ಮಂಗಳವಾರ, ಆಗಸ್ಟ್ 3, 2021
28 °C
ನ. 3ರಂದು ಚುನಾವಣೆ - ತಪ್ಪುಮಾಹಿತಿ ಪ್ರಸಾರದಿಂದ ತೊಂದರೆ ಎಚ್ಚರಿಕೆ

ಅಧ್ಯಕ್ಷೀಯ ಚುನಾವಣೆಯಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ: ಬೆದರಿಕೆ

ಎಪಿ Updated:

ಅಕ್ಷರ ಗಾತ್ರ : | |

prajavani

ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷರ ಆಯ್ಕೆಗೆ ನವೆಂಬರ್‌ 3ರಂದು ಚುನಾವಣೆ ನಡೆಯಲಿದ್ದು, ಚುನಾವಣೆ ಪ್ರಕ್ರಿಯೆಗೆ ವಿದೇಶಿ ಶಕ್ತಿಗಳಿಂದ ಬೆದರಿಕೆ ಇರುವುದಾಗಿ ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ.

ದೇಶದ ಚುನಾವಣಾ ವ್ಯವಸ್ಥೆ, ಮೂಲಸೌಕರ್ಯಗಳ ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಳ್ಳುವಂತೆ ವಿದೇಶಿ ಶಕ್ತಿಗಳು ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿಯನ್ನು ಪುಸಲಾಯಿಸುವ ಸಾಧ್ಯತೆ ಬಗ್ಗೆಯೂ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

ಜನರಿಗೆ ತಪ್ಪು ಮಾಹಿತಿ ನೀಡುವುದು, ಮತದಾರರಲ್ಲಿ ಗೊಂದಲ ಮೂಡಿಸುವಂತಹ ಕೃತ್ಯಗಳಲ್ಲಿಯೂ ಈ ವಿಚ್ಛಿದ್ರಕಾರಿ ಶಕ್ತಿಗಳು ತೊಡಗುವ ಅಪಾಯ ಇದೆ ಎಂದೂ ಹೇಳಿವೆ.

ಅಮೆರಿಕದಲ್ಲಿ ಚುನಾವಣೆ ಸಮಯದಲ್ಲಿ ನಡೆಯುವ ಪ್ರಚಾರ ಸಭೆಗಳಿಗೆ ಅಡ್ಡಿಪಡಿಸುವುದು, ಬೆದರಿಕೆಯೊಡ್ಡಿದಂತಹ ನಿದರ್ಶನ ಇಲ್ಲ, ಆದರೆ, ಇತ್ತೀಚೆಗೆ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೊ ಬಿಡೆನ್‌ ಅವರ ಪ್ರಚಾರ ಸಭೆ ಅಸ್ತವ್ಯಸ್ತಗೊಂಡಿರುವುದು ಬೆದರಿಕೆ ಇದೆ ಎಂಬುದರ ಸುಳಿವು ನೀಡುತ್ತದೆ. ಹೀಗಾಗಿ ಈ ಕುರಿತ ಎಚ್ಚರಿಕೆ ಸಂದೇಶಗಳನ್ನು ಅಲಕ್ಷಿಸುವಂತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಿಡೆನ್‌ ಅವರ ಪ್ರಚಾರ ಸಭೆಯಲ್ಲಿನ ಗೊಂದಲಕ್ಕೆ ಕಾರಣರಾದವರ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಅವರ ಬೆಂಬಲಿಗರು ನಿರಾಕರಿಸುತ್ತಿದ್ದಾರೆ. ಹೀಗಾಗಿ, ಈ ಬಾರಿಯ ಚುನಾವಣೆಯಲ್ಲಿ ಯಾವ ವಿದೇಶಿ ಶಕ್ತಿಗಳ ಹಸ್ತಕ್ಷೇಪ ಇರಬಹುದು ಎಂಬುದನ್ನು ತ್ವರಿತವಾಗಿ ಪತ್ತೆ ಹಚ್ಚಲು ತೊಡಕಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ.

ಬಿಡೆನ್‌ ಕುಟುಂಬ ಕುರಿತಂತೆ ತಪ್ಪು ಮಾಹಿತಿಯನ್ನು ರಷ್ಯಾ‍ಪರ ಒಲವುಳ್ಳ ಕೆಲವರು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಹಾಗೂ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರಚಾರ ತಂಡಕ್ಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಡೆನ್‌ ಅವರ ರಾಜಕೀಯ ಭವಿಷ್ಯವೇ ಮಸಕಾಗುವಂತಹ ಕೃತ್ಯಗಳಿಗೆ ಈ ವಿದ್ಯಮಾನ ಕಾರಣವಾದರೂ ಅಚ್ಚರಿಪಡಬೇಕಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಆದರೆ, ಬಿಡೆನ್‌ ಹಾಗೂ ಅವರ ಕುಟುಂಬಕ್ಕೆ ಸಂಬಂಧಿಸಿದ ಮಾಹಿತಿಯನ್ನು ವಿದೇಶಿ ಪ್ರಜೆಗಳು ನೀಡಿದ್ದಾರೆಯೇ ಎಂಬ ಪ್ರಶ್ನೆಗೆ ಟ್ರಂಪ್‌ ಪಾಳೆಯ ಉತ್ತರಿಸಲು ನಿರಾಕರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು