ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಎಡಿ ವಿಳಂಬ: ಕೋರ್ಟ್‌ ಮೊರೆಹೋದ ಭಾರತೀಯ ಮಹಿಳೆ

Last Updated 25 ಜುಲೈ 2020, 6:55 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಉದ್ಯೋಗ ದೃಢೀಕರಣ ದಾಖಲೆಗಳನ್ನು ನೀಡುವಲ್ಲಿ ಪೌರತ್ವ ಮತ್ತು ವಲಸೆ ಸೇವೆಗಳ ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಭಾರತೀಯ ಮೂಲದ ಮಹಿಳೆ ರಂಜಿತಾ ಸುಬ್ರಮಣ್ಯ ಎಂಬುವರು ಅಲ್ಲಿನ ಅಧಿಕಾರಿಗಳ ವಿರುದ್ಧ ಒಹಿಯೊ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.

ರಂಜಿತಾ ಅವರು ಎಚ್‌–4 ಡಿಪೆಂಡೆಂಟ್‌ ವೀಸಾ ಹೊಂದಿದ್ದು ಅವರ ಪತಿ ವಿನೋದ್‌ ಸಿನ್ಹ ಎಚ್‌–1ಬಿ ಕೆಲಸದ ವೀಸಾ ಹೊಂದಿದ್ದಾರೆ. ಜೂನ್‌ ತಿಂಗಳಲ್ಲಿ ತನ್ನ ಉದ್ಯೋಗ ದೃಢೀಕರಣ ದಾಖಲೆ (ಇಎಡಿ) ಅವಧಿ ಮುಗಿದಿದ್ದು, ಅದರ ನವೀಕರಣಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಏಪ್ರಿಲ್‌ 7ರಂದು ಇಎಡಿಗೆ ಅನುಮೋದನೆಯೂ ಲಭಿಸಿದೆ. ಆದರೆ ಈವರೆಗೂ ಕೆಲಸ ದೃಢೀಕರಣ ಕಾರ್ಡ್‌ ನೀಡಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ಉದ್ಯೋಗ ದೃಢೀಕರಣ ಕಾರ್ಡ್‌ ಇಲ್ಲದೆ ರಂಜಿತಾ ಅವರು ಕೆಲಸವನ್ನು ಮುಂದುವರಿಸುವಂತಿಲ್ಲ. ಆಗಸ್ಟ್‌ 9ರೊಳಗೆ ಉದ್ಯೋಗ ದೃಢೀಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೊಡದಿದ್ದರೆ ಉದ್ಯೋಗವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಕಂಪನಿಯವರು ಎಚ್ಚರಿಕೆ ನೀಡಿದ್ದಾರೆ’ ಎಂದು ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಎಚ್‌–1ಬಿ ವೀಸಾ ಹೊಂದಿದ ಕುಟುಂಬದವರಿಗೆ ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆಯು ಎಚ್‌–4 ವೀಸಾ ನೀಡುತ್ತದೆ. ಇಂಥವರು ಉದ್ಯೋಗ ದೃಢೀಕರಣ ದಾಖಲೆಗೆ ಅರ್ಜಿ ಸಲ್ಲಿಸಬಹುದು. ಆದರೆ ಸದ್ಯಕ್ಕೆ ಸುಮಾರು 75 ಸಾವಿರ ಇಂಥ ಅರ್ಜಿಗಳ ವಿಲೇವಾರಿ ಬಾಕಿ ಉಳಿದಿವೆ.

ಸಾಮಾನ್ಯವಾಗಿ ಇಎಡಿ ದೃಢೀಕರಣವಾಗಿ 48 ಗಂಟೆಗಳೊಳಗೆ ಅರ್ಜಿದಾರರಿಗೆ ಕಾರ್ಡ್‌ಗಳನ್ನು ಕಳುಹಿಸಿಕೊಡಲಾಗುತ್ತಿತ್ತು. ಇಂಥ ಕಾರ್ಡ್‌ಗಳನ್ನು ಮುದ್ರಿಸುವ ಕೆಲಸವನ್ನು ಹೊರಗುತ್ತಿಗೆ ನೀಡಲಾಗಿತ್ತು. ಆ ಗುತ್ತಿಗೆ ಒಪ್ಪಂದದ ಅವಧಿಯು ಮುಗಿದಿರುವುದರಿಂದ ಕಾರ್ಡ್‌ಗಳ ವಿತರಣೆ ನಿಧಾನವಾಗುತ್ತಿದೆ ಎಂದು ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ಈ ಹಿಂದೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT