ ನೀಡಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹಾಗೂ ತಾರತಮ್ಯದ ವಿಷಯಗಳನ್ನು ಪ್ರಸಾರ ಮಾಡುವ ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನಕಾರರು ಹಲವು ದಿನಗಳಿಂದ ಒತ್ತಾಯ ಮಾಡುತ್ತಲೇ ಇದ್ದರು. ಇತ್ತೀಚೆಗೆ ಕೆಲವು ಕಂಪನಿಗಳೂ ಇವರಿಗೆ ಬೆಂಬಲ ಸೂಚಿಸಿ, ಇಂಥವರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಜಾಹೀರಾತುಗಳನ್ನು ನೀಡುವುದಿಲ್ಲ ಎಂದು ನಿಷೇಧ ಹೇರಿದ್ದವು. ಕೋಕ ಕೋಲ, ಯುನಿಲಿವರ್‌ನಂಥ ದೈತ್ಯ ಸಂಸ್ಥೆಗಳೂ ಇತ್ತೀಚೆಗೆ ಇಂಥ ತೀರ್ಮಾನ ಕೈಗೊಂಡಿದ್ದವು. ಇದಾಗುತ್ತಿದ್ದಂತೆಯೇ ಫೇಸ್‌ಬುಕ್‌ ಸಂಸ್ಥೆ ಈ ಹೆಜ್ಜೆಯನ್ನಿಟ್ಟಿದೆ.

‘ಒಂದು ಸಮುದಾಯ, ಜನಸಮೂಹ, ವಲಸಿಗರು, ಯಾವುದೋ ದೇಶದವರು, ಒಂದು ಧರ್ಮ ಅಥವಾ ಒಂದು ಜಾತಿಯ ಜನರು ಇತರರ ಜೀವಕ್ಕೆ ಅಪಾಯಕಾರಿಯಾಗಿದ್ದಾರೆ ಎಂಬ ಸಂದೇಶ ನೀಡುವಬಂಥ ಜಾಹೀರಾತುಗಳನ್ನು ನಿಷೇಧಿಸಲಾಗುವುದು. ವಲಸಿಗರು, ನಿರಾಶ್ರಿತರು ಮತ್ತು ಆಶ್ರಯ ಬಯಸಿ ಇನ್ನೊಂದು ದೇಶಕ್ಕೆ ಬರುವ ಜನರ ಗೌರವದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಲಾಗುವುದು’ ಎಂದು ಜುಕರ್‌ಬರ್ಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT