ಶನಿವಾರ, ಜುಲೈ 24, 2021
22 °C

ಜಪಾನ್‌ ರಕ್ಷಣಾ ಶ್ವೇತಪತ್ರದಲ್ಲಿ ಚೀನಾ ವಿರುದ್ಧ ತೀವ್ರ ಆಕ್ರೋಶ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಟೋಕಿಯೊ: ಕೊರೊನಾ ವೈರಸ್‌ ಸಾಂಕ್ರಾಮಿಕಗೊಳ್ಳುತ್ತಿರುವ ಮಧ್ಯೆಯೇ ಚೀನಾ ತನ್ನ ಪ್ರಾದೇಶಿಕ ಹಕ್ಕುಗಳ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿರುವುದಾಗಿಯೂ, ಕೋವಿಡ್‌ ಕುರಿತು ತಪ್ಪು ಮಾಹಿತಿ ಹರಡಿ ದಿಕ್ಕುತಪ್ಪಿಸುತ್ತಿರುವುದಾಗಿಯೂ ಜಪಾನ್‌ ಆರೋಪಿಸಿದೆ.

ಜಪಾನ್‌ ತನ್ನ ವಾರ್ಷಿಕ ರಕ್ಷಣಾ ಶ್ವೇತಪತ್ರವನ್ನು ಮಂಗಳವಾರ (ಜುಲೈ–14) ಪ್ರಕಟಿಸಿತು. ಕೊರೊನಾ ವೈರಸ್‌ ಮತ್ತು ಪ್ರದೇಶಿಕತೆ ವಿಚಾರವಾಗಿ ಚೀನಾ ನಡೆದುಕೊಳ್ಳುತ್ತಿರುವ ರೀತಿಯನ್ನು ಜಪಾನ್‌ ಖಂಡಿಸಿದೆ.

‘ಪೂರ್ವ ಚೀನಾ ಸಮುದ್ರ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿನ ಯಥಾಸ್ಥಿತಿಯನ್ನು ಬದಲಾಯಿಸುವ ಪ್ರಯತ್ನವನ್ನು ಚೀನಾ ಮುಂದುವರಿಸಿದೆ. ಸೆನ್ಕಾಕು ದ್ವೀಪಗಳ (ಚೀನೀಯರು ಡಿಯೊಯು ದ್ವೀಪಗಳು ಎನ್ನುತ್ತಾರೆ ) ಸುತ್ತಮುತ್ತಲಿನ ಸಮುದ್ರದಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಏಕಪಕ್ಷೀಯ ಪ್ರಯತ್ನಗಳನ್ನು ಪಟ್ಟುಬಿಡದೆ ಚೀನಾ ಮುಂದುವರೆಸಿದೆ,’ ಎಂದು ಜಪಾನ್‌ ಆರೋಪಿಸಿದೆ.

ಇದು ಗಂಭೀರ ವಿಷಯ ಎಂದು ಜಪಾನ್ ಹೇಳಿದೆ. ಕಳೆದ 30 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಚೀನಾ ಪಾರದರ್ಶಕವಲ್ಲದ ರಕ್ಷಣಾ ಬಜೆಟ್‌ ಅನ್ನು ಮಂಡಿಸುತ್ತಾ ಬಂದಿದೆ ಎಂದು ಶ್ವೇತಪತ್ರದಲ್ಲಿ ಹೇಳಲಾಗಿದೆ.

ಅಮೆರಿಕದ ಭದ್ರತಾ ಪಡೆಗಳು ವುಹಾನ್‌ಗೆ ವೈರಸ್ ತಂದಿರಬಹುದು ಎಂದು ಚೀನಾದ ವಿದೇಶಾಂಗ ಇಲಾಖೆ ಅಧಿಕಾರಿಯೊಬ್ಬರು ಮಾಡಿದ್ದ ಟ್ವೀಟ್‌ ಮತ್ತು ಚೀನಾದ ಗಿಡಮೂಲಿಕೆ ಕೊರೊನಾ ವೈರಸ್‌ಗೆ ಮದ್ದಾಗಬಲ್ಲವು ಎಂಬ ಸುದ್ದಿಗಳನ್ನು ತನ್ನ ರಕ್ಷಣಾ ಶ್ವೇತಪತ್ರದಲ್ಲಿ ಉಲ್ಲೇಖಿಸಿರುವ ಜಪಾನ್‌, ಇದೆಲ್ಲವೂ ಚೀನಾದ ಸುಳ್ಳು ಮಾಹಿತಿಗಳಾಗಿವೆ ಎಂದು ಟೀಕಿಸಲಾಗಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಚಟುವಟಿಕೆಗಳ ಕುರಿತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಇತ್ತೀಚೆಗೆ ಮಾತನಾಡಿದ್ದರು. ಅಲ್ಲಿನ ಸಂಪನ್ಮೂಲವನ್ನು ಕಾನೂನುಬಾಹಿರವಾಗಿ ಚೀನಾ ಅನ್ವೇಷಿಸುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಚೀನಾ ಕೂಡ ತಿರುಗೇಟು ನೀಡಿತ್ತು. ಪಾಂಪಿಯೊ ಹೇಳಿಕೆ ಸಮರ್ಥನೀಯವಲ್ಲ ಎಂದಿತ್ತು.

ಕೊರೊನಾ ವೈರಸ್‌ನಿಂದ ಸೃಷ್ಟಿಯಾಗಿರುವ ಈ ಸನ್ನಿವೇಶವು ಸಾಮಾನ್ಯವಾಗಿ ಮಿಲಿಟರಿ ಸಂಪನ್ಮೂಲಗಳನ್ನು ದೇಶೀಯ ಬಿಕ್ಕಟ್ಟಿನ ಕಡೆಗೆ ತಿರುಗಿಸುತ್ತದೆ. ಆದರೆ ಹೆಚ್ಚಿನ ದೇಶಗಳ ನಡುವೆ ರಕ್ಷಣಾ ಕಾರ್ಯತಂತ್ರದ ಸ್ಪರ್ಧೆಗೂ ಕಾರಣವಾಗಬಹುದು ಎಂದು ಜಪಾನ್‌ ತನ್ನ 596 ಪುಟಗಳ ರಕ್ಷಣಾ ಶ್ವೇತಪತ್ರದಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು