ಬುಧವಾರ, ಆಗಸ್ಟ್ 4, 2021
26 °C
ವಿದೇಶಿ ವಿದ್ಯಾರ್ಥಿಗಳ ವಿರುದ್ಧ ಅಮೆರಿಕದಲ್ಲಿ ಹೊಸ ನಿಯಮಾವಳಿ

ಅಮೆರಿಕದಲ್ಲಿ ಹೊಸ ನಿಯಮಾವಳಿ: ಕಾನೂನು ಹೋರಾಟಕ್ಕೆ ಐಟಿ ದಿಗ್ಗಜ ಸಂಸ್ಥೆಗಳ ಬೆಂಬಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ವಿದೇಶಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಅಮೆರಿಕವು ರೂಪಿಸಿದ ಹೊಸ ನಿಯಮಾವಳಿಯನ್ನು ಪ್ರಶ್ನಿಸಿ ಕೆಲವು ವಿಶ್ವವಿದ್ಯಾಲಯಗಳು ಆರಂಭಿಸಿದ ಕಾನೂನು ಹೋರಾಟಕ್ಕೆ ಗೂಗಲ್‌, ಮೈಕ್ರೊಸಾಫ್ಟ್‌, ಫೇಸ್‌ಬುಕ್‌ ಸೇರಿದಂತೆ ದೇಶದ ಹಲವು ಮುಂಚೂಣಿಯ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ.

ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಕ್ಯಾಂಪಸ್‌ನಲ್ಲೇ ಪಾಠಪ್ರವಚನ ಆರಂಭಿಸಬೇಕು. ಅದನ್ನು ಬಿಟ್ಟು ಆನ್‌ಲೈನ್‌ನಲ್ಲಿ ಶಿಕ್ಷಣವನ್ನು ಮುಂದುವರಿಸುವುದಾದರೆ ಅಂಥ ಸಂಸ್ಥೆಗಳಲ್ಲಿರುವ ವಿದೇಶಿ ವಿದ್ಯಾರ್ಥಿಗಳು ತಮ್ಮ ದೇಶಕ್ಕೆ ಮರಳಬೇಕು ಅಥವಾ ಗಡಿಪಾರು ಅನುಭವಿಸಬೇಕಾಗುತ್ತದೆ ಎಂಬ ನಿಯಮವನ್ನು ಅಮೆರಿಕ ಇತ್ತೀಚೆಗೆ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಹಾರ್ವರ್ಡ್‌ ವಿಶ್ವವಿದ್ಯಾಲಯ ಹಾಗೂ ಮೆಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜೀಸ್‌ ಸಂಸ್ಥೆಗಳು ನ್ಯಾಯಾಲಯದ ಮೊರೆಹೋಗಿದ್ದವು.

‘ಇಂಥ ನಿಯಮದಿಂದ ನಮ್ಮ ನೇಮಕಾತಿ ಪ್ರಕ್ರಿಯೆಗೆ ತೊಂದರೆಯಾಗುತ್ತದೆ. ಸಂಸ್ಥೆಗಳ ಕೆಲವು ಯೋಜನೆಗಳಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಪಾಲ್ಗೊಳ್ಳಲು ಸಾಧ್ಯವಾಗದಂತಾಗುತ್ತದೆ. ಮಾತ್ರವಲ್ಲ, ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಪ್ರತಿಭೆಯ ಲಾಭ ಪಡೆಯುವ ಬದಲು, ಅವರನ್ನು ಜಾಗತಿಕ ಮಟ್ಟದ ನಮ್ಮ ಪ್ರತಿಸ್ಪರ್ಧಿ ಕಂಪನಿಗಳಲ್ಲಿ ಕೆಲಸ ಮಾಡುವಂತೆ ಪ್ರೇರೇಪಿಸುವ ಮೂರ್ಖತನವನ್ನು ನಾವು ಮಾಡಿದಂತಾಗುತ್ತದೆ’ ಎಂದು ಈ ಸಂಸ್ಥೆಗಳು ವಾದಿಸಿವೆ.

ವಿದೇಶಿ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿರುವಾಗಲೂ, ಅಧ್ಯಯನ ಮುಗಿಸಿದ ನಂತರವೂ ಅಮೆರಿಕದ ವ್ಯಾಪಾರದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಅಮೆರಿಕದಲ್ಲೇ ಉಳಿದರೆ ಇಲ್ಲಿ ಕೆಲಸ ಮಾಡುತ್ತಾ ಆರ್ಥಿಕತೆಗೆ ಕಾಣಿಕೆ ನೀಡುತ್ತಾರೆ. ಒಂದುವೇಳೆ ತಮ್ಮ ದೇಶಕ್ಕೆ ಮರಳಿದರೂ ಇಲ್ಲಿನ ಕಂಪನಿಗಳ ಗ್ರಾಹಕರಾಗಿ ಉಳಿಯುತ್ತಾರೆ. ಇಂಥವರನ್ನು ದೇಶದಿಂದ ಹೊರಗೆ ಕಳುಹಿಸಿದರೆ ಅರ್ಥ ವ್ಯವಸ್ಥೆಗೆ ಹಾನಿಯಾಗುವುದು ಖಚಿತ ಎಂದು ಈ ಸಂಸ್ಥೆಗಳು ವಾದಿಸಿವೆ.

ಕಾನೂನು ಬಾಹಿರ ಕ್ರಮ: ಟ್ರಂಪ್‌ ಆಡಳಿತದ ಈ ಹೊಸ ನೀತಿಯನ್ನು ವಿರೋಧಿಸಿ ಅಮರಿಕದ 17 ರಾಜ್ಯಗಳು ಸಹ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿವೆ. ‘ಕೊರೊನಾ ಸಂಕಷ್ಟದ ಮಧ್ಯದಲ್ಲಿ ವಿದ್ಯಾರ್ಥಿಗಳನ್ನು ದೇಶದಿಂದ ಹೊರಗಟ್ಟುವುದು ಕ್ರೂರ ಮತ್ತು ಕಾನೂನುಬಾಹಿರ ಕ್ರಮ’ ಎಂದು ಅವು ವಾದಿಸಿವೆ. ಈ ಕಾನೂನಿನ ಜಾರಿಗೆ ತಡೆಯಾಜ್ಞೆ ನೀಡಬೇಕು ಎಂದೂ ಅವು ಒತ್ತಾಯಿಸಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು